ಮೊನ್ನೆ ಮೊನ್ನೆಯಷ್ಟೇ ಚನ್ನಪಟ್ಟಣಕ್ಕೆ ಪ್ರತಾಪ್ ಸಿಂಹ ಹೆಸರು ತೇಲಿ ಬಂದಿತ್ತು. ಇದೀಗ ಹೊಸ ಗೇಮ್ ಪ್ಲಾನ್ ಶುರುವಾಗಿದೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸದಲ್ಲಿರುವ ಯೋಗೇಶ್ವರ್ ಅವರನ್ನು ಮನವೊಲಿಸಿ, ಮಾತುಕತೆ ನಡೆಸಿ ಅವರಿಗೆ ಕೇಂದ್ರಕ್ಕೆ ಕಳುಹಿಸಿದರೆ ಹೇಗೆ ಎನ್ನುವ ತಂತ್ರಗಾರಿಕೆ ಶುರುವಾಗಿದೆ. ಕೇಂದ್ರದಲ್ಲಿ ನಿಗಮ ಮಂಡಳಿ ಸ್ಥಾನದ ಆಫರ್ ನೀಡಿ, ಯೋಗೇಶ್ವರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕುಮಾರಸ್ವಾಮಿ ಯೋಜನೆ ಎನ್ನಲಾಗಿದೆ. ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಯೋಚನೆ ಕುಮಾರಸ್ವಾಮಿಯವರದ್ದಾಗಿದೆ.
ಯೋಗೇಶ್ವರ್ ವಿಶ್ವಾಸ ಪಡೆದುಕೊಂಡರೆ ನಿಖಿಲ್ ಅಭ್ಯರ್ಥಿ..?
ಇದೂವರೆಗೆ ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿ ಬರುತ್ತಿತ್ತಾದರೂ.. ದೊಡ್ಡಮಟ್ಟದಲ್ಲಿ ಕೇಳಿ ಬಂದಿಲ್ಲ. ಪಕ್ಕದ ರಾಮನಗರದಲ್ಲಿ ಸೋತಿರುವ ನಿಖಿಲ್, ಮಂಡ್ಯ ಲೋಕಸಭೆಯಲ್ಲೂ ಸೋತಿದ್ದವರು. ಇದೀಗ ಯೋಗೇಶ್ವರ್ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಗೆಲ್ಲುವ ಸಾಧ್ಯತೆ ಎಷ್ಟಿದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ ಕುಮಾರಸ್ವಾಮಿ. ಯೋಗೇಶ್ವರ್ ರೆಬಲ್ ಆಗಿಯೇ ಮುಂದವರಿದರೆ ಕಾಂಗ್ರೆಸ್ಸಿಗೆ ಲಾಭ ಎನ್ನುವುದು ಕುಮಾರಸ್ವಾಮಿ ಯೋಜನೆ.
ಇತ್ತ ಯೋಗೇಶ್ವರ್ ಬಿಜೆಪಿ ವರಿಷ್ಠರ ಜತೆಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಟಿಕೆಟ್ಗಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಬಿಜೆಪಿಯಿಂದಲಾದರೂ ಸೈ, ಜೆಡಿಎಸ್ ಟಿಕೆಟ್ ಕೊಟ್ಟರೂ ಸರಿ ಎಂದು ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಮಾತುಕತೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಬಿಜೆಪಿ ನಾಯಕರ ಮೂಲಕ ಯೋಗೇಶ್ವರ್ ಮನವೊಲಿಕೆಗೂ ಜೆಡಿಎಸ್ ಪ್ಲ್ಯಾನ್ ಮಾಡಿದೆ.
ಆ ಮೂಲಕ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವುದರ ಜತೆಗೆ ಒಗ್ಗಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ತಂತ್ರ ಹೂಡುತ್ತಿದ್ದಾರೆ. ಯೋಗೇಶ್ವರ್ರನ್ನು ವಿಶ್ವಾಸಕ್ಕೆ ಪಡೆದು, ಅವರ ಬೆಂಬಲದೊಂದಿಗೇ ಕಾಂಗ್ರೆಸ್ ಮಣಿಸುವ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದು ಮೂಲಗಳು ಹೇಳಿವೆ.
