ಕಾವೇರಿ ನದಿ ನೀರು (Kaveri Water dispute) ಹಂಚಿಕೆ ವಿವಾದ ಇದೀಗ ಮತ್ತೆ ಸುಪ್ರೀಂ ಕೋರ್ಟ್ಗೆ (Supreme court) ತಲುಪಿದೆ. ರಾಜ್ಯದಲ್ಲಿ ಮಳೆ ಕೊರತೆಯಾಗಿ ದಿನದಿಂದ ದಿನಕ್ಕೆ ಕಾವೇರಿ (Cauvery) ಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಅದರ ನಡುವೆ ಪ್ರತಿನಿತ್ಯ 10 ಸಾವಿರ ಕ್ಯುಸೆಕ್ಸ್ಗೂ ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಬೇಡಿಕೆ ಇಟ್ಟಿದೆ. ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇ ತಡ, ಕರ್ನಾಟಕ ನೀರು ಬಿಡುಗಡೆ ಮಾಡಿದೆ. ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಬುಧವಾರ ರಾತ್ರಿಯಿಂದ ಮತ್ತೆ ಹೆಚ್ಚಿಸಲಾಗಿದೆ. ಬುಧವಾರ ಮಧ್ಯಾಹ್ನ 12,313 ಕ್ಯೂಸೆಕ್ ಇದ್ದ ಹೊರ ಹರಿವಿನ ಪ್ರಮಾಣ ರಾತ್ರಿಯಿಂದ 15,939 ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ. ಮತ್ತೆ ಗುರುವಾರ ಬೆಳಗ್ಗೆ 15,184 ಕ್ಯೂಸೆಕ್ಗೆ ಇಳಿಸಿ, ಮಧ್ಯಾಹ್ನ ವೇಳೆಗೆ ಈ ಪ್ರಮಾಣವನ್ನು ಪುನಃ 15,657 ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ. ಕೇವಲ 24 ತಾಸಿನಲ್ಲಿ ಹೊರ ಹರಿವಿನ ಪ್ರಮಾಣ 2,300 ಕ್ಯೂಸೆಕ್ನಷ್ಟು ಹೆಚ್ಚಾಗಿದೆ.
ರೈತರ ಪ್ರತಿಭಟನೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವ
ಮಂಡ್ಯದಲ್ಲಿ ರೈತಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ಕೆ.ಆರ್.ಎಸ್. ಜಲಾಶಯದ ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸರಕಾರದ ಕ್ರಮವನ್ನು ವಿರೋಧಿಸಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಬೆಂಲದೊಂದಿಗೆ ಗೆದ್ದಿದ್ದ ಶಾಸಕ ಎನ್ನುವುದು ಹೋರಾಟದ ತೀವ್ರತೆ ಹೆಚ್ಚಿಸಿದೆ. ಮಂಡ್ಯ ಭಾಗದ ಶಾಸಕರಾದ ಮಂಡ್ಯ ಎಂಎಲ್‍ಎ ರವಿ ಕುಮಾರ್, ಮಳವಳಿ ಶಾಸಕ ನರೇಂದ್ರ ಸ್ವಾಮಿ ಕೂಡಾ ತಮ್ಮದೇ ಸರ್ಕಾರದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಒಕ್ಕೂಟಕ್ಕೆ ಕಾವೇರಿ ಬಲಿಪಶು : ಹೆಚ್.ಡಿ.ಕುಮಾರಸ್ವಾಮಿ
ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಆಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.ಓ.ಆ.I.ಂ.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು,ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್ ಸರಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ ಎಂದು ತಿಳಿಸಿದ್ದಾರೆ.
ಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ. ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ ಸರಕಾರ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕಾಬಾರ ಆಡುತ್ತಿದೆ! ಇದೇನು ಇನ್ನೊಂದು ಗ್ಯಾರಂಟಿನಾ? 2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನು ನೆರೆರಾಜ್ಯಕ್ಕೆ ಅಡವಿಟ್ಟಿದೆ ಹಸ್ತಪಕ್ಷ ಸರಕಾರ! ತಮಿಳುನಾಡಿಗೆ ಬೆದರಿ ಶರಣಾಗಿದೆ!! ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಿಂದಲೇ ಹೊರನಡೆದ, ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ ರಾಜ್ಯದೆದುರು ದೈನೇಸಿಯಾಗಿ ಮಂಡಿಯೂರಿದ್ದು,ಕನ್ನಡಿಗರ ಸ್ವಾಭಿಮಾನಕ್ಕೆ ಕೊಟ್ಟ ಕೊಡಲಿಪೆಟ್ಟು ಎಂದು ಟೀಕೆ ಮಾಡಿದ್ದಾರೆ.
ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿವರ್ಯರು, ತಾವು ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಅವರು ಸ್ಪಷ್ಟಪಡಿಸಬೇಕಿದೆ. ಕಾವೇರಿ ಕೀಲಿ ಕೇಂದ್ರ ಬಳಿ ಇದೆ ಎಂದಾದರೆ ಇವರ ಹೊಣೆ ಏನು? ಆ ಕೀಲಿ ಈಗ ಸ್ಟಾಲಿನ್ ಅವರ ಕೈಯ್ಯಲ್ಲಿದೆಯೋ ಅಥವಾ ಸೋನಿಯಾ ಗಾಂಧಿ ಅವರ ಕೈಯ್ಯಲ್ಲಿದೆಯೋ? ತಾಕತ್ತಿದ್ದರೆ ಕೋರ್ಟಿಗೆ ಹೋಗಿ ಎಂದು ರೈತರಿಗೆ ಉಪ ಮುಖ್ಯಮಂತ್ರಿಗಳು ಹೇಳಿರುವುದು ದರ್ಪ, ದುರಹಂಕಾರದ ಪರಾಕಾಷ್ಠೆ. ನಿತ್ಯವೂ ಸಾವಿರಾರು ಕ್ಯೂಸೆಕ್ ಕಾವೇರಿ ನೀರು ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ. ಇನ್ನೂ 10 ಟಿಎಂಸಿ ಬಿಡುತ್ತೇವೆ ಎಂದು ಅವರು ಹೇಳಿರುವುದು ಸರಿಯಲ್ಲ? ಎಂದಿದ್ದಾರೆ.
ಕುಡಿಯುವ ನೀರಿಗೆ ಸಮಸ್ಯೆ ಖಚಿತ
ತಮಿಳುನಾಡಿನ ಬೇಡಿಕೆಯಂತೆ ನೀರು ಬಿಡುಗಡೆ ಮಾಡುತ್ತಿದ್ದರೆ, ಮುಂದಿನ ಬೇಸಿಗೆ ವೇಳೆಗೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅಲ್ಲದೆ, ಮಂಡ್ಯ, ಮೈಸೂರು ಭಾಗಗಳಲ್ಲಿ ಎರಡನೇ ಬೆಳೆಗೆ ನೀರಿಲ್ಲದೆ ರೈತರು ಪರದಾಡಬೇಕಾಗಲಿದೆ.
ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ನಗರ, ಪಟ್ಟಣ ಮತ್ತು ಹಳ್ಳಿಗಳಿಗೆ ನೀರು ಪೂರೈಸಲಾಗುತ್ತದೆ. ಬೆಂಗಳೂರು, ಮೈಸೂರು ಮತ್ತು ಮಂಡ್ಯ ನಗರಗಳು, ಕನಕಪುರ ಸೇರಿದಂತೆ 47 ಪಟ್ಟಣಗಳು, 625 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ. ಒಂದು ತಿಂಗಳಿಗೆ 3 ಟಿಎಂಸಿ ನೀರು ಅವಶ್ಯಕತೆಯಿದೆ. ಮುಂದಿನ 10 ತಿಂಗಳಿಗೆ ಅಂದರೆ ಜುಲೈವರೆಗೆ ಒಟ್ಟು 30 ಟಿಎಂಸಿ ನೀರಿನ ಅಗತ್ಯವಿದೆ. ಆದರೆ, ಸದ್ಯ ಕೆಆರ್ಎಸ್ನಲ್ಲಿ 31.76 ಟಿಎಂಸಿ, ಹೇಮಾವತಿಯಲ್ಲಿ 30 ಟಿಎಂಸಿ, ಕಬಿನಿಯಲ್ಲಿ 16.78 ಟಿಎಂಸಿ ನೀರು ಶೇಖರಣೆಯಾಗಿದೆ. ಅದರಲ್ಲಿ ಕನಿಷ್ಠ ಮಟ್ಟಹೊರತುಪಡಿಸಿ ಮೂರು ಜಲಾಶಯಗಳಲ್ಲಿ ಒಟ್ಟು 56.66 ಟಿಎಂಸಿ ನೀರು ಶೇಖರಣೆಯಾಗಿದೆ. ಅದರಲ್ಲಿ ಕುಡಿಯುವ ನೀರಿಗಾಗಿ 30 ಟಿಎಂಸಿ ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕಿದೆ. ಆದರೆ, ಸದ್ಯದ ನೀರಿನ ಮಟ್ಟಗಮನಿಸಿದರೆ ಕುಡಿಯುವ ನೀರಿಗೆ ಅಗತ್ಯವಿರುವ ನೀರಿನ ಶೇಖರಣೆ ಕಷ್ಟಎಂಬ ಪರಿಸ್ಥಿತಿ ಉದ್ಭವವಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಹಾಗೂ ತಮಿಳುನಾಡಿಗೆ ನೀರು ಪೂರೈಸಿದರೆ ಆ ನೀರಿನ ಪ್ರಮಾಣ ಮತ್ತಷ್ಟುಕಡಿಮೆಯಾಗಿದೆ. ಮಂಡ್ಯ, ಮೈಸೂರು ಭಾಗದ ಜನರ ಕೃಷಿಗೆ ನೀರು ಪೂರೈಕೆ ಕಷ್ಟವಾಗಲಿದೆ.



