ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವುದು ದಲಿತರನ್ನು ಬಿಟ್ಟರೆ ಲಿಂಗಾಯತರು. ರಾಜ್ಯದ 224 ಕ್ಷೇತ್ರಗಳ ಪೈಕಿ, ಒಟ್ಟಾರೆ 140 ಕ್ಷೇತ್ರಗಳಲ್ಲಿ ಲಿಂಗಾಯತರು ನಿರ್ಣಾಯಕರು. ಈಗ ಜಾತಿ ಗಣತಿ ಸಮೀಕ್ಷೆ ಹೊರಬಿದ್ದಿದೆ. ಹಾಗೆ ನೋಡಿದರೆ ಸಮೀಕ್ಷೆಗಳಲ್ಲಿ ಅತೀ ಹೆಚ್ಚು ಅನ್ಯಾಯವಾಗಿರುವುದು ಲಿಂಗಾಯತ ಸಮುದಾಯಕ್ಕೆ. ಹೇಗೆ ಎನ್ನುವುದಕ್ಕೆ ಕಾರಣಗಳೂ ಇವೆ.
ಸಮೀಕ್ಷೆಗಳಲ್ಲಿ ಕಂಡು ಬಂದ ಅಂಶಗಳು
1. ವೀರಶೈವ ಲಿಂಗಾಯತರು ಪ್ರತ್ಯೇಕ
2. ಅದಕ್ಕಿಂತ ದುರಂತ ಎಂದರೆ ಲಿಂಗಾಯತ ವೀರಶೈವ ಎಂಬ ಇನ್ನೊಂದು ಲಿಸ್ಟ್ ಇದೆ
3. ಪಂಚಮಸಾಲಿ ಲಿಂಗಾಯತ ಎಂಬುದು ಒಂದು ಪಟ್ಟಿ ಇದ್ದರೆ, ಲಿಂಗಾಯತ ಪಂಚಮಸಾಲಿ ಎಂಬ ಇನ್ನೊಂದು ಪಟ್ಟ ಇದೆ.
4. ಕೇವಲ ವೀರಶೈವ ಎಂಬ ಮತ್ತೊಂದು ಲಿಸ್ಟ್ ಕೂಡಾ ಇದೆ.
5. ಪಂಚಮಸಾಲಿಗಳಲ್ಲಿಯೇ ಕೆಲವು ವಿಭಾಗ ಮಾಡಲಾಗಿದೆ.
ಸಮೀಕ್ಷೆಯ ದಾಖಲೆಗಳನ್ನು ನೋಡಿದರೆ ಅಚ್ಚರಿ ಎನಿಸುವುದು ಸತ್ಯ.
ಇನ್ನು ಮೈಸೂರು ಭಾಗಕ್ಕೆ ಬಂದರೆ, ಅಲ್ಲಿ ಒಕ್ಕಲಿಗರೇ ನಿರ್ಣಾಯಕರು. ಪಟ್ಟಿಯಲ್ಲಿ ಹಾಸನ, ರಾಮನಗರ ಕಡೆ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಮರಸು ಒಕ್ಕಲಿಗರ ಸಂಖ್ಯೆಯನ್ನು ಕೇವಲ 3 ಸಾವಿರ ಚಿಲ್ಲರೆಗೆ ಇಳಿಸಲಾಗಿದೆ. ಅಷ್ಟೇನಾ.. ಅಚ್ಚರಿಯಾಗುತ್ತದೆ. ಇನ್ನು ಕುಂಚಿಟಿಗ ಪಂಗಡದವರ ಒಂದಷ್ಟು ಸಂಖ್ಯೆಯನ್ನು ಒಕ್ಕಲಿಗರ ಜಾತಿಗೆ ಸೇರಿಸಿದ್ದರೆ, ಇನ್ನೊಂದಷ್ಟು ಜನರನ್ನು ಪ್ರತ್ಯೇಕವಾಗಿಯೇ ಇಡಲಾಗಿದೆ.
