ಚೈತ್ರಾ ಕುಂದಾಪುರ (Chaithra Kundapura) ನಾಟಕಗಳನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಇದ್ದಕ್ಕಿದ್ದಂತೆ ಬಾಯಲ್ಲಿ ನೊರೆ ಬಂದು, ಕುಸಿದು ಬಿದ್ದಾಗ.. ಎಂತಹವರಿಗೂ ನಡುಕ ಆಗುತ್ತೆ. ಅದರಲ್ಲೂ ಪೊಲೀಸರಿಗೆ. ಏಕೆಂದರೆ ಚೈತ್ರಾ ಕುಂದಾಪುರ (Chaithra Kundapura) ಹಿಂದೂಪರ ಹೋರಾಟಗಾರ್ತಿ (Hindu activist) ಎಂದೇ ಗುರುತಿಸಿಕೊಂಡಿದ್ದವರು. ಅಂತಾದ್ದರಲ್ಲಿ ಅವರಿಗೇನಾದರೂ ಆದರೆ, ಅದೂ.. ಕಸ್ಟಡಿಯಲ್ಲಿದ್ದಾಗ ಆಗಿಬಿಟ್ಟರೆ.. ಚೈತ್ರಾ ಕುಂದಾಪುರ ಬಾಯಿಯ ನೊರೆಗೆ ಪೊಲೀಸರು ನಡುಗಿದ್ದೇ ಆಗ..
ಮೂರ್ಛೆ ರೋಗ (Fitz) ಬಂದಿದೆ ಎಂದು ಚೈತ್ರಾ ಕುಂದಾಪುರ (Chaithra Kundapura) ಎಂಬಾಕೆಯನ್ನು ಸಿಸಿಬಿ ಪೊಲೀಸರು (CCB Police) ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಇಸಿಜಿ, ಬಿಪಿ, ಶುಗರ್ (ECG, BP, Sugar) ಎಲ್ಲವೂ ನಾರ್ಮಲ್ ಇದೆ. ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲಾ ಪರೀಕ್ಷೆ ಮಾಡಲಾಗಿದೆ. ಮೂರ್ಛೆ (fits) ರೋಗದಿಂದ ಆಕೆ ಕುಸಿದು ಬಿದ್ದಿಲ್ಲ. ಆಕೆ ಬಾಯಲ್ಲಿ ನೊರೆ ಇರಲಿಲ್ಲ. ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆರೋಪಿ ಚೈತ್ರಾ ಸಿಸಿಬಿ ಪೊಲೀಸರ ವಿಚಾರಣೆ ತಪ್ಪಿಸಿಕೊಳ್ಳಲು ಮೂರ್ಛೆ ನಾಟಕ ಮಾಡಿದ್ದಾಳೆ ಎನ್ನಲಾಗಿದೆ.
ಚೈತ್ರಾಳಿಗೆ ಈ ಹಿಂದೆ ಮೂರ್ಛೆ ರೋಗ ಇತ್ತು. ಸಾರ್ವಜನಿಕ ಭಾಷಣದ ವೇಳೆ ಮೂರ್ಛೆ ಹೋಗಿದ್ದಳು ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತತೆ ಇಲ್ಲ. ಏಕೆಂದರೆ ಮೂರ್ಛೆ ರೋಗದ ಇತಿಹಾಸವೂ ಚೈತ್ರಾ ಅವರಲ್ಲಿ ಇಲ್ಲ. ವಿಚಾರಣೆ ವೇಳೆ ಆಕೆಗೆ ಮೂರ್ಛೆ ಬಂದಿರಲಿಲ್ಲ. ಬದಲಾಗಿ ಆಕೆ ಮೂರ್ಛೆ ಹೋದ ಹಾಗೆ ನಟಿಸಿ ಡ್ರಾಮ ಸೃಷ್ಟಿಸಿದ್ದಾಳೆ. ಸಿಸಿಬಿ ಪೊಲೀಸರು ಶನಿವಾರ ಆಕೆಯ ಆರೋಗ್ಯ ಚೇತರಿಕೆ ನೋಡಿಕೊಂಡು ಮತ್ತೆ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ.
