ದರ್ಶನ್ ಅವರ ಕಾಟೇರ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ಧಾರೆ. ನಿರೀಕ್ಷೆಯೂ ದೊಡ್ಡದಿದೆ. ಈ ಹಿಂದಿನ ಕ್ರಾಂತಿ ಚಿತ್ರ, ಸಿನಿಮಾ ಪ್ರೇಕ್ಷಕರಿರಲಿ, ಅಭಿಮಾನಿಗಳ ನಿರೀಕ್ಷೆಯ ಹತ್ತಿರಕ್ಕೂ ಸುಳಿಯಲಿಲ್ಲ ಎನ್ನುವುದು ವಾಸ್ತವ. ಆದರೆ ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ದರ್ಶನ್, ಚಿತ್ರವನ್ನು ಒಂದು ಲೆವೆಲ್ಲಿಗೆ ಗೆಲ್ಲಿಸಿದರು ಎನ್ನುವುದೂ ಸತ್ಯ. ಚಿತ್ರ ಥಿಯೇಟರುಗಳಿಂದ ಲಾಭ ಮಾಡದೇ ಹೋದರೂ, ಓವರ್ ಆಲ್ ಬಿಸಿನೆಸ್ ಆಗಿ ನಿರ್ಮಾಪಕರಿಗೆ ಲಾಸ್ ಆಗಲಿಲ್ಲ. ಇದೀಗ ದರ್ಶನ್ ಅವರ ಕಾಟೇರ ರಿಲೀಸ್ ಆಗುವ ಸಮಯ ಹತ್ತಿರವಾಗಿದೆ.
ಡಿಸೆಂಬರ್ ೨೯ಕ್ಕೆ ಕಾಟೇರ ರಿಲೀಸ್ ಎಂದು ಘೋಷಿಸಿ ಆಗಿದೆ. ರಾಬರ್ಟ್ ನಂತರ ತರುಣ್ ಸುಧೀರ್ ನಿರ್ದೇಶನ ಮಾಡಿರುವ ಚಿತ್ರಕ್ಕೆ ರಾಕ್ʻಲೈನ್ ವೆಂಕಟೇಶ್ ನಿರ್ಮಾಪಕ. ಮಾಲಾಶ್ರೀ ಮಗಳು ಆರಾಧನಾ ಹೀರೋಯಿನ್ ಆಗಿ ಎಂಟ್ರಿ ಕೊಡ್ತಿರೋ ಕಾಟೇರ ಚಿತ್ರಕ್ಕೆ ರಿಲೀಸ್ ಆಗುವುದಕ್ಕೇ ಕಷ್ಟ ಎನ್ನುವ ಪರಿಸ್ಥಿತಿ ಪ್ರಾಬ್ಲಂ ತಲೆದೋರಿದೆ. ಹಾಗಂತ ರಾಕ್ ಲೈನ್ ವೆಂಕಟೇಶ್ ಅವರೇನೂ ದುಡ್ಡಿನ ಸಮಸ್ಯೆಗೆ ಸಿಲುಕಿಕೊಳ್ಳೋ ಕಡಿಮೆ ಕುಳ ಅಲ್ಲ. ಸಮಸ್ಯೆ ಎದುರಾಗಿರುವುದು ಸೆನ್ಸಾರ್ ಮಂಡಳಿಯಿಂದ.
ಕಳೆದ ತಿಂಗಳು ನಡೆದ ಒಂದು ರೇಡ್ ಹಲವು ಚಿತ್ರಗಳ ಬಿಡುಗಡೆಯನ್ನು ಮುಂದಕ್ಕೆ ಹಾಕುವಂತೆ ಮಾಡಿದೆ. ಕಳೆದ ತಿಂಗಳು ಸಿಬಿಐನವರು ಬೆಂಗಳೂರಿನ ಸೆನ್ಸಾರ್ ಮಂಡಳಿ ಕಚೇರಿ ಮೇಲೆ ದಾಳಿ ಮಾಡಿದ್ದರು. ಪ್ರಮಾಣಪತ್ರವ ನೀಡಲು ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಅಧಿಕಾರಿಯಾಗಿದ್ದ ಪ್ರಶಾಂತ್ ಕುಮಾರ್ ಸೇರಿ ಮೂವರನ್ನು ಬಂಧಿಸಿದ್ದರು. ಅದು ನಡೆದಿದ್ದು ಸೆಪ್ಟೆಂಬರ್ ೩೦ರಂದು. ಅದಾದ ಮೇಲೆ ಸೆನ್ಸಾರ್ ಮಂಡಳಿಯಲ್ಲಿ ಅಧಿಕಾರಿಗಳಿಲ್ಲ. ಸಿಬ್ಬಂದಿಯ ಕೊರತೆ ಎದುರಾಗಿದ್ದು, ಸೆನ್ಸಾರ್ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ.
