ಜಾತಿ ಗಣತಿ ಕುರಿತಂತೆ ಒಕ್ಕಲಿಗರು ನೇರವಾಗಿ ಸರ್ಕಾರಕ್ಕೆ, ಸಿದ್ಧರಾಮಯ್ಯ ಅವರಿಗೆ ಡೈರೆಕ್ಟ್ ವಾರ್ನಿಂಗ್ ಕೊಟ್ಟಿದ್ದಾರೆ. ಸರ್ಕಾರಕ್ಕೆ, ಸಿದ್ದರಾಮಯ್ಯ ಅವರಿಗೆ ಉಳಿಗಾಲವಿಲ್ಲ ಎಂದೆಲ್ಲ ಮಾತನಾಡಿದ್ದಾರೆ. ಆದಿಚುಂಚನಗಿರಿ ಪೀಠದ ನಿರ್ಮಲಾನಂದ ಶ್ರೀಗಳ ಸೂಚನೆಯಂತೆ ಸಭೆ ನಡೆದು, ಆ ಮೂಲಕ ಒಕ್ಕಲಿಗ ಸಮುದಾಯದ ಆಕ್ರೋಶ, ವಿರೋಧವನ್ನು ದಾಖಲಿಸಿ ಆಗಿದೆ. ಆದರೆ ಲಿಂಗಾಯತರ ವಿರೋಧ ಎಲ್ಲಿ..? ಈ ಪ್ರಶ್ನೆಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳಿಂದ ಉತ್ತರ ಸಿಕ್ಕಿದೆ.
ಇವತ್ತಿನ ದಿನ ಜಾತಿಗಣತಿ ಬಹಳ ಚರ್ಚೆಯಾಗುತ್ತಿದೆ. ಜಾತಿ ಗಣತಿಯ ವರದಿಯೂ ಬಂದಿದೆ. ವರದಿಯನ್ನ ಎಲ್ಲಾ ಮಂತ್ರಿಗಳಿಗೆ ಪಟ್ಟಿ ಮಾಡಿ ಕೊಟ್ಟಿದ್ದಾರೆ. ಹಲವರು ವಿರೋಧ ಮಾಡುತ್ತಿರುವುದಕ್ಕೆ ಕಾರಣಗಳೂ ಇವೆ. ವಿರೋಧ ಅಂದ್ರೆ ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿಲ್ಲ. ಬಹುತೇಕ ಎಲ್ಲರನ್ನ ಭೇಟಿ ಮಾಡಿಲ್ಲ ಎಂಬ ಕಾರಣ ಹೇಳ್ತಿದ್ದಾರೆ. ಸರ್ಕಾರದ ಆದ್ಯ ಕರ್ತವ್ಯ ಏನಂದರೆ..
ಪ್ರತಿಯೊಬ್ಬರನ್ನು, ಪ್ರತಿಯೊಂದು ಸಮಾಜ, ಸಮುದಾಯವನ್ನು ಸಮಾನವಾಗಿ ಗೌರವಿಸಬೇಕು. ಇದು ಸರ್ಕಾರದ ಕರ್ತವ್ಯ. ಅದು ಯಾವುದೇ ಪಕ್ಷವಿರಲಿ, ಯಾವುದೇ ಸರ್ಕಾರ ಇರಲಿ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು. ಎಲ್ಲಾ ಜಾತಿಯಲ್ಲೂ ಬಡವರು, ಅನಾಥರು, ಹಿಂದುಳಿದವರು ಬಹಳಷ್ಟಿದ್ದಾರೆ. ಮುಂದುವರಿದ ಸಮಾಜದಲ್ಲಿಯೂ ಹಿಂದುಳಿದವರಿದ್ದಾರೆ. ಹಿಂದುಳಿದ ಸಮಾಜದಲ್ಲಿ ಮುಂದುವರೆದವರು ಇದ್ದಾರೆ. ಈಗ ಅಂತಹವರಿಗೆ ಶಕ್ತಿ ತುಂಬಬೇಕು ಎಂಬ ಉದ್ದೇಶ ಇಟ್ಟುಕೊಂಡು ಮಾಡಿರುವ ಸಮೀಕ್ಷೆ, ಅಪೂರ್ಣವಾಗಿದೆ.