ಎಲ್ಲಕ್ಕಿಂತ ಮಿಗಿಲಾಗಿ ಮನೆ ಮನೆಗೆ ಬಂದು ಸಮೀಕ್ಷೆ ಮಾಡಿದ್ದೇವೆ ಎನ್ನುತ್ತಿರುವ ಸರ್ಕಾರ, ಹಾಗೆ ಬಂದು ಸಮೀಕ್ಷೆ ಮಾಡಿಲ್ಲ ಎನ್ನುವುದು ಸತ್ಯ. ಹೀಗಿರುವಾಗ ಹೋರಾಟಕ್ಕೆ ಬೇಕಿರುವ ಒಗ್ಗಟ್ಟೇ ಕಾಣುತ್ತಿಲ್ಲ.
ಲಿಂಗಾಯತರಲ್ಲಿ ಸ್ವಾಮೀಜಿಗಳಲ್ಲಿಯೇ ಒಗ್ಗಟ್ಟಿಲ್ಲ :
ಲಿಂಗಾಯತರು ಈ ಸಮೀಕ್ಷೆ ಶುರುವಾಗುವ ಮುನ್ನವೇ ಒಡೆದು ಹೋಗಿದ್ದಾರೆ. ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ. ಲಿಂಗಾಯತರದ್ದು ಪ್ರತ್ಯೇಕ ಧರ್ಮ ಎಂಬ ಹೋರಾಟದ ಹೆಸರಲ್ಲಿ ಲಿಂಗಾಯತರಲ್ಲಿ ಬಣಗಳು ಉದ್ಭವವಾಗಿವೆ. ಇದು ಗೆಲ್ಲುವ ಹೋರಾಟ ಅಲ್ಲ ಎನ್ನುವುದು ಹೋರಾಟ ಮಾಡಿದವರಿಗೆ, ಮಾಡುತ್ತಿರುವವರಿಗೆ ಗೊತ್ತು. ಆದರೆ ಕೇವಲ ರಾಜಕೀಯ ಲಾಭಕ್ಕಾಗಿ ನಡೆದ ಹೋರಾಟದಲ್ಲಿ, ಒಂದಷ್ಟು ಸ್ವಾಮೀಜಿಗಳು ಅತ್ತ ನಿಂತಿದ್ದರೆ, ಇನ್ನೊಂದಷ್ಟು ಜನ ಇತ್ತ ನಿಂತಿದ್ದಾರೆ. ಕೆಲವರು ತಟಸ್ಥರಾಗಿದ್ದಾರೆ. ಮಠಗಳು ಮೂರು ಭಾಗಗಳಾಗಿ ಒಡೆದು ಹೋಗಿವೆ.
ರಾಜ್ಯದ ದೊಡ್ಡ ಮಠಗಳು ಎನ್ನಲಾಗಿರುವ ಸಿದ್ಧಗಂಗಾ ಮಠ, ಸುತ್ತೂರು ಮಠ, ಮೂರುಸಾವಿರ ಮಠ, ತರಳಬಾಳು, ಕೊಪ್ಪಳದ ಮಠ, ಸಿದ್ಧಾರೂಢ.. ಹೀಗೆ ಒಂದಷ್ಟು ದೊಡ್ಡ ದೊಡ್ಡ ಮಠಗಳು ಮಾತೇ ಆಡುತ್ತಿಲ್ಲ. ಇನ್ನು ಸ್ವಾಮೀಜಿಗಳು ಒಂದೊಂದು ಪಕ್ಷದ ಒಬ್ಬೊಬ್ಬ ನಾಯಕರ ಮಟ್ಟಿಗೆ ಸೀಮಿತರಾಗಿದ್ದಾರೆ. ಹೀಗಾಗಿ ವೀರಶೈವ ಮಹಾಸಭಾದ ವಾದ ಒಂದಾದರೆ, ಲಿಂಗಾಯತರ ಒಕ್ಕೂಟದ ವಾದವೇ ಒಂದು. ಪಂಚಮಸಾಲಿಗಳದ್ದೇ ಮತ್ತೊಂದು. ಹೀಗಾಗಿ ಇದರ ಲಾಭ ಪಡೆಯುತ್ತಿರುವುದು ಬೇರೆಯವರು.