2018ರಲ್ಲಿಯೂ ಹೀಗೆಯೇ ಆಗಿತ್ತು..!
ಚೈತ್ರಾ ಕುಂದಾಪುರ ಅವರು ಅರೆಸ್ಟ್ ಆಗಿರುವುದು ಇದೇ ಮೊದಲೇನಲ್ಲ. 2018ರಲ್ಲಿಯೂ ಇಂಥಾದ್ದೊಂದು ಘಟನೆ ಆಗಿತ್ತು. ಅರೆಸ್ಟ್ ಕೂಡಾ ಆಗಿದ್ದರು. ಆದರೆ ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಆಸ್ಪತ್ರೆ ಸೇರಿದ್ದರು. ಒಂದಲ್ಲ..ಎರಡಲ್ಲ.. ಸರಿಸುಮಾರು 13 ದಿನ ಆಸ್ಪತ್ರೆಯಲ್ಲಿಯೇ ಇದ್ದ ಚೈತ್ರಾ ಕುಂದಾಪುರ, ಆಸ್ಪತ್ರೆ ಬಿಟ್ಟು ಕದಲಿರಲಿಲ್ಲ. ಅಷ್ಟೇ ಅಲ್ಲ, ಅನಾರೋಗ್ಯದ ಕಾರಣ ಒಡ್ಡಿಯೇ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ವೇಳೆ ಚೈತ್ರಾ ಕುಂದಾಪುರ ಆಸ್ಪತ್ರೆ ಬಿಟ್ಟು ಕದಲಿರಲಿಲ್ಲ. ಆದರೆ ವಿಚಾರಣೆ ನಡೆಸುತ್ತಿದ್ದ ಜಡ್ಜ್ ಸಾಹೇಬರಿಗೆ ಯಾಕೋ ಅನುಮಾನ ಬಂತು.
ಕರೆಸಿ ಅವರನ್ನ, ಆಂಬುಲೆನ್ಸಿನಲ್ಲಿಯೇ ಬರಲಿ, ಕೋರ್ಟಿಗೆ ಬರಲೇಬೇಕು ಎಂದು ತಾಕೀತು ಮಾಡಿದರು. ಆಗ ಚೈತ್ರಾ ಆಸ್ಪತ್ರೆಗೆ ಆಂಬುಲೆನ್ಸಿನಲ್ಲಿ ಬಂದರು. ಆಗ ಚೈತ್ರಾ ನೋಡುವುದಕ್ಕೆ ಆರೋಗ್ಯವಾಗಿಯೇ ಇದ್ದರು. ಕೊನೆಗೆ ಡಾಕ್ಟರ್ ಒಪೀನಿಯನ್ ಕೇಳಿದಾಗ, ಎಲ್ಲ ಪರೀಕ್ಷೆ ಮಾಡಿದ್ದೇವೆ, ಏನೂ ಸಮಸ್ಯೆ ಇಲ್ಲ ಎಂದು ವೈದ್ಯರು ನ್ಯಾಯಾಧೀಶರಿಗೆ ಹೇಳಿದ್ದರು. ಆಗ ಚೈತ್ರಾ ಅವರನ್ನು ನೇರ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದರು. ಪೊಲೀಸರು ಈ ಪ್ರಕರಣವನ್ನೇ ಉದಾಹರಣೆಯಾಗಿಟ್ಟುಕೊಂಡು, ವಿಚಾರಣೆ ಮುಂದುವರೆಸಿದ್ದಾರೆ. ಏಕೆಂದರೆ ಚೈತ್ರಾ ಕುಂದಾಪುರ ಅವರಿಗೆ ಮೂರ್ಛೆ ರೋಗದ ಇತಿಹಾಸ ಇಲ್ಲವಾದರೂ, ನಾಟಕದ ಇತಿಹಾಸವಂತೂ ಇದೆ.



