ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಡೈವೋರ್ಸ್ ವಿಷಯ ಗುಲ್ಲಾಗಿದ್ದೇ ತಡ, ವಿಶೇಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದ ಹೆಸರು ಸೃಜನ್ ಲೋಕೇಶ್ ಅವರದ್ದು. ಚಂದನ್-ನಿವೇದಿತಾ ದಾಂಪತ್ಯ 4 ವರ್ಷಗಳ ಮದುವೆ ವಿಚ್ಚೇದನದಲ್ಲಿ ಅಂತ್ಯಗೊಂಡಿದೆ. ಈ ನಡುವೆ ಇಬ್ಬರೂ ಒಟ್ಟಿಗೇ ಬಂದು ಪರಸ್ಪರ ಗೌರವದಿಂದಲೇ ಮಾತನಾಡಿದ್ದಾರೆ. ಜೊತೆಗೆ ಡೈವೋರ್ಸ್ ನಂತರ ಕೇಳಿ ಬರುತ್ತಿರುವ ನಿವೇದಿತಾ ಗೌಡ ಮತ್ತು ಆ ನಟನ ಜೊತೆ ರಿಲೇಷನ್ ಶಿಪ್ ಬಗ್ಗೆ ಉತ್ತರ ಕೊಟ್ಟಿದ್ದಾರೆ. ಆ ವ್ಯಕ್ತಿಗೂ ನಮಗೂ ಸಂಬಂಧ ಕಟ್ಟಬೇಡಿ. ನೋವಾಗುತ್ತದೆ ಎಂದು ಹೇಳಿದ್ದಾರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ. ಅವರಿಬ್ಬರೂ ಹೇಳುತ್ತಿರೋ ಹೆಸರು ಸೃಜನ್ ಲೋಕೇಶ್ ಅವರದ್ದು. ಆದರೆ, ಇಡೀ ಸುದ್ದಿಗೋಷ್ಠಿಯಲ್ಲಿ ಎಲ್ಲಿಯೂ ಹೆಸರು ಹೇಳಲಿಲ್ಲ, ಅಷ್ಟೆ.
ಆ ವ್ಯಕ್ತಿಯ (ಸೃಜನ್ ಲೋಕೇಶ್) ಮನೆಗೆ ನಾನು ಕೂಡ ಅನೇಕ ಬಾರಿ ಹೋಗಿದ್ದೇನೆ. ತುಂಬ ಒಳ್ಳೆಯ ಕುಟುಂಬ ಅವರದ್ದು. ಅವರ ಮನೆಗೆ ಹೋಗುವುದು ನನಗೂ ಖುಷಿ ಆಗುತ್ತಿತ್ತು. ಅವರ ಕಾರ್ಯಕ್ರಮಕ್ಕೆ ನಾವಿಬ್ಬರು ಅನೇಕ ಬಾರಿ ಹೋಗಿದ್ದೆವು. ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿಗೆ ಸೇರಿಸಿ ಸಂಬಂಧ ಕಲ್ಪಿಸಿದ್ದು ನನ್ನ ಮನಸ್ಸಿಗೆ ತುಂಬ ಬೇಸರ ಆಗಿದೆ. ಆ ವ್ಯಕ್ತಿಯ ಜೊತೆ ನಿವೇದಿತಾ ಗೌಡ ಅವರ ಹೆಸರು ಸೇರಿಸುವಂತಹ ವಿಕೃತ ಮನಸ್ಥಿತಿ ನಮ್ಮ ಕನ್ನಡಿಗರಾದ್ದಾಗಿರಬಾರದು ಎಂದಿದ್ದಾರೆ ಚಂದನ್ ಶೆಟ್ಟಿ.
ಆ ರೀತಿಯ ಪೋಸ್ಟ್ಗಳನ್ನು ನೋಡಿದಾಗ ನನಗೆ ನೋವಾಯಿತು. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್. ಪ್ರತಿ ವರ್ಷ ಅವರು ನನ್ನ ಜನ್ಮದಿನಕ್ಕೆ ವಿಶ್ ಮಾಡುತ್ತಾರೆ. ನಾನು ಕೂಡ ಅವರಿಗೆ ವಿಶ್ ಮಾಡುತ್ತೇನೆ. ಈ ವರ್ಷವೇ ಈ ರೀತಿ ವದಂತಿ ಹಬ್ಬಿದ್ದು ಯಾಕೆ ಅಂತ ಗೊತ್ತಿಲ್ಲ. ಇದರಿಂದ ಅವರ ಫ್ಯಾಮಿಲಿಯವರಿಗೆ ತುಂಬ ನೋವಾಗುತ್ತದೆ. ಲೈಕ್ಗಾಗಿ ಈ ರೀತಿ ಪೋಸ್ಟ್ ಮಾಡಬೇಡಿ. ಅವರಿಗೂ ಒಂದು ಕುಟುಂಬ ಇರುತ್ತದೆ. ಅವರಿಗೂ ಭಾವನೆಗಳಿರುತ್ತವೆ ಎಂದಿದ್ದಾರೆ ನಿವೇದಿತಾ ಗೌಡ.
