ಜಾತಿ ಗಣತಿ ವಿಚಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿಯೇ ಜಟಾಪಟಿ ಜೋರಾಗಿದೆ. ಹೊರಗೆ ಜಾತಿ ಗಣತಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ನಾಯಕರೇ, ಸಂಪುಟ ಸಭೆಯಲ್ಲಿ ತಿರುಗಿ ಬಿದ್ದಿದ್ದಾರೆ. ವಾಸ್ತವವಾಗಿ ಹೇಳಬೇಕೆಂದರೆ ಸಿದ್ಧರಾಮಯ್ಯ ಸಂಪುಟದಲ್ಲಿದ್ದ ಸಚಿವರಿಗೆ, ತಾವು ಪ್ರತಿನಿಧಿಸುವ ಸಮುದಾಯವೇ ಅಪಾಯಕ್ಕೆ ಸಿಲುಕುತ್ತಿದೆ ಎಂಬ ವಿಚಾರ ವಿಳಂಬವಾಗಿ ಗೊತ್ತಾಗಿದೆ ಎನ್ನುವುದು ಕೆಲವರ ಮಾತು. ಇದೆಲ್ಲದರ ಮಧ್ಯೆ ಸಂಪುಟ ಸಭೆಯಲ್ಲಿ ಸಿದ್ಧರಾಮಯ್ಯ ಅವರ ಆಪ್ತ ಸಚಿವರೇ, ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಇದು ಹಠ ಹಿಡಿದಿದ್ದ ಸಿದ್ಧರಾಮಯ್ಯ ಅವರನ್ನೂ ಕಂಗಾಲಾಗುವಂತೆ ಮಾಡಿದೆ. ಏಕೆಂದರೆ ಹಾಗೆ ತಿರುಗಿ ಬಿದ್ದ ಸಚಿವರಲ್ಲಿ ಸಿದ್ಧರಾಮಯ್ಯ ಅತ್ಯಾಪ್ತರೂ ಇದ್ದರು. ನೇತೃತ್ವ ವಹಿಸಿದ್ದವರು ಮಾತ್ರ ಡಿಸಿಎಂ ಡಿಕೆ ಶಿವಕುಮಾರ್. ಅಷ್ಟೇ.
ಸಚಿವ ಎಂಬಿ ಪಾಟೀಲ್, ಸಿದ್ಧರಾಮಯ್ಯನವರ ಅತ್ಯಾಪ್ತ ಸಚಿವರಲ್ಲೊಬ್ಬರು. ಅವರು ಪೇಪರ್ ಹರಿದು, ಸಿದ್ಧು ಅವರ ಟೇಬಲ್ ಕುಟ್ಟಿ ಮಾತನಾಡಿದ್ದಾರೆ. ಲಿಂಗಾಯತರನ್ನು ಒಡೆಯಲು ಅನುಮತಿ ಕೊಟ್ಟಿದ್ದು ಯಾರು ಎಂದು ಕೂಗಾಡಿದ್ದಾರೆ ಎನ್ನಲಾಗಿದೆ. ಈಶ್ವರ್ ಖಂಡ್ರೆ, ಶಾಮನೂರು ಮಲ್ಲಿಕಾರ್ಜು ಅವರೂ ಎಂಬಿ ಪಾಟೀಲ್ ಅವರಿಗೆ ದನಿಗೂಡಿಸಿದ್ದಾರೆ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಡಿಎಸ್.ಎಸ್ ಮಲ್ಲಿಕಾರ್ಜುನ್ ಜಾತಿ ಸಮೀಕ್ಷೆಯೇ ಬೇಡ ಎಂಬ ವಾದ ಮುಂದಿಟ್ಟಿದ್ದಾರೆ.
ಈ ನಡುವೆ ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್ ಸಿ ಮಹದೇವಪ್ಪ, ಸಂತೋಷ್ ಲಾಡ್ ಸಿದ್ಧರಾಮಯ್ಯ ಹಾಗೂ ಜಾತಿ ಸಮೀಕ್ಷೆಯನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವಾಗ ಸಚಿವರು ಕೆರಳಿದರು ಎಂದು ಅರಿವಾಯಿತೋ, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಸಿದ್ಧರಾಮಯ್ಯ ಅವರೇ ತಡೆದಿದ್ದಾರೆ.