ಇನ್ನು ನಾಯಕರ ವಿಷಯಕ್ಕೆ ಬಂದರೆ ಲಿಂಗಾಯತ ನಾಯಕರ ವಿಷಯದಲ್ಲಿ ಪಕ್ಷಾತೀತ ನಾಯಕರಾಗಿ ಬಿಜೆಪಿಯಲ್ಲೇ ಇದ್ದರೂ ಯಡಿಯೂರಪ್ಪ ಇದ್ದಾರೆ. ಇನ್ನು ವಿಜಯೇಂದ್ರ ಬಹಿರಂಗವಾಗಿ ವಿರೋಧಿಸಿದ್ದರೆ, ವಿ ಸೋಮಣ್ಣ, ಬೊಮ್ಮಾಯಿ ಮೊದಲಾದವರು ಮಾಧ್ಯಮಗಳಿಗೂ ಸಿಗುತ್ತಿಲ್ಲ. ಕಾಂಗ್ರೆಸ್ಸಿನ ಎಂಬಿ ಪಾಟೀಲರಿಗೆ ವಿರೋಧಿಸಿದರೆ ಸಿದ್ದರಾಮಯ್ಯ ಗುರ್ ಅಂದಾರು ಎನ್ನುವ ಭಯ. ವಿಜಯಾನಂದ ಕಾಶಪ್ಪನವರ್ ಅವರಿಗೆ ಒಳಸುಳಿಗಳು ಅರ್ಥವೇ ಆಗುತ್ತಿಲ್ಲವೇನೋ. ಗೊತ್ತಿಲ್ಲ. ಜೆಡಿಎಸ್ಸಿನಲ್ಲಿ ದೊಡ್ಡ ದೊಡ್ಡ ನಾಯಕರು ಎನಿಸಿಕೊಂಡರು ಹೊರಗೆ ಕಾಣಿಸುತ್ತಿಲ್ಲ.
ಒಕ್ಕಲಿಗರಲ್ಲಿಯೂ ಹೋರಾಟದ ಕೊರತೆ..!
ಇನ್ನು ಒಕ್ಕಲಿಗರ ವಿಷಯಕ್ಕೆ ಬಂದರೆ ಒಂದು ಲೆಕ್ಕದಲ್ಲಿ ಆದಿ ಚುಂಚನಗಿರಿ ಮಠದ ನಿರ್ಣಯವನ್ನು ಅಂತಿಮ ನಿರ್ಣಯ ಎಂದು ಪರಿಗಣಿಸಲಾಗುತ್ತಿದೆ. ಅವರೇನೋ ವಿರೋಧಿಸಿದ್ದಾದರೆ. ಅದರೆ ಇಲ್ಲಿ ಕಾಣುತ್ತಿರುವ ಕೊರತೆ ನಾಯಕರದ್ದು. ಡಿಕೆ ಶಿವಕುಮಾರ್, ಡಿಸಿಎಂ. ವಿರೋಧಿಸಿದರೂ ಲೆಕ್ಕಾಚಾರದಲ್ಲಿ ವಿರೋಧಿಸಬೇಕು. ಇನ್ನು ದೇವೇಗೌಡರ ನೇತೃತ್ವ ಒಪ್ಪಿಕೊಳ್ಳೋಕೆ ಡಿಕೆಗೆ ಇಷ್ಟವಿಲ್ಲ. ಕುಮಾರಸ್ವಾಮಿ ವಿಷಯದಲ್ಲಿ ಗುರ್ ಗುರ್ ನಿಂತಿಲ್ಲ. ಹೀಗೆ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಕಾಡುತ್ತಿದೆ.