ಎಲ್ಲರನ್ನೂ ಕೇಳಿದ್ದೇವೆ ಎನ್ನುತ್ತಿದ್ದಾರೆ. ನಮ್ಮನ್ನು ಕೇಳಿದ್ದಾರಾ, ನಿಮ್ಮನ್ನ ಕೇಳಿದ್ದಾರಾ,ಯಾರು ಬಂದಿದ್ದರು ಎಂದರೆ ಇಲ್ಲ, ಯಾರೂ ಗೊತ್ತಿಲ್ಲ ಎಂಬ ಮಾತುಗಳನ್ನೇ ಎಲ್ಲರೂ ಹೇಳ್ತಿದ್ದಾರೆ. ಅದ್ದರಿಂದ ಪ್ರತಿಯೊಬ್ಬರನ್ನು ಕೇಳಿ ಮಾಡಿ ತಿಳ್ಕೊಂಡು ಎಲ್ಲಾ ಜಾತಿ ಜನಾಂಗದಲ್ಲಿ ಹೇಗೆ ಇದ್ದಾರೆ. ಯಾವ ಸ್ಥಿತಿಯಲ್ಲಿ ಇದ್ದಾರೆ ಅನ್ನೋದನ್ನ ನ್ಯಾಯಯುತವಾಗಿ ವರದಿ ಮಾಡಬೇಕಾದ್ದು ಸರ್ಕಾರದ ಧರ್ಮ. ಕರ್ತವ್ಯ. ಹೀಗೆ ಹೇಳಿರುವ ಸಿದ್ಧಗಂಗಾ ಶ್ರೀ ಸರ್ಕಾರದ ಜಾತಿ ಗಣತಿ ವರದಿಯ ಮೂಲವೇ ಸರಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸಿದ್ಧಗಂಗಾ ಮಠಕ್ಕೂ ಯಾರೂ ಜಾತಿ ಗಣತಿಗೆ ಬಂದಿಲ್ಲ :
ಈ ಸಮಿಕ್ಷೆ ಮಾಡಲು ನಿಮ್ಮ ಸಿದ್ಧಗಂಗಾ ಮಠಕ್ಕೆ ಬಂದಿದ್ದರಾ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಸ್ವಾಮೀಜಿ ʻಯಾರೂ ಬಂದಿಲ್ಲ, ಇಲ್ಲಿ ಯಾರನ್ನ ಕೇಳಿದ್ರೂ ಯಾರೂ ನಮಗೆ ಗೊತ್ತಿಲ್ಲ ಅಂತಿದ್ದಾರೆ. ಅದರ ಬಗ್ಗೆ ನಮಗೆ ಮಾಹಿತಿ ಇಲ್ಲʼʼ ಎಂದಿದ್ದಾರೆ. ಪ್ರಬಲ ದುರ್ಬಲ ಪ್ರಶ್ನೆ ಇಲ್ಲ.ಎಲ್ಲರು ಸಮಾನವಾಗಿಯೇ ಇರಬೇಕು. ಸಂಖ್ಯೆ ಜಾಸ್ತಿ ಇರಬಹುದು, ಕಡಿಮೆ ಇರಬಹುದು ಹೊರತು, ಲಿಂಗಾಯತ ಸಮುದಾಯದಲ್ಲಿಯೂ ಕೂಲಿ ಮಾಡುವ ಜನ ಇದ್ದಾರೆ. ದಿನ ಕೂಲಿ ಕೆಲಸ ಮಾಡುವವರಿದ್ದಾರೆ. ಕೆಲವು ಕಡೆಗಳಲ್ಲಿ ಜನ ಗುಳೆ ಎದ್ದು ಹೋಗ್ತಿದ್ದಾರೆ. ಲಿಂಗ ಹಾಕಿರ್ತಾರೆ, ರಸ್ತೆಯಲ್ಲಿ ಮಕ್ಕಳನ್ನ ಕಟ್ಟಿಕೊಂಡು ಕೆಲಸ ಮಾಡ್ತಿರ್ತಾರೆ.. ಅಂತಹರ ಏಳಿಗೆಗೆ ಶ್ರಮಿಸಬೇಕು ಎಂದಿದ್ದಾರೆ.
ಜಾತಿವಾರುಗಿಂತ ಆರ್ಥಿಕವಾದ ಹಿನ್ನೆಲೆ ಇಟ್ಟುಕೊಂಡು ಮುಂದೆ ತರುವಂತಹ ಪ್ರಯತ್ನ ಮಾಡಬೇಕು. 10 ವರ್ಷದ ಹಿಂದಿನ ಜಾತಿಗಣತಿ ಅಂತ ಹೇಳ್ತಿದ್ದಾರೆ. 10 ವರ್ಷದಿಂದ ಎಷ್ಟು ಬದಲಾವಣೆ ಆಗಿರಬಹುದು. ಅದನ್ನ ಮಾನದಂಡವಾಗಿ ಇಟ್ಟುಕೊಳ್ಳಬೇಕಾಗುತ್ತೆ. 10 ವರ್ಷದ ಹಿಂದಿನದ್ದನ್ನ ಜಾರಿಗೆ ತರುವುದು ಸರಿಯಲ್ಲ. ಹೊಸದಾಗಿ ಸಮೀಕ್ಷೆ ಮಾಡಿ ಅದರ ಬಗ್ಗೆ ಕ್ರಮ ಕೈಗೊಂಡರೇ ಎಲ್ಲರೂ ಕೂಡಾ ಸ್ವಾಗತ ಮಾಡ್ತಾರೆ ಎಂದೂ ಸರ್ಕಾರಕ್ಕೆ ಕಿವಿ ಮಾತು ಹೇಳಿದ್ದಾರೆ.