ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸುವುದೆಂದರೆ ಸುಮ್ಮನೆ ಮಾತಲ್ಲ. ದರ್ಶನ್ ಅವರು ಅಂತಹ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ಧಾರೆ. ಆ ಸಂಭ್ರಮಕ್ಕೆ ಅಭಿಮಾನಿಗಳು ಶ್ರೀರಂಗಪಟ್ಟಣದಲ್ಲಿ ಆಯೋಜನೆ ಮಾಡಿದ್ದ ‘ಬೆಳ್ಳಿ ಪರ್ವ ಡಿ-25’ ಹಲವು ಅಚ್ಚರಿಯ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಈ ಸಂಭ್ರಮದ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ವಿನೋದ್ ರಾಜ್, ಶರಣ್, ಪ್ರೇಮ್, ನೀನಾಸಂ ಸತೀಶ್, ಚಿಕ್ಕಣ್ಣ, ಝೈದ್ ಖಾನ್, ವಿನೋದ್ ಪ್ರಭಾಕರ್, ಧನಂಜಯ, ಪ್ರಜ್ವಲ್ ದೇವರಾಜ್, ಸೂರಜ್, ಧನ್ವೀರ್, ಯಶಸ್ ಸೂರ್ಯ.. ಎಲ್ಲರೂ ಇದ್ದರು. ಬಿಗ್‌ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್, ಬೃಂದಾ ಆಚಾರ್ಯ, ಪ್ರಿಯಾಂಕಾ, ಶರಣ್ಯ ಶೆಟ್ಟಿ ಸೇರಿದಂತೆ ಹಲವರು ಪರ್ಫಾಮೆನ್ಸ್ ಕೊಟ್ಟರು. ಕಾಟೇರ ನಾಯಕಿ ಆರಾಧನ ಕೂಡಾ ಇದ್ದರು. ಆದರೆ.. ಅಲ್ಲಿ ದರ್ಶನ್ ಅವರ ಫ್ಯಾಮಿಲಿಯೇ ಇರಲಿಲ್ಲ.
ದರ್ಶನ್ ಅವರ ತಾಯಿ ಮೀನಾ ಅವರಾಗಲೀ, ತಮ್ಮ ದಿನಕರ್ ಅವರಾಗಲೀ, ಪತ್ನಿ ವಿಜಯಲಕ್ಷ್ಮಿ ಅವರಾಗಲೀ ಇರಲಿಲ್ಲ. ದಿನಕರ್ ತಮ್ಮನಷ್ಟೇ ಅಲ್ಲ, ದರ್ಶನ್ ಕೆರಿಯರಿನಲ್ಲೇ ಸೂಪರ್ ಹಿಟ್ ಎನಿಸಿಕೊಂಡಿರುವ ಸಾರಥಿ ಚಿತ್ರದ ನಿರ್ದೇಶಕರೂ ಹೌದು.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್ ಹಲವು ವಿಷಯ ಹೇಳಿದ್ಧಾರೆ. ಕೆಲವು ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದಿರುವ ದರ್ಶನ್, ಕೆಲವು ಸ್ಪಷ್ಟನೆ ಕೊಟ್ಟಿದ್ಧಾರೆ. ಹಾಗೆಯೇ ಆ ಕೆಲವರ ಬಗ್ಗೆ ಕ್ಷಮೆಯನ್ನೂ ಕೇಳಿದ್ಧಾರೆ. ಆದರೆ ಕುಟುಂಬದ ಬಗ್ಗೆ ಒಂದಕ್ಷರವನ್ನೂ ಮಾತನಾಡಿಲ್ಲ.
ನನ್ನನ್ನು ಬಯ್ಯುವ , ನಿನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದು ನಾನು ಎಂದು ಹೇಳುವ ಅರ್ಹತೆ-ಯೋಗ್ಯತೆ ಇರುವುದು ರಾಮಮೂರ್ತಿ ಅವರಿಗೆ ಮಾತ್ರ. ನಾನು ಟಾಂಗಾ ಕುದುರೆ ಆಗಿದ್ದೆ. ಅಲ್ಲಿ-ಇಲ್ಲಿ ಓಡಾಡುತ್ತಿದ್ದೆ. ನನ್ನನ್ನು ನೋಡಿದ ಕೆಲವರು ಈ ಕುದುರೆ ಎತ್ತರ ಇದೆ, ಕಟ್ಟುಮಸ್ತಾಗಿದೆ ಎಂದು ರೇಸ್ ಕೋರ್ಸ್ ಗಂಧ-ಗಾಳಿ ಗೊತ್ತಿರದಿದ್ದರೂ ರೇಸ್ ಕೋರ್ಸ್ ಅಲ್ಲಿ ನಿಲ್ಲಿಸಿದರು. ಆ ರೇಸ್ನಲ್ಲಿ ದೊಡ್ಡ-ದೊಡ್ಡ ಕುದುರೆಗಳು ಇದ್ದವು. ಆ ಕುದುರೆಯ ಮಾಲೀಕರು ‘ಮೆಜೆಸ್ಟಿಕ್’ ಸಿನಿಮಾ ನಿರ್ಮಾಪಕ ರಾಮಮೂರ್ತಿ. ಹೀಗೆ ಕರೆತಂದು ರೇಸ್ಗೆ ಬಿಟ್ಟ ಕುದುರೆಯ ಮೇಲೆ ಜಾಕಿಯಾಗಿ ಪಿಎನ್ ಸತ್ಯ ಅವರನ್ನು ಕೂಡಿಸಿದರು. ಅಂದಿನಿಂದ ಇಂದಿನ ವರೆಗೆ ಓಡುತ್ತಲೇ ಇದ್ದೀನಿ. ತರುಣ್, ಮಿಲನಾ ಪ್ರಕಾಶ್ ಹೀಗೆ ಜಾಕಿಗಳು ಬದಲಾಗುತ್ತಲೇ ಇದ್ದಾರೆ. ಕುದುರೆಗೆ ಓಡುವುದು ಮಾತ್ರವೇ ಗೊತ್ತು, ಅದನ್ನು ಓಡಿಸುತ್ತಿರುವವರು ಜಾಕಿಗಳು. ಸಿನಿಮಾ ನನ್ನದಲ್ಲ, ಎಲ್ಲ ನಿರ್ದೇಶಕರದ್ದುಎಂದಿರುವ ದರ್ಶನ್ ಆ ಮೂಲಕ ನನಗೆ ಅವಕಾಶ ಕೊಟ್ಟಿದ್ದು ರಾಮಮೂರ್ತಿ ಮತ್ತು ಸತ್ಯ ಅವರಷ್ಟೇ, ಇನ್ಯಾರ ಪಾತ್ರವೂ ಇಲ್ಲ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ.