ಸಚಿವರ ಆಕ್ರೋಶಕ್ಕೆ ಕಾರಣಗಳೂ ಇವೆ. ಜಾತಿ ಪಟ್ಟಿಯಲ್ಲಿ 331 ಜಾತಿಗಳ ಸೇರ್ಪಡೆಯಾಗಿದ್ದು, ಇದನ್ನು ಪರಿಗಣಿಸುವುದು ಹೇಗೆ.. ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಕ್ರಿಶ್ಚಿಯನ್ ಜಾತಿಗಳ ಹೆಸರಲ್ಲಿ ಅತೀ ಹೆಚ್ಚು ಜನ ಇರುವುದು ಲಿಂಗಾಯತರಲ್ಲಿ ಎನ್ನುವುದು ಎಂಬಿ ಪಾಟೀಲರ ಪ್ರಶ್ನೆ. ಜೊತೆಗೆ ಇತರೆ ಸಮುದಾಯದವರೂ ಅದೇ ಪ್ರಶ್ನೆ ಎತ್ತಿದ್ದಾರೆ. ಸಮೀಕ್ಷೆ ಬಗ್ಗೆ ಹಲವು ಸಮುದಾಯಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದು ಜಾತಿ ಗಣತಿ ಅಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಜನರಿಗೆ ಮನವರಿಕೆ ಮಾಡಿಕೊಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಕೊನೆಗೆ ಸಿದ್ಧರಾಮಯ್ಯ ಕಂಗಾಲಾಗಿ ʻʻತಮ್ಮ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಪರ ಮೇಲ್ವರ್ಗದ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಿರುವಾಗ ಸಮೀಕ್ಷೆ ಆರ್ಥಿಕ ಪರಿಸ್ಥಿತಿ ಅರಿಯಲು ಎಂದು ಹೇಗೆ ಜನರಿಗೆ ಮನವರಿಕೆ ಮಾಡುತ್ತೀರಿ.. ನನಗೆ ಜಾತಿವಾದಿ ಅಂತ ಪಟ್ಟ ಕಟ್ಟುತ್ತಿದ್ದಾರೆ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಅದನ್ನು ಸರಿಪಡಿಸಲು ಸಮೀಕ್ಷೆ ಮಾಡ್ತಿರೋದು. ಆದರೆ, ಇದು ಕೇವಲ ಜಾತಿ ಸಮೀಕ್ಷೆ ಎಂದು ಬಿಂಬಿಸುತ್ತಿದ್ದಾರೆ. ಬಡವರ ಪರ ಸಮೀಕ್ಷೆ ಆಗಲಿ ಎಂಬುದು ನಮ್ಮ ಉದ್ದೇಶʼʼ ಎಂದು ಹೇಳಿದ್ದಾರೆ.
ಕೊನೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿ, ಜಾತಿ ಗಣತಿ ಕಾಲಂಗಳಲ್ಲಿ ಸಂಪೂರ್ಣವಾಗಿ ಗೊಂದಲ ಮಾಡಿದ್ದಾರೆ. ಇದರಿಂದ ದೊಡ್ಡ ಡ್ಯಾಮೇಜ್ ಆಗುತ್ತೆ. ಸದ್ಯಕ್ಕೆ ಈ ಗೊಂದಲ ಪರಿಹರಿಸಿ ಎಂದು ಮನವಿ ಮಾಡಿದ್ದಾರೆ. ಕ್ಯಾಬಿನೆಟ್ ನಂತರ ಕೆಲವು ಸಚಿವರು ತಮ್ಮ ತಮ್ಮ ಸಮುದಾಯದ ನಾಯಕರ ಜೊತೆ, ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಅಂತಿಮ ಫಲಿತಾಂಶ ಇನ್ನೂ ಬರಬೇಕಿದೆ.



