ಚನ್ನಪಟ್ಟಣ. ಬೈ ಎಲೆಕ್ಷನ್ ನಡೆಯುತ್ತಿರುವುದು ಚನ್ನಪಟ್ಟಣ ಒಂದಕ್ಕೇ ಅಲ್ಲ. ಸಂಡೂರು ಹಾಗೂ ಶಿಗ್ಗಾಂವಿಗೂ ನಡೆಯುತ್ತಿದೆ. ಆದರೆ ಇಡೀ ರಾಜ್ಯದ ಕುತೂಹಲದ ಕಣ್ಣಿರುವುದು ಚನ್ನಪಟ್ಟಣದ ಮೇಲೆ. ಇಲ್ಲಿ ರಾಜಕೀಯ ಗೇಮ್ ಪ್ಲಾನ್ ಮಾಡಿದ್ದು ಮತ್ತು ಗೆದ್ದಿದ್ದು ಒನ್ಸ್ ಎಗೇನ್ ಡಿಕೆ ಬ್ರದರ್ಸ್. ಬೆಂಗಳೂರು ಗ್ರಾಮಾಂತರ ಸೋತ ಬಳಿಕ ಡಿಕೆ ಸೋದರರು ಚನ್ನಪಟ್ಟಣದಲ್ಲಿ ಎಷ್ಟು ಆಕ್ಟಿವ್ ಇದ್ದರೆಂದರೆ, ಯೋಗೇಶ್ವರ್ ಕಾಂಗ್ರೆಸ್ಸಿಗೆ ಬಾರದೇ ಹೋಗಿದ್ದರೂ ಚಾಲೆಂಜ್ ಹಾಕುವಂತಿದ್ದರು. ರಣರಂಗಕ್ಕೆ ಎಲ್ಲ ತಯಾರಿ ಮಾಡಿಕೊಂಡೇ ಇದ್ದರು. ಈಗ ನಡೆಯುತ್ತಿರುವ ಆಟಕ್ಕೂ ತಯಾರಾಗಿದ್ದರು. ತಯಾರಾಗಿದ್ದರು ಎನ್ನುವುದಕ್ಕಿಂತ ಇದು ಅವರೇ ಆಡಿದ ಆಟ ಎನ್ನಬಹುದು.
ಇಲ್ಲಿ ಅವರು ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನು ಹೊಡೆದಿದ್ದಾರೆ. ಮೊದಲನೆಯ ಹಕ್ಕಿ ಕುಮಾರಸ್ವಾಮಿ. ಎರಡನೆಯ ಹಕ್ಕಿ ಬಿಜೆಪಿಯ ವಿಜಯೇಂದ್ರ ಮತ್ತು ಮೂರನೇ ಹಕ್ಕಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ಸಿನ ಪ್ರಾಬಲ್ಯ. ಎಲ್ಲವೂ ಒಂದೇ ಕಲ್ಲಿಗೆ ಬಿದ್ದಿದೆ.
ಕುಮಾರಸ್ವಾಮಿಗೆ ಸಂಕಟ ಏಕೆ..?
ರಾಜ್ಯದ 224 ಕ್ಷೇತ್ರಗಳಲ್ಲಿ 84 ಕ್ಷೇತ್ರಗಳು ಹಳೇ ಮೈಸೂರು ಭಾಗದಲ್ಲಿವೆ. ಈ 84 ಕ್ಷೇತ್ರಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರದೇಶ ಬಿಟ್ಟರೆ, ಮಿಕ್ಕ ಎಲ್ಲ ಕ್ಷೇತ್ರಗಳಲ್ಲಿ ನೇರಾನೇರ ಸಮರ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ. ಜೆಡಿಎಸ್ʻನ ಶಕ್ತಿಯೇ ಈ 84 ಕ್ಷೇತ್ರಗಳು. ಈ 84 ಕ್ಷೇತ್ರಗಳಲ್ಲಿ ಕುಮಾರಸ್ವಾಮಿಯನ್ನು ಖೆಡ್ಡಾಕ್ಕೆ ಕೆಡವಿದರೆ, ಆಟ ಗೆಲ್ಲೋದು ಡಿಕೆ ಸೋದರರಿಗೆ ಸುಲಭ. ಕಳೆದ ವಿಧಾನಸಭೆಯಲ್ಲಿ ಒಕ್ಕಲಿಗರ ಲೀಡರ್ ಆಗಿ ಹೊರಹೊಮ್ಮಿರುವ ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ಸವಾಲಾಗಿರುವುದು ರಾಮನಗರ ಜಿಲ್ಲೆಯ ಚನ್ನಪಟ್ಟಣ.