ಇನ್ನು ಜೀವನಾಂಶ ಹಾಗೂ ಮಕ್ಕಳು ಪಡೆಯುವ ವಿಷಯಕ್ಕೆ ಡೈವೋರ್ಸ್ ಆಯಿತು ಎನ್ನುವ ವದಂತಿಗಳನ್ನೂ ನಿರಾಕರಿಸಿರುವ ಚಂದನ್ ಶೆಟ್ಟಿ, ನಮ್ಮಿಬ್ಬರ ಲೈಫ್ ಸ್ಟೈಲ್ ಬೇರೆ. ನಾನು ಬೆಳಗ್ಗೆ ಬೇಗ ಏಳುವವನು. ರಾತ್ರಿ ಬೇಗ ಮಲಗುವವನು. ಆದರೆ.. ನಿವೇದಿತಾ ರಾತ್ರಿ ಹೊತ್ತು ನಿಧಾನವಾಗಿ ಮಲಗಿ, ಬೆಳಗ್ಗೆ ಲೇಟ್ ಆಗಿ ಏಳುತ್ತಾರೆ. ಇಂತಹ ಸಮಸ್ಯೆಗಳಿಂದಾಗಿ ಹೊಂದಾಣಿಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಈಗಲೂ ನಿವೇದಿತಾ ತಮಗೆ ಒಳ್ಳೆಯ ಫ್ರೆಂಡ್. ಮುಂದೆಯೂ ಹೀಗೆಯೇ ಇರುತ್ತೇವೆ. ಗಂಡ ಹೆಂಡತಿಯಾಗಿ ಇರಲು ಸಾಧ್ಯವಾಗುತ್ತಿಲ್ಲ, ಅಷ್ಟೆ ಎಂದಿದ್ದಾರೆ ಚಂದನ್ ಶೆಟ್ಟಿ.
ಅಂದಹಾಗೆ ಸೃಜನ್ ಲೋಕೇಶ್ ಅವರು ಚಂದನ್ ಶೆಟ್ಟಿ, ನಿವೇದಿತಾ ಅವರೊಂದಿಗೆ ಅಷ್ಟೇ ಅಲ್ಲ, ಹಲವರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಕನ್ನಡ ಚಿತ್ರರಂಗದ ಮೊದಲ ಹೀರೋ ಕುಟುಂಬ ಅವರದ್ದು. ತಾತ, ಅಪ್ಪ, ತಾಯಿ, ಅಕ್ಕ.. ಎಲ್ಲರೂ ಕಲಾವಿದರೇ. ಆದರೆ, ಇದುವರೆಗೆ ಸೃಜನ್ ಲೋಕೇಶ್ ಅವರ ಬಗ್ಗೆ ಇಂತಹ ಗಾಸಿಪ್ʻಗಳು ಬಂದಿದ್ದು ಇಲ್ಲ.
ಅಲ್ಲದೆ ಈ ಬಗ್ಗೆ ಸುದ್ದಿ ಹಬ್ಬಿಸುತ್ತಿರುವವರು ಪ್ರಕಾಶ್ ಸಂಬರಗಿ. ವಕೀಲರು ಕೂಡಾ ಆಗಿರುವ ಪ್ರಕಾಶ್ ಸಂಬರಗಿ ಇಂಡಸ್ಟ್ರಿಯಲ್ಲಿ ಯಾವುದೇ ರೀತಿಯ ಇಂತಹ ಪ್ರಕರಣಗಳು ಬಂದಾಗಲೂ ಸುದ್ದಿಯಲ್ಲಿರುತ್ತಾರೆ. ನಿವೇದಿತಾಗೆ ತೆಲುಗು ಸಿನಿಮಾ ಆಫರ್ ಬಂತು, ನಿವೇದಿತಾಗೆ ಸ್ವಿಫ್ಟ್ ಕಾರು ಬೇಡ, ಬೆಂಜ್ ಕಾರೇ ಬೇಕು.. ಹೀಗೆ ಹಲವು ಆರೋಪ ಮಾಡಿದ್ದರು ಪ್ರಶಾಂತ್ ಸಂಬರಗಿ. ಅವುಗಳಿಗೆಲ್ಲ ಉತ್ತರ ಕೊಟ್ಟಿದ್ದಾರೆ ಚಂದನ್ ಶೆಟ್ಟಿ & ನಿವೇದಿತಾ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಮಾನನಷ್ಟ ಮೊಕದ್ದಮೆ ಕೇಸ್ ಹಾಕಬೇಕಾಗುತ್ತದೆ ಎಂದೂ ಕೂಡಾ ಎಚ್ಚರಿಕೆ ಕೊಟ್ಟಿದ್ದಾರೆ ಚಂದನ್ ಶೆಟ್ಟಿ.



