ಧರ್ಮಸ್ಥಳದಲ್ಲೀಗ ಸತ್ಯ ದರ್ಶನವಾಗುತ್ತಿದೆ. ನಾವು ಧರ್ಮಸ್ಥಳದ ವಿರುದ್ಧ ಅಲ್ಲ. ನಾವೂ ಮಂಜುನಾಥ ಸ್ವಾಮಿಯ ಭಕ್ತರೇ ಎನ್ನುತ್ತಿದ್ದ ನಕಲಿ ಹೋರಾಟಗಾರರ ನೈಜ ಉದ್ದೇಶ ಅರ್ಥ ಮಾಡಿಕೊಳ್ಳೋದು ಜನರಿಗೆ ಕಷ್ಟವಾಗಿಯೇನೂ ಇರಲಿಲ್ಲ. ಅದಾದ ಮೇಲೆ ಒಂದೊಂದೇ ಸತ್ಯ ಹೊರಬಿದ್ದು, ಹೋರಾಟಗಾರರ ನೈಜ ಮುಖ ಬಯಲಾಗಿದೆ ಅಷ್ಟೇ ಅಲ್ಲ, ಅವರು ಬೆತ್ತಲಾಗಿದ್ದಾರೆ. ಈ ನಡುವೆಯೇ ಧರ್ಮಸ್ಥಳದಲ್ಲಿ ಚಂಡಿಕಾ ಹೋಮವೂ ನೆರವೇರಿದೆ.
ಬೆಳ್ತಂಗಡಿ ತಾಲೂಕಿನ ಸಮಸ್ತ ಭಕ್ತವೃಂದದ ಪರವಾಗಿ ಮಹಾ ಚಂಡಿಕಾಯಾಗ ನಡೆಸಲಾಗಿದೆ. ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಯಾಗ ಶಾಲೆಯಲ್ಲಿ ಮಹಾಚಂಡಿಕಾ ಯಾಗ ನಡೆಯಿತು. ಚಂಡಿಕಾಯಾಗಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ವತಿಯಿಂದ ಫಲ-ಪುಷ್ಪಗಳ ಸಮರ್ಪಣೆ ಮಾಡಲಾಗಿದೆ. ವೇದ ವಿದ್ವಜ್ಜನರ ಮೂಲಕ ಮಹಾ ಚಂಡಿಕಾಯಾಗ ನಡೆದಿದೆ. ಯಾಗದ ಪೂರ್ಣಾಹುತಿ ಬಳಿಕ ಬೃಹತ್ ಸತ್ಯದರ್ಶನ ಸಮಾವೇಶ ಕೂಡ ನಡೆಯಲಿದೆ. ತಾಲೂಕಿನ ಜನತೆಯನ್ನು ಉದ್ದೇಶಿಸಿ ಧರ್ಮಾಧಿಕಾರಿ ಡಾ.ಡಿ. ವೀರೆಂದ್ರ ಹೆಗ್ಗಡೆ ಮಾತಾಡಿದ್ದಾರೆ. ಅಂದಹಾಗೆ ಧರ್ಮಸ್ಥಳಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆಯಂತೆ.


ಮೊದಲ ದಿನವೇ ನಾವು ಎಸ್ಐಟಿ ರಚನೆ ಮಾಡಿದ್ದನ್ನು ಸ್ವಾಗತ ಮಾಡಿದ್ದೇವೆ. ಯಾರು ಯಾರು ಈ ಷಡ್ಯಂತ್ರದ ಹಿಂದೆ ಇದ್ದಾರೆ ಎಂಬುದು ಗೊತ್ತಾಗಿದೆ. ಕ್ಷೇತ್ರವನ್ನು ಮುಗಿಸಬೇಕು, ಜನ ಯಾರು ಇಲ್ಲಿಗೆ ಬರಬಾರದು ಎಂದು ಈ ರೀತಿ ಮಾಡಿದ್ದಾರೆ.ಭಕ್ತರು ಬರೋದು ಅವರವರ ಭಕ್ತಿಯಿಂದ, ಆದ್ರೆ ಈ ರೀತಿ ಮಾಡಿ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದಿರುವ ಧರ್ಮಾಧಿಕಾರಿಗಳು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಎಸ್ಐಟಿ ಮಾಡಿದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಎಸ್ಐಟಿ ಮಾಡದೆ ಇದ್ರೆ ಇಷ್ಟು ಸತ್ಯ ಹೊರಗೆ ಬರ್ತಾ ಇರಲಿಲ್ಲ ಎನ್ನುವ ಮೂಲಕ ಎಸ್‌ಐಟಿ ಮಾಡಿದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಚಿನ್ನವನ್ನು ಬೆಂಕಿಗೆ ಹಾಕಿದ್ರೆ ಹೇಗೆ ಸ್ಫುಟವಾಗುತ್ತೋ ಹಾಗೆ ಧರ್ಮಸ್ಥಳ ಇನ್ನಷ್ಟು ಬೆಳಗುತ್ತಿದೆ. ಧರ್ಮಸ್ಥಳವನ್ನು ಬೆಂಕಿಯಲ್ಲಿ ಹಾಕಿದ್ರು, ಈಗ ಧರ್ಮಸ್ಥಳ ಮತ್ತಷ್ಟು ಸ್ಫುಟವಾಗಿ ಹೊಳೆಯುತ್ತಿದೆ. ಎರಡು ತಿಂಗಳಿಂದ ತಲೆ ಓಡ್ತಾ ಇರಲಿಲ್ಲ. ಈಗ ಮತ್ತೆ ತಲೆ ಓಡಲು ಆರಂಭವಾಗಿದೆ ಎಂದಿದ್ದಾರೆ.
ಇದಕ್ಕೆ ಮುನ್ನಾದಿನ ನಡೆದ ಒಂದು ಕಾರ್ಯಕ್ರಮದಲ್ಲಿ ಹೆಗ್ಗಡೆಯವರು ನನ್ನ ಮೇಲೆ ಯಾಕೆ ಇಷ್ಟು ದ್ವೇಷ.. ಹಗೆತನ ಎಂದೆಲ್ಲ ಪ್ರಶ್ನೆ ಮಾಡಿ, ಶಿವಕುಮಾರ ಸ್ವಾಮಿಗಳನ್ನು ನೆನಪಿಸಿಕೊಂಡಿದ್ದರು. ಬೇಸರಿಸಿಕೊಂಡಿದ್ದರು. ಈಗ ಸ್ವಲ್ಪ ನಿರಾಳರಾದಂತೆ ಕಾಣಿಸುತ್ತಿರುವ ಹೆಗ್ಗಡೆ ಧರ್ಮಸ್ಥಳಕ್ಕೆ ಭಕ್ತರು ಭೇಟಿ ನೀಡುವುದನ್ನು ನಿಲ್ಲಿಸಿ, ಕ್ಷೇತ್ರವನ್ನು ನಾಶಪಡಿಸುವುದು ಅವರ (ಪಿತೂರಿಗಾರರ) ಉದ್ದೇಶವಾಗಿತ್ತು. ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯಿಂದ ಮಾತ್ರ ಸಾಧ್ಯ. ಚಿನ್ನವನ್ನು ಬೆಂಕಿಗೆ ಹಾಕಿದರೆ ಅದು ಇನ್ನಷ್ಟು ಕಂಗೊಳಿಸುವಂತೆ, ಧರ್ಮಸ್ಥಳವೂ ಈ ಸವಾಲಿನ ನಡುವೆ ಇನ್ನಷ್ಟು ಬೆಳಗುತ್ತಿದೆ. ಇದೀಗ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ.



