ಮಂಡ್ಯದ ಮದ್ದೂರಿನಲ್ಲಿ ನಡೆದ ಗಣೇಶೋತ್ಸವ ತಿರುವು ಪಡೆದುಕೊಳ್ಳುತ್ತಲೇ ಇದೆ. ಆರಂಭದಲ್ಲಿ ಭಾನುವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಪಟ್ಟಂತೆ 22 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರೆಲ್ಲರೂ ಮುಸ್ಲಿಮರೇ. ವೆಲ್ಡರುಗಳು, ಪಾತ್ರೆ ಮಾರೋವ್ರು, ಮೆಕಾನಿಕ್ಕುಗಳು, ಪೇಂಟ್ ಮಾಡುವವರು, ಗುಜರಿ ವ್ಯಾಪಾರಿಗಳು.. ಇತ್ಯಾದಿಗಳೇ. ಯಾರೂ ಶ್ರೀಮಂತರಿಲ್ಲ. ಅರೆಸ್ಟ್ ಆಗಿರುವವರೆಲ್ಲ ಮುಸ್ಲಿಮರು ಎಂದು ಚೆಲುವರಾಯ ಸ್ವಾಮಿ ಹೇಳಿದ್ದರು..ಆದರೆ ಇದೀಗ 500ಕ್ಕೂ ಹೆಚ್ಚು ಹಿಂದೂಗಳ ಮೇಲೆಯೂ ಕೇಸ್ ಆಗಿದೆ. ಎಫ್‌ಐಆರ್ ಕೂಡಾ ಆಗಿದೆ.
ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯರು ಸೇರಿ 500 ಹಿಂದೂಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮದ್ದೂರಿನ ಕೆಮ್ಮಣ್ಣು ನಾಲಾ ಸಮೀಪದ ಮುಖ್ಯ ಮಸೀದಿ ಬಳಿ ಕರ್ಪೂರ ಮತ್ತು ಟೈರ್‌ಗೆ ಬೆಂಕಿ ಹಚ್ಚಿ, ಭಗವಾಧ್ವಜ ಹಾರಿಸಿ, ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಈ ವೇಳೆ, ಪ್ರತಿಭಟನಾಕಾರರ ಮೇಲೆ ಒಂದು ಗುಂಪು ಕಲ್ಲು ತೂರಾಟ ನಡೆಸಿ, ಮಾರಕಾಸ್ತ್ರಗಳನ್ನು ಝಳಪಿಸಿತು. ಆಗ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿದ್ದರು. ಈ ವೇಳೆ, ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಗಿರೀಶ್, ಸೌಮ್ಯ, ರಮ್ಯ, ಪಲ್ಲವಿ ಎಂಬುವರು ಸೇರಿ 500ಕ್ಕೂ ಹೆಚ್ಚು ಹಿಂದೂಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ, ಪ್ರತಿಭಟನಾ ಮೆರವಣಿಗೆ ನಡೆದ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ, ಮುಸ್ಲಿಂ ಬಾವುಟಕ್ಕೆ ಬೆಂಕಿ ಹಚ್ಚಿ, ಬಂಟಿಂಗ್ಸ್ ಕಿತ್ತೆಸೆದವರು ಹಾಗೂ ಪ್ರತಿಭಟನಾ ಮೆರವಣಿಗೆ ವೇಳೆ ಮಸೀದಿಗೆ ನುಗ್ಗಲು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟೂ 5 ಎಫ್‌ಐಆರ್ ಗಳು ದಾಖಲಾಗಿವೆ.
ಚಲುವರಾಯ ಸ್ವಾಮಿ ಹೇಳಿದ್ದೇನು..? ಮಾಡಿದ್ದೇನು..?
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಚಲುವರಾಯ ಸ್ವಾಮಿ , ತಕ್ಷಣ ಎಫ್‌ಐಆರ್ ದಾಖಲಿಸಿಕೊಂಡು 21 ಜನ ಮುಸ್ಲಿಮರನ್ನು ಬಂಧಿಸಲಾಗಿದೆ. ಅದರಲ್ಲಿ ಹೊರಗಡೆಯ ಒಂದಿಬ್ಬರು ಮೂರು ಜನ ಇರಬಹುದು ಎನ್ನಲಾಗಿದೆ. ಹಿಂದೂಗಳ ಮೇಲೆ ಯಾವುದೇ ಕೇಸ್ ಹಾಕಿಲ್ಲ, ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದ್ದರು. ಈಗ ನೋಡಿದರೆ 500ಕ್ಕೂ ಹೆಚ್ಚು ಹಿಂದೂಗಳ ಮೇಲೆ ಕೇಸ್ ದಾಖಲಾಗಿದೆ. ಹಾಗಾದರೆ ಸಚಿವ ಚಲುವರಾಯಸ್ವಾಮಿ ತಪ್ಪು ಮಾಹಿತಿ ನೀಡಿದ್ರಾ.. ಇದು ಈಗ ಮಂಡ್ಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ.
ಮದ್ದೂರಿನ ರಾಮ್‌ರಹೀಮ್ ನಗರದಲ್ಲಿ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಾಗ ಉಂಟಾದ ಘರ್ಷಣೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಸ್ವಯಂಪ್ರೇರಿತವಾಗಿ ಒಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಮತ್ತೊಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಮೊನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 22 ಜನರನ್ನು ಬಂಧಿಸಲಾಗಿದೆ. ಇದರ ನಡುವೆ ಗಲಭೆ ಸಂಬಂಧ 500+ ಹಿಂದೂಗಳ ಮೇಲೆಯೂ ಕೇಸ್ ಆಗಿದೆ.
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಅನ್ಯಕೋಮಿನವರಿಂದ ಕಲ್ಲು ತೂರಾಟ ನಡೆದಿರುವುದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಮದ್ದೂರು ಬಂದ್ ಬಹುತೇಕ ಯಶಸ್ವಿಯಾಗಿದ್ದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.