ಹೌದು, ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಅಷ್ಟೇ ಅಲ್ಲ, ಡಿಕೆ ಸೋದರರಿಗೂ ಸವಾಲಾಗಿದ್ದವರು ಸಿಪಿ ಯೋಗೇಶ್ವರ್. 1999ರಿಂದ ಒಟ್ಟಾರೆ 5 ಬಾರಿ ಗೆದ್ದಿರೋ ಸಿಪಿ ಯೋಗೇಶ್ವರ್, ಪಕ್ಷೇತರರಾಗಿಯೂ ಗೆದ್ದಿದ್ದಾರೆ. ಬಿಜೆಪಿಯಿಂದ ಒಮ್ಮೆ, ಸಮಾಜವಾದಿ ಪಕ್ಷದಿಂದ ಒಮ್ಮೆ ಗೆದ್ದಿದ್ದಾರೆ. ಅಂದರೆ ಚನ್ನಪಟ್ಟಣದಲ್ಲಿ ಪಕ್ಷಕ್ಕಿಂತ ದೊಡ್ಡ ಜನಪ್ರಿಯತೆ ಹೊಂದಿರೋದು ಸಿಪಿ ಯೋಗೇಶ್ವರ್. ಈಗ ಅದೇ ಯೋಗೇಶ್ವರ್, ಮತ್ತೊಮ್ಮೆ ಕಾಂಗ್ರೆಸ್ಸಿಗೆ ಹೋದರೆ, ನಷ್ಟವಾಗುವುದು ಕುಮಾರಸ್ವಾಮಿ ಅವರಿಗೆ.
ಅಲ್ಲದೆ ಇತ್ತೀಚೆಗೆ ಮೈಸೂರು ಭಾಗದ ಒಕ್ಕಲಿಗ ನಾಯಕರಾದ ಜಿಟಿ ದೇವೇಗೌಡ, ಕಾಂಗ್ರೆಸ್ಸಿನ ಜೊತೆ ಸಂಪರ್ಕದಲ್ಲಿದ್ದಾರೆ. ಶಿವಲಿಂಗೇಗೌಡ ಮೊದಲಾದವರು ಹೋಗಿ ಹಾಸನ ಕೋಟೆಯನ್ನು ಕಳೆದುಕೊಂಡಿರುವ ಕುಮಾರಸ್ವಾಮಿ ಅವರಿಗೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದು ದೊಡ್ಡ ಸಂಕಟವೇ ಸರಿ. ಕಾಂಗ್ರೆಸ್ ಶಕ್ತಿ ಹೆಚ್ಚಾದಷ್ಟೂ ಕುಮಾರಸ್ವಾಮಿ ಅವರಿಗೆ ದೊಡ್ಡ ಸಮಸ್ಯೆ.
ವಿಜಯೇಂದ್ರ ಅವರಿಗೆ ಆದ ನಷ್ಟವೇನು..?
ಇನ್ನು ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತ್ತು ದಲಿತ ವೋಟುಗಳ ಬ್ಯಾಂಕ್ ಇಟ್ಟುಕೊಂಡಿರುವ, ಕರಾವಳಿ, ಮಲೆನಾಡಿನಲ್ಲಿ ಹಿಂದುತ್ವದ ವೋಟು ಪಡೆಯುವ ಬಿಜೆಪಿಗೆ, ಮೈಸೂರು ಭಾಗದಲ್ಲಿ ಒಕ್ಕಲಿಗರ ಕೋಟೆಗೆ ನುಗ್ಗೋಕೆ ಆಗಿಲ್ಲ. ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಅವರಂತಹವರು ಬೆಂಗಳೂರು ದಾಟಿದರೆ ವರ್ಕೌಟ್ ಆಗುವ ನಾಯಕರಲ್ಲ. ಸಿಪಿ ಯೋಗೇಶ್ವರ್ ಅವರ ವರ್ಚಸ್ಸು ಚನ್ನಪಟ್ಟಣಕ್ಕೆ ಸೀಮಿತವಾಗಿದ್ದರೂ, ಮೈಸೂರು ಭಾಗದಲ್ಲಿ ಯೋಗೇಶ್ವರ್ ಜನಪ್ರಿಯರಾಗಿದ್ದರು. ಇವರ ಜನಪ್ರಿಯತೆಯನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳೋ ಹಾದಿಯಲ್ಲಿ ವಿಜಯೇಂದ್ರ ಅವರಿಗೆ ಇದು ದೊಡ್ಡ ನಷ್ಟವೂ ಹೌದು. ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟುವ ಕನಸಿಗೆ ಇದು ಎಳ್ಳು ನೀರು ಬಿಟ್ಟಂತಾಗಿದೆ. ಏಕೆಂದರೆ ಪ್ರೀತಂ ಗೌಡ, ಸಿಟಿ ರವಿ, ಪ್ರತಾಪ್ ಸಿಂಹ ಅವರಂತಹ ಒಕ್ಕಲಿಗ ನಾಯಕರು ತಮ್ಮ ಸೇಫ್ ಝೋನ್ʻನಿಂದ ಹೊರಗೆ ಬರುವುದಿಲ್ಲ. ಅಕಸ್ಮಾತ್ ಬಂದರೂ ಅದರಿಂದ ಯಡಿಯೂರಪ್ಪ ಅವರನ್ನು ಅಟ್ಯಾಕ್ ಮಾಡುವ ಸಲುವಾಗಿ ಇರುತ್ತದೆಯೇ ಹೊರತು, ಪಕ್ಷದ ಸಂಘಟನೆಗೆ ನಯಾಪೈಸೆ ಲಾಭವಿರುವುದಿಲ್ಲ. ಹೀಗಾಗಿ ಇದು ಬಿಜೆಪಿಗೆ ಹಾಗೂ ವಿಜಯೇಂದ್ರ ಅವರಿಗೆ ನಷ್ಟವೂ ಹೌದು.
