ಕ್ಯಾಬಿನೆಟ್ ಸಭೆಗೂ ಮೊದಲೇ ಜಾತಿ ಗಣತಿ ವರದಿ ಲೀಕ್ ಆಗಿದೆ. ಇದು ಸಿಎಂ ಸಿದ್ದರಾಮಯ್ಯಗೆ ಮತ್ತೊಮ್ಮೆ ಶಾಕ್ ಕೊಟ್ಟಿದೆ. ಕ್ಯಾಬಿನೆಟ್ ಸಭೆಗೆ ಮುನ್ನವೇ ಮತ್ತೊಮ್ಮೆ ಜಾತಿ ಗಣತಿಯ ಮಾಹಿತಿ ಲೀಕ್ ಆಗುವುದು ಸರಳ ವಿಷಯವೇನಲ್ಲ. ಗುರುವಾರ ಕ್ಯಾಬಿನೆಟ್ ಸಭೆಯಲ್ಲಿ ಮಂಡನೆ ಮಾಡಲು ಯೋಚಿಸಿದ್ದ ಜಾತಿ ಗಣತಿ, ಈಗ ಲೀಕ್ ಆಗಿದ್ದು ಲೀಕ್ ಆಗಿರುವ ಜಾತಿ ಗಣತಿ ವರದಿಯಲ್ಲಿರುವ ಮಾಹಿತಿಗಳು ಅಚ್ಚರಿ ಹುಟ್ಟಿಸುತ್ತಿವೆ.
ಈ ವರದಿ ಪ್ರಕಾರ ಪರಿಶಿಷ್ಟ ಜಾತಿ ನಂ.1 ಸ್ಥಾನದಲ್ಲಿದೆ. 1 ಕೋಟಿ, 6 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ.
ಮುಸ್ಲಿಮರು ನಂ 2 ಸ್ಥಾನಕ್ಕೇರಿದ್ದು ಅಚ್ಚರಿ ಹುಟ್ಟಿಸುವಂತಿದೆ. ಮುಸ್ಲಿಮರ ಒಟ್ಟಾರೆ ಜನಸಂಖ್ಯೆ 70 ಲಕ್ಷಕ್ಕೂ ಮೇಲ್ಪಟ್ಟಿದೆ. 2011ರ ಜನಗಣತಿ ಪ್ರಕಾರ ಅಂಕಿ-ಅಂಶ ವರದಿಯಲ್ಲಿರುವ ಮಾಹಿತಿಗಳು ದಿಗ್ಭ್ರಮೆ ಮೂಡಿಸುತ್ತಿರುವುದು ಇದೇ ಕಾರಣಕ್ಕೆ.
ಇನ್ನು ಲೀಕ್ ಆಗಿರುವ ವರದಿ ಪ್ರಕಾರ
3ನೇ ಸ್ಥಾನ ಲಿಂಗಾಯತರದ್ದು. 65+ ಲಕ್ಷ ಜನಸಂಖ್ಯೆ ಇದೆ.
4ನೇ ಸ್ಥಾನ ಒಕ್ಕಲಿಗರದ್ದು. 60 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ.
ಕುರುಬರಿಗೆ 5ನೇ ಸ್ಥಾನ ದೊರಕಿದ್ದು, 45 ಲಕ್ಷ ಜನಸಂಖ್ಯೆ ಹೊಂದಿದ್ದಾರೆ.
ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ 6ನೇ ಸ್ಥಾನದಲ್ಲಿದ್ದು, 40 ಲಕ್ಷ ಜನಸಂಖ್ಯೆ ಇದೆ.
ಈಡಿಗರು, ವಿಶ್ವಕರ್ಮ, ಬೆಸ್ತರ ಸಂಖ್ಯೆ ತಲಾ 15 ಲಕ್ಷ ಇದೆ.
ಬ್ರಾಹ್ಮಣರ ಸಂಖ್ಯೆ 14 ಲಕ್ಷ ಇದ್ದರೆ, ಗೊಲ್ಲರ ಸಂಖ್ಯೆ 10 ಲಕ್ಷ ಇದೆ.
2015ರಲ್ಲಿ ನಡೆದಿರುವ ಜಾತಿ ಗಣತಿ ವರದಿಯ ಮುಖ್ಯಾಂಶಗಳು ಮಾತ್ರ. ಅಧಿಕೃತ ವರದಿ ಬಿಡುಗಡೆಗೆ ಮುನ್ನವೇ ರಹಸ್ಯ ಮಾಹಿತಿ ಸೋರಿಕೆಯಾಗಿರುವುದು ಆತಂಕ ಸೃಷ್ಟಿಸಿರುವುದು ನಿಜವಾದರೂ, ಜಾತಿ ಗಣತಿ ವಿರುದ್ಧ ಲಿಂಗಾಯತರು ಮತ್ತು ಒಕ್ಕಲಿಗರು ಧ್ವನಿ ಎತ್ತಿರುವುದೇಕೆ ಎಂಬ ಮಾಹಿತಿಯೂ ಹೊರಬಂದಿದೆ.
