ಚನ್ನಪಟ್ಟಣ ಬೈ ಎಲೆಕ್ಷನ್ ಟಿಕೆಟ್ ಫೈಟ್ ಜೋರಾಗಿದೆ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ತಮಗೆ ಟಿಕೆಟ್ ಕೊಡಿ ಎನ್ನುವುದು ಸಿಪಿ ಯೋಗೇಶ್ವರ್ ಡಿಮ್ಯಾಂಡ್. ಕಳೆದ ಎರಡು ದಿನಗಳಿಂದ ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ರಾಜ್ಯ ಬಿಜೆಪಿಯ ಹಲವು ಹಿರಿಯ ನಾಯಕರು ದೆಹಲಿಯಲ್ಲಿ ವರಿಷ್ಠರ ಜತೆ ಸರಣಿ ಸಭೆಗಳನ್ನು ನಡೆಸಿದರೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ವಿಶೇಷ ಎಂದರೆ ಬಿಜೆಪಿ ಅಭ್ಯರ್ಥಿ ಹಾಕಿದರೆ, ಬಿ ಫಾರಂಗೆ ಸಹಿ ಮಾಡಬೇಕಾದ ಬಿಜೆಪಿ ರಾಜ್ಯಾಧ್ಯಕ್ಷರೇ ಸಭೆಗೆ ಹೋಗಿಲ್ಲ. ಬಿ.ವೈ.ವಿಜಯೇಂದ್ರ ಅವರು ಕಾಣಿಸಿಕೊಳ್ಳದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ನಾಯಕ ರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಅರವಿಂದ್ ಬೆಲ್ಲದ, ಸಿ.ಪಿ. ಯೋಗೇಶ್ವರ್ ದೆಹಲಿಗೆ ತೆರಳಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರ ಸ್ವಾಮಿ, ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಆದರೆ ವಿಜಯೇಂದ್ರ ಉಪಸ್ಥಿತಿಯ ಕೊರತೆ ಎದ್ದು ಕಾಣುತ್ತಿದೆ.
ಮೂಲಗಳ ಪ್ರಕಾರ ವಿಜಯೇಂದ್ರ ಮತ್ತು ಯೋಗೇಶ್ವರ್ ಅವರ ನಡುವಿನ ರಾಜಕೀಯ ಸಂಬಂಧ ಅಷ್ಟಕಷ್ಟೇ. ಚನ್ನಪಟ್ಟಣ ಜೆಡಿಎಸ್ ತೆರವುಗೊಳಿಸಿದ ಕ್ಷೇತ್ರವಾಗಿದ್ದರಿಂದ ವಿಜಯೇಂದ್ರ ಅವರು ಆ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಬಗ್ಗೆ ತಟಸ್ಥ ನಿಲುವು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಯೋಗೇಶ್ವರ್ ಅವರೂ ಕೂಡ ಈ ವಿಷಯದಲ್ಲಿ ವಿಜಯೇಂದ್ರ ಅವರನ್ನು ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ಇತರ ನಾಯಕರೊಂದಿಗೆ ತಮ್ಮ ಟಿಕೆಟ್ ಬಗ್ಗೆ ಚರ್ಚಿಸಿದರೂ ಉದ್ದೇಶ ಪೂರ್ವಕವಾಗಿಯೇ ವಿಜಯೇಂದ್ರ ಅವರ ಬಳಿ ಈ ವಿಷಯ ಪ್ರಸ್ತಾಪಿಸಿಲ್ಲ.
ಈ ಕಾರಣದಿಂದಲೂ ವಿಜಯೇಂದ್ರ ಅವರು ದೆಹಲಿಗೆ ತೆರಳದೆ ಏನಾದರೂ ಆಗಲಿ ಎಂಬ ಧೋರಣೆ ತಳೆದಿದ್ದಾರೆ ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿದೆ. ಆದರೆ, ಪಕ್ಷದ ಇತರ ಹಿರಿಯ ನಾಯಕರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಸರಣಿ ಸಭೆ ನಡೆಸುತ್ತಿರುವಾಗ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರು ಇದರಿಂದ ದೂರ ಉಳಿಯದೆ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಭಿನ್ನಾಭಿಪ್ರಾಯ ಸಂದೇಶ ರವಾನೆಯಾಗುವುದನ್ನು ತಡೆಗಟ್ಟಬಹುದಿತ್ತು ಎಂಬ ಅಭಿಪ್ರಾಯವೂ ಇದೆ.
ಜೊತೆಗೆ ವಿಜಯೇಂದ್ರ ಪರ ಇರುವವರ ಪ್ರಕಾರ ʻಕೆಲವು ನಾಯಕರು ಉದ್ದೇಶಪೂರ್ವಕವಾಗಿಯೇ ವಿಜಯೇಂದ್ರ ಅವರನ್ನು ಹೊರಗಿಟ್ಟು ತಮ್ಮ ಪ್ರಾಬಲ್ಯ ಸಾಬೀತು ಪಡಿಸಲು ಹೆಣಗುತ್ತಿದ್ದಾರೆ. ಹೀಗಿರುವಾಗ ವಿಜಯೇಂದ್ರ ತಾವಾಗಿಯೇ ಹೋಗಿ ಸಾಬೀತು ಪಡಿಸುವ ವಿಷಯವಾದರೂ ಏನು. ಬೇಕೆಂತಲೇ ನಡೆಯುತ್ತಿರುವ ಈ ಆಟದಲ್ಲಿ ಮೂಗು ತೂರಿಸದೇ ದೂರ ಇರುವುದೇ ಜಾಣ ನಡೆ ಎನ್ನುತ್ತಿದ್ದಾರೆ.
ಇತ್ತ ತಾವು ಹೇಳಿದರೆ ಕುಮಾರಸ್ವಾಮಿ ಒಪ್ಪಿಕೊಳ್ಳುತ್ತಾರೆ ಎಂಬ ಹುಮ್ಮಸ್ಸಿನಲ್ಲಿ ಹೋದವರಿಗೆ ಕುಮಾರಸ್ವಾಮಿ ನಿಲುವು ಶಾಕ್ ಕೊಟ್ಟಿದೆ. ಸಿಪಿ ಯೋಗೇಶ್ವರ್ ಅವರಿಂದ ಯಾರೇ ಎನ್‌ಡಿಎ ಅಭ್ಯರ್ಥಿಯಾದರೂ, ಅವರ ಪರ ಕೆಲಸ ಮಾಡುತ್ತೇನೆ ಎಂದು ಬಹಿರಂಗ ಹೇಳಿಕೆ ಕೊಡಿಸಿ ಎಂದು ಹಠ ಹಿಡಿದಿದ್ದಾರೆ. ಆದರೆ, ಈ ರೀತಿ ನಡೆದುಕೊಳ್ಳೋದಕ್ಕೆ ಸಿಪಿ ಯೋಗೇಶ್ವರ್ ಒಪ್ಪಿಲ್ಲ. ಹೀಗಾಗಿ ಮುಂದೆ ಹೋದ ನಾಯಕರೆಲ್ಲ ಕೈಕೈ ಹಿಸುಕಿಕೊಳ್ಳುವಂತಾಗಿದೆ.