ಲಾಭ ಆಗುವುದು ಮಾತ್ರ ಕಾಂಗ್ರೆಸ್ಸಿಗೆ.. : ಹಾಗಂತು ಇದು ಯಾರಿಗೆ ಲಾಭ ಎಂದು ನೋಡಿದರೆ ಅನುಮಾನವೇ ಇಲ್ಲದೆ ಇದು ಕಾಂಗ್ರೆಸ್ಸಿಗೆ ಲಾಭ ಎನ್ನಬಹುದು. ಏಕೆಂದರೆ ಸಿಪಿ ಯೋಗೇಶ್ವರ್ ಅವರಿಗೆ ಗಾಳ ಹಾಕಿ ಹಿಡಿದ ಕಾಂಗ್ರೆಸ್, ಏಕಕಾಲಕ್ಕೆ ಬಿಜೆಪಿಯ ಸಂಘಟನೆಯ ಉತ್ಸಾಹವನ್ನೂ, ಕುಮಾರಸ್ವಾಮಿ ಪ್ರಾಬಲ್ಯದ ಠೇಂಕಾರವನ್ನೂ ಹೊಡೆದು ಹಾಕಿದೆ.
ಸಿಪಿ ಯೋಗೇಶ್ವರ್‌ಗೆ ಏನು ಲಾಭ..?
ಚನ್ನಪಟ್ಟಣವನ್ನು ಉಳಿಸಿಕೊಳ್ಳೊದು ಸಿಪಿ ಯೋಗೇಶ್ವರ್ ಅವರಿಗೆ ಇದ್ದ ಸವಾಲು. ಬಿಜೆಪಿಯಲ್ಲಿ ಅಭ್ಯರ್ಥಿಯಾಗಿದ್ದರೆ ಜೆಡಿಎಸ್ ಬೆಂಬಲ ನೀಡುವುದು ಅಷ್ಟು ಸುಲಭ ಇರಲಿಲ್ಲ. ಏಕೆಂದರೆ ೨೫ ವರ್ಷಗಳಲ್ಲಿ ಸಿಪಿವೈ ಹೋರಾಟ ಮಾಡಿರುವುದೇ ಜೆಡಿಎಸ್ ವಿರುದ್ಧ. ಜೆಡಿಎಸ್ ಅಭ್ಯರ್ಥಿಯಾಗಿದ್ದರೂ ಗೆಲುವು ಮತ್ತು ಒಗ್ಗಟ್ಟು ಸಾಧ್ಯ ಇರಲಿಲ್ಲ. ಇನ್ನು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಮುಸ್ಲಿಂ ಮತಗಳು ಕೈತಪ್ಪುವ ಭೀತಿಯೂ ಇತ್ತು. ಆದರೆ ಕಾಂಗ್ರೆಸ್ಸಿನ ಅಭ್ಯರ್ಥಿಯಾಗೋದ್ರಿಂದ ಮುಸ್ಲಿಂ ಮತಗಳು, ಡಿಕೆ ಸೋದರರ ಬೆಂಬಲ ಮತ್ತು ವೈಯಕ್ತಿಕ ಶಕ್ತಿಯೂ ವರವಾಗುವ ಸಾಧ್ಯತೆ ಇದೆ.