ಬರೋಬ್ಬರಿ 132 ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣ ಪತ್ರ ನೀಡಬೇಕಾಗಿದ್ದು, ಆ ಪಟ್ಟಿಯಲ್ಲಿ ದರ್ಶನ್ ನಟಿಸಿರುವ ಕಾಟೇರ ಕೂಡಾ ಇದೆ. ಡಿಸೆಂಬರ್ 31 ರ ಮೊದಲು ಕ್ಲಿಯರೆನ್ಸ್‌ಗಾಗಿ ಕಾಯುತ್ತಿರುವ ಚಲನಚಿತ್ರಗಳ ಪಟ್ಟಿ ಸುಮಾರು 13೨ ರಷ್ಟಿದೆ. ಶೀಘ್ರದಲ್ಲೇ ಸೆನ್ಸಾರ್ ಆಗದಿದ್ದರೆ, ಮೊದಲೇ ಘೋಷಿಸಿಕೊಂಡಂತೆ ಕಾಟೇರ ರಿಲೀಸ್ ಸಾಧ್ಯವಾಗುವುದಿಲ್ಲ. ದಿಢೀರ್ ಆಗಿ ಎದುರಾದ ಈ ಸಂಕಷ್ಟ ನಿರ್ಮಾಪಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ನಿರ್ಮಾಪಕರು, ಕಲಾವಿದರು ಸಮಸ್ಯೆ ಪರಿಹಾರಕ್ಕೆ ವಾಣಿಜ್ಯ ಮಂಡಳಿ ಮೊರೆ ಹೋಗಿದ್ದಾರೆ.
ಈ ಸಂಬಂಧ ತುರ್ತು ಪತ್ರಿಕಾಗೋಷ್ಠಿ ಕರೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಸಿಬಿಎಫ್ಸಿ ಕನ್ನಡ ಸಿನಿಮಾಗಳ ಸೆನ್ಸಾರ್ ಅನ್ನು ಬಾಕಿ ಉಳಿಸಿ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿಸುತ್ತಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಸಿಬಿಎಫ್ಸಿಯ ಪ್ರಮುಖ ಅಧಿಕಾರಿಗಳಿಗೆ ಮೂರು ಬಾರಿ ಪತ್ರ ಬರೆದಿದ್ದೃೂ, ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. ಆದರೆ ಈ ಹಿಂದೆ ಅಧಿಕಾರಿಗಳ ಸಂಖ್ಯೆ ಕಡಿಮೆಯಿದ್ದಾಗ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಸಿನಿಮಾಗಳಿಗೆ ಸೆನ್ಸಾರ್ ನೀಡಲಾಗುತ್ತಿತ್ತು, ಆದರೆ ಈ ಬಾರಿ ಉದ್ದೇಶಪೂರ್ವಕವಾಗಿ ತಡ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗಿದೆಯಾದರೂ, ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ. ಈ ಕುರಿತು ತಕ್ಷಣ ಸ್ಪಂದಿಸದೇ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಗೇ ದೂರು ನೀಡಲಾಗುವುದು ಎಂದಿದ್ದಾರೆ.
ಶೀಘ್ರದಲ್ಲೇ ಸೆನ್ಸಾರ್ ಮಂಡಳಿಗೆ ಸಿಬ್ಬಂದಿ ನೇಮಕಾತಿ ಮಾಡಬೇಕು. ಈಗಾಗಲೇ ೧೩೦ಕ್ಕೂ ಹೆಚ್ಚು ಚಿತ್ರಗಳು ಸೆನ್ಸಾರ್ ಆಗುವುದು ಬಾಕಿ ಇದೆ. ಆ ಎಲ್ಲ ಚಿತ್ರಗಳಿಗಿಂತ ಸೀನಿಯಾರಿಟಿ ಲೆವೆಲ್ಲಿನಲ್ಲಿ ಕಾಟೇರ ಬರಬೇಕು. ಅಂದರೆ ಇನ್ನು ೨೦ ದಿನಗಳ ಒಳಗೆ ಇಡೀ ೧೩೦+ ಚಿತ್ರಗಳ ಸೆನ್ಸಾರ್ ಪ್ರಕ್ರಿಯೆ ಮುಗಿಯಬೇಕು. ಕಾಟೇರ ರಿಲೀಸ್ ಆಗಬೇಕು. ಆಗುತ್ತಾ..?