ಚನ್ನಪಟ್ಟಣ ಚಕ್ರವ್ಯೂಹ ಬೇಧಿಸುವುದು ಸುಲಭವಿಲ್ಲ :
ನಾನು ಚನ್ನಪಟ್ಟಣ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಲ್ಲಎಂದು ಆರಂಭದಿಂದಲೇ ಹೇಳುತ್ತಿರುವ ಡಿ.ಕೆ.ಸುರೇಶ್ ಚನ್ನಪಟ್ಟಣದಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಡಿಕೆ ಶಿವಕುಮಾರ್ ಕೂಡಾ ಚನ್ನಪಟ್ಟಣದಲ್ಲಿ ಆಕ್ಟಿವ್ ಇದ್ದಾರೆ. ಪದೇ ಪದೇ ಹೋಗಿ ಬಂದು ಮಾಡುತ್ತಿದ್ದಾರೆ. ಮೈತ್ರಿ ಪಾಳಯವನ್ನು ಎದುರಿಸುವ ಸಮರ್ಥ ಅಭ್ಯರ್ಥಿಯ ಕೊರತೆಯೂ ಕಾಂಗ್ರೆಸ್ ಪಾಳಯದಲ್ಲಿಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಸಿದ್ಧತೆ ಕೈಪಾಳಯದಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಚನ್ನಪಟ್ಟಣದಲ್ಲಿ ಡಿಕೆ ಸುರೇಶ್ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲವಾದರೂ, ಚನ್ನಪಟ್ಟಣದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಹೆಚ್ಚು ಓಡಾಡುತ್ತಿರುವುದೇ ಡಿಕೆ ಸುರೇಶ್. ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಆಪರೇಷನ್ ಹಸ್ತ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಸಹ ಡಿಕೆ ಸುರೇಶ್ ಪಾತ್ರ ಪ್ರಮುಖವಾಗಿದೆ. ಇದೆಲ್ಲವೂ ಡಿಕೆ ಸುರೇಶ್ ಅಭ್ಯರ್ಥಿಯಾಗುತ್ತಾರೆ ಎಂಬ ಅಭಿಪ್ರಾಯ ಗಟ್ಟಿಗೊಳ್ಳುವಂತೆ ಮಾಡುತ್ತಿದೆ.
ಕಾಂಗ್ರೆಸ್ ತಂತ್ರದ ಹಿಂದಿದೆ ಇತಿಹಾಸದ ಕಾರಣ : ಕಾಂಗ್ರೆಸ್‌ನಿಂದ ಯೋಗೇಶ್ವರ್ ಹೊರನಡೆದ ಬಳಿಕ ಚನ್ನಪಟ್ಟಣದಲ್ಲಿ ಎರಡು ಉಪಚುನಾವಣೆ, ಮೂರು ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಇಷ್ಟೂ ಚುನಾವಣೆಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 85 ಸಾವಿರ ಮತಗಳನ್ನು ಪಡೆದಿತ್ತು. ಡಿಕೆ ಸುರೇಶ್ ಅವರು ಆಸಕ್ತಿ ತೋರಿಸಿದ್ದ ಕಾರಣದಿಂದಾಗಿಯೇ 85 ಸಾವಿರ ಮತಗಳು ಬಂದಿದ್ದವು. ಡಿ.ಕೆ.ಸುರೇಶ್ ತಂತ್ರಗಾರಿಕೆ ಹಾಗೂ ಹೆಸರು ಕೆಲಸ ಮಾಡಿತ್ತು. ಹೀಗಾಗಿ ಡಿ.ಕೆ.ಸುರೇಶ್ ಅವರನ್ನೇ ಕಣಕ್ಕಿಳಿಸಿದರೆ ಸೂಕ್ತ ಎನ್ನುವುದು ಸ್ಥಳೀಯ ಕಾಂಗ್ರೆಸ್ಸಿಗರ ಅಭಿಪ್ರಾಯವೂ ಇದೆ.
ಡಿಕೆಸು ನಿಂತರೆ.. ಯೋಗೇಶ್ವರ್ ಅವರಷ್ಟೇ ಫೈಟ್ ಕೊಡಲು ಸಾಧ್ಯ ಎನ್ನುವ ಮಾತುಕತೆಗಳೂ ಚಾಲ್ತಿಯಲ್ಲಿವೆ. .ಕೆ.ಸುರೇಶ್ ವಿರುದ್ಧ ಸೆಣೆಸಾಡಲು ಸಿಪಿವೈ ಅಷ್ಟೇ ಸಮರ್ಥರು. ಹೀಗಾಗಿ ಅವರನ್ನೇ ಅಖಾಡಕ್ಕಿಳಿಸಬೇಕು ಎಂಬ ಮಾತುಕತೆಗಳೂ ನಡೆಯುತ್ತಿವೆ. 006ರಲ್ಲಿಬಿಜೆಪಿ-ಜೆಡಿಎಸ್ ಒಟ್ಟಾಗಿ ಮೈಸೂರಿನಲ್ಲಿಸಿದ್ದರಾಮಯ್ಯ ಅವರನ್ನು ಎದುರಿಸಿದ ಮಾದರಿಯಲ್ಲಿಯೇ ಈ ಬಾರಿಯ ಉಪಚುನಾವಣೆಯಲ್ಲಿಡಿ.ಕೆ.ಸುರೇಶ್ ವಿರುದ್ಧ ಮೈತ್ರಿ ಪಡೆ ಒಟ್ಟಾಗಿ ಹೋರಾಡಬೇಕು ಎಂದು ಮೈತ್ರಿಕೂಟ ನಿರ್ಧರಿಸಿದೆ. ಆದರೆ ಸಿದ್ಧರಾಮಯ್ಯ ಬೈಎಲೆಕ್ಷನ್ ಎದುರಿಸಿದಾಗ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಈಗ ಕಾಂಗ್ರೆಸ್ ನೇತೃತ್ವದ ಪ್ರಬಲ ಸರ್ಕಾರ ಇದೆ. ಅಷ್ಟೇ ವ್ಯತ್ಯಾಸ.