ಇದೇ ವೇಳೆ ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ. ಹೌದು ನಾನು ಬ್ಯಾಡ್ ಬಾಯ್. ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಬದಿಗಿಡುತ್ತೀನಿ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ಥಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದಿರುವ ದರ್ಶನ್ ಡೋಂಟ್ ಕೇರ್ ಎಂಬ ಉತ್ತರವನ್ನೂ ಕೊಟ್ಟಿದ್ಧಾರೆ. ಆದರೆ ಅಪ್ಪಿ ತಪ್ಪಿಯೂ ಪತ್ನಿ ವಿಜಯಲಕ್ಷ್ಮಿ ಹೆಸರು ಹೇಳಿಲ್ಲ.
ಸುಮ ಅವರು ನನಗೆ ಬುದ್ಧಿ ಕಲಿಸಿದ್ದಾರೆ. ಅಂಬರೀಶ್ ಮನೆಯಲ್ಲಿ ಏಟು ತಿಂದಿದ್ದೀನಿ. ನಾನು ತಪ್ಪು ಮಾಡಿದಾಗ ಬೈದು ತಿದ್ದಿದ್ದಾರೆ. ನನಗೆ ಬುದ್ಧಿ ಕಲಿಸಿದ ತಾಯಿ ಸುಮಾ ಎಂದಿರುವ ದರ್ಶನ್ ಇದುವರೆಗೆ ನಾನು 57-58 ಸಿನಿಮಾಗಳಲ್ಲಿ ನಟಿಸಿದ್ದೀನಿ, ಆ ಸಿನಿಮಾಗಳಲ್ಲಿ ನನ್ನೊಟ್ಟಿಗೆ ಕೆಲಸ ಮಾಡಿದ ತಂತ್ರಜ್ಞಾನರು, ನಟಿಯರು ಆಗಿರಬಹುದು, ಗೊತ್ತೊ-ಗೊತ್ತಿಲ್ಲದೆ ನೋವು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಆದರೆ ತಾಯಿ ಮೀನಾ ತೂಗುದೀಪ್ ಅವರ ಬಗ್ಗೆಯೂ ಮಾತನಾಡಿಲ್ಲ.
ದರ್ಶನ್ ಅವರ ಈ ವರ್ತನೆ ಹಾಗೂ ಮಾತು ಅಭಿಮಾನಿಗಳಲ್ಲೂ ಬೇಸರ ಮೂಡಿಸಿದೆ. ಸುಮಲತಾ ಅವರನ್ನು ಅಮ್ಮ ಎಂದು ಕರೆಯುವ ದರ್ಶನ್, ತಾಯಿ ಮೀನಾ ಅವರ ಸ್ಮರಣೆಯನ್ನೂ ಮಾಡಿಲ್ಲ. ಅಭಿಷೇಕ್ ಅವರನ್ನು ತಮ್ಮ ಎಂದು ಹೇಳಿಕೊಳ್ಳೋ ದರ್ಶನ್, ದಿನಕರ್ ಬಗ್ಗೆ ಮಾತನಾಡಿಲ್ಲ. ಯಾವಾಗಲೂ ದರ್ಶನ್ ಇವರ ಬಗ್ಗೆಯೇ ಮಾತನಾಡಿ ಎಂದು ಹೇಳುವುದಿಲ್ಲವಾದರೂ, ಇದು ಬೆಳ್ಳಿ ಹಬ್ಬದ ಸಂಭ್ರಮವಾಗಿತ್ತು. ಹೀಗಾಗಿಯೇ ಅಭಿಮಾನಿಗಳೂ ಬೇಸರ ಗೊಂಡಿದ್ದಾರೆ.



