ಈಗಾಗಲೇ ದೇಶದಲ್ಲಿ ಡೆಂಘೀ, ಕೊರೊನಾ, ಚಿಕನ್ ಗುನ್ಯಾ, ಝೀಕಾ, ಕೋತಿ ಜ್ವರ, ಹಂದಿ ಜ್ವರ.. ಸೇರಿದಂತೆ ನೂರಾರು ರೋಗಗಳ ಹಾವಳಿ ಇದೆ. ಹೀಗಿರುವಾಗಲೇ ಈಗೊಂದು ಹೊಸ ವೈರಸ್ ಕೇಳಿ ಬರುತ್ತಿದೆ. ಚಾಂದಿಪುರ ವೈರಸ್. ಇದು ಹೆಚ್ಚಾಗಿ ಕಾಡುತ್ತಿರುವುದು ಮಕ್ಕಳಿಗೆ.
ಗುಜರಾತ್‌ನ ಸಬರ್‌ಕಾಂಠಾ ರಾವಳಿ, ಮಹಿಸಾರ, ಖೇಡಾ ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಮೂಲದ ತಲಾ ಒಬ್ಬರಲ್ಲಿಯೂ ಈ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಗುಜರಾತ್ ರಾಜ್ಯದಲ್ಲಿ ‘ಚಾಂದಿಪುರ’ ಹೆಸರಿನ ವೈರಸ್ ಪತ್ತೆಯಾಗಿದೆ. ಈ ಸೋಂಕಿಗೆ ಜು.10ರಿಂದ ಈವರೆಗೆ 6 ಮಕ್ಕಳು ಸಾವನ್ನಪ್ಪಿದ್ದು, ಈವರೆಗೆ 12 ಜನರಿಗೆ ಈ ಸೋಂಕು ತಗುಲಿದೆ.
ಚಾಂದಿಪುರ ವೈರಸ್ ಎಂದೇಕೆ ಕರೆಯುತ್ತಾರೆ..?
ಮಹಾರಾಷ್ಟ್ರದ ಚಾಂದಿಪುರದಲ್ಲಿ 1965ರಲ್ಲಿ ಇದು ಮೊದಲ ಬಾರಿ ಕಾಣಿಸಿತ್ತು. ಹೀಗಾಗಿ ಇದಕ್ಕೆ ಚಾಂದಿಪುರ ವೈರಸ್ ಎನ್ನುತ್ತಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ. ಇದು ಸಾಂಕ್ರಾಮಿಕ ರೋಗ ಅಲ್ಲದಿದ್ದರೂ ಸೊಳ್ಳೆ, ನೊಣಗಳಿಂದ ಈ ಸೋಂಕು ಹರಡುತ್ತದೆ. ಚಂಡೀಪುರ ಸೋಂಕು ಸಾಮಾನ್ಯ ಜ್ವರದ ರೋಗ ಲಕ್ಷಣಗಳಂತೆಯೇ ಇರುತ್ತದೆ. ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಸೇರಿದಂತೆ ಕೆಲ ಲಕ್ಷಣಗಳು ಈ ರೋಗ ಬಂದವರಲ್ಲಿ ಕಾಣಿಸಿಕೊಳ್ಳುತ್ತದೆ.
ಮಕ್ಕಳಲ್ಲಿ ಹೆಚ್ಚು ಏಕೆ..?
ಸಾಮಾನ್ಯವಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಸಣ್ಣ ಪುಟ್ಟ ಕಾಯಿಲೆಗಳ ಮೂಲಕವೂ ಚಾಂದಿ ವೈರಸ್ ಅಟ್ಯಾಕ್ ಆಗಬಹುದು. ಸೂಕ್ತ ಕಾಲಕ್ಕೆ ನೋಡಿಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ.
ರಾಜ್ಯ ಆರೋಗ್ಯ ಸಚಿವ ಋುಷಿಕೇಶ್ ಪಟೇಲ್ ಮಾಹಿತಿ ನೀಡಿದ್ದು, ‘ಚಾಂದಿಪುರ ವೈರಸ್ ಸಾಂಕ್ರಾಮಿಕ ರೋಗವಲ್ಲ. ಆದರೂ ರೋಗ ಕಾಣಿಸಿಕೊಂಡ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವನ್ನು ವಹಿಸಲಾಗಿದೆ. ರೋಗ ತಡೆ ಕಾರ್ಯ ನಿರ್ವಹಿಸುತ್ತಿದ್ದೇವೆ. ರೋಗದ ಲಕ್ಷಣಗಳನ್ನು ಹೊಂದಿರುವ 12 ಜನರ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ.