ವರದಿಯೇ ಅವೈಜ್ಞಾನಿಕ ಎನ್ನುತ್ತಿರುವ ಲಿಂಗಾಯತ, ಒಕ್ಕಲಿಗ ಸಮುದಾಯಗಳು, ವರದಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇತ್ತೀಚೆಗಷ್ಟೇ ಜಾತಿ ಗಣತಿ ವರದಿ ಮಂಡಿಸಿಯೇ ಸಿದ್ಧ ಎಂದು ಘೋಷಿಸಿದ್ದರು. ಈಗ ಮತ್ತೊಮ್ಮೆ ಜಾತಿ ಗಣತಿ ವರದಿ ಸೋರಿಕೆ, ರಾಜಕೀಯ ಸಂಚಲನ ಸೃಷ್ಟಿಸಿದೆ.
ಕಳೆದ ಫೆಬ್ರವರಿಯಲ್ಲಿ ಕೆ.ಜಯಪ್ರಕಾಶ ಹೆಗ್ಡೆ ಅಧ್ಯಕ್ಷತೆಯ ಅಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಆ ಮೂಲಕ ಅಂತಿಮವಾಗಿ ವರದಿ ಸರಕಾರಕ್ಕೆ ಸ್ವೀಕೃತಿಯಾದಂತಾಗಿತ್ತು. 2013 ರಿಂದ 2018ರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲೇ ಎಚ್.ಕಾಂತರಾಜು ಅಧ್ಯಕ್ಷತೆಯ ಅಂದಿನ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 2015ರಲ್ಲಿ ಕೈಗೊಂಡಿತ್ತು. ಬಳಿಕ ವರದಿ ಸಿದ್ಧವಾದರೂ ನಾನಾ ಕಾರಣಕ್ಕೆ ಸರಕಾರ ಅದನ್ನು ಸ್ವೀಕರಿಸಲಿಲ್ಲ. ಆದರೆ ವರದಿಯಲ್ಲಿನ ಅಂಶಗಳು ಸೋರಿಕೆಯಾಗಿ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗಿತ್ತು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರ ಸಂಖ್ಯೆಯೇ ಅತಿ ಹೆಚ್ಚು ಇದ್ದು, ನಂತರದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಅಂಕಿ-ಸಂಖ್ಯೆ ಸಹಿತ ವರದಿಯ ದತ್ತಾಂಶ ಸೋರಿಕೆಯಾಗಿದ್ದು ವಿವಾದದ ಅಲೆ ಸೃಷ್ಟಿಸಿತ್ತು. ಮುಖ್ಯವಾಗಿ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯವು ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಸರಕಾರ ವರದಿ ಸ್ವೀಕರಿಸದಂತೆ ಒತ್ತಾಯಿಸಿದ್ದವು. ಅಂದಿನ ಸಿದ್ದರಾಮಯ್ಯ ಸರಕಾರ ಕೂಡ ವರದಿಯಿಂದ ಅಂತರ ಕಾಯ್ದುಕೊಂಡಿದ್ದು ಕಂಡುಬಂದಿತ್ತು. ಆ ಮೇಲೆ ಬಂದ ಸರಕಾರಗಳು ವರದಿ ಸ್ವೀಕಾರಕ್ಕೆ ಮುಂದಾಗಿರಲಿಲ್ಲ.
2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರವು ಜಾತಿಗಣತಿ ವರದಿಯನ್ನು ಕಳೆದ ಫೆಬ್ರವರಿಯಲ್ಲಿ ಸ್ವೀಕರಿಸಿತು. ಲೋಕಸಭಾ ಚುನಾವಣೆ ಬಳಿಕ ವರದಿ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದರು.
ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆ ಸಿದ್ಧತೆ ನಡೆದಿರುವ ಹೊತ್ತಿನಲ್ಲೇ ಮತ್ತೆ ಜಾತಿಗಣತಿಯ ವರದಿಯ ಜಾತಿವಾರು ಅಂಕಿಸಂಖ್ಯೆ ಮಾಹಿತಿ ಸೋರಿಕೆ ಆಗಲಾರಂಭಿಸಿದೆ. ಇದು ಮತ್ತೆ ಪರ- ವಿರೋಧದ ಚರ್ಚೆಗೆ ಎಡೆ ಮಾಡುವ ಲಕ್ಷಣ ಕಾಣುತ್ತಿದೆ. 2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.30 ಕೋಟಿ.



