ಜಾತಿ ಗಣತಿ. 2017ರಲ್ಲಿ ಮಾಡಿರುವ ಜಾತಿ ಗಣತಿ ವರದಿಯನ್ನು ಬರೋಬ್ಬರಿ 10 ವರ್ಷಗಳ ನಂತರ ಹೊರಬಿಟ್ಟಿದೆ ರಾಜ್ಯದ ಸರ್ಕಾರ. ಲೆಕ್ಕದ ಪ್ರಕಾರ ಶೇ.96ರಷ್ಟು ಮನೆ ಮನೆ ಸಮೀಕ್ಷೆ ಮಾಡಿದ್ದೇವೆ ಎನ್ನುತ್ತಿದ್ದಾರೆ ಸಿದ್ದರಾಮಯ್ಯ. ಆದರೆ ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಗಂಭೀರ ಪ್ರಶ್ನೆ ಎತ್ತಿದ್ದಾರೆ.
ಪ್ರಶ್ನೆ ನಂ.1 : ಮನೆಗೆ ಬಾರದೆ ಎಲ್ಲಿಂದ ಮಾಹಿತಿ ಬಂತು..?
ನಮ್ಮ ರಾಜ್ಯದಲ್ಲಿ ಏಳು ಕೋಟಿ ಕನ್ನಡಿಗರು ಇದ್ದಾರೆ. ಸಮೀಕ್ಷೆ ನಡೆಸಿದವರು ಎಷ್ಟು ಮನೆಗಳಿಗೆ ಹೋಗಿದ್ದಾರೆ ಎಂಬ ದಾಖಲೆಗಳು ಇರಬೇಕು. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಆಗಿರುವ ನಮ್ಮ ತಂದೆಯ ಮನೆಗೆ ಯಾರೂ ಬಂದು ಸಮೀಕ್ಷೆ ಮಾಡಿಲ್ಲ. ಹಾಗಾದರೆ ಈ ಸಮೀಕ್ಷೆ ಮಾಡಿದವರು ಎಲ್ಲಿಂದ ಮಾಹಿತಿ ತಂದರು..?
ಪ್ರಶ್ನೆ ನಂ.2 : ದೇವೇಗೌಡರ ಮನೆಗೂ ಬಂದಿಲ್ಲ.. ನಿಖಿಲ್ ಮನೆಗೂ ಬಂದಿಲ್ಲ..!
ಅದೇ ರೀತಿ ನಮ್ಮ ಅಜ್ಜ, ಈ ದೇಶದ ಮಾಜಿ ಪ್ರಧಾನಿಗಳು. ಅವರ ಮನೆಗೂ ಯಾರೂ ಭೇಟಿ ಕೊಟ್ಟು ಸಮೀಕ್ಷೆ ಮಾಡಿಲ್ಲ. ನಮ್ಮ ಮನೆಗೂ ಬಂದಿಲ್ಲ. ಇಂಥ ಅಸಂಖ್ಯಾತ ಉದಾಹರಣೆಗಳನ್ನು ಕೊಡಬಲ್ಲೆ. ಕಾಕಾ ಪಾಟೀಲ್ ಮನೆಗೂ ಬಂದಿಲ್ಲ, ಮಹದೇವಪ್ಪನ ಮನೆಗೂ ಬಂದಿಲ್ಲ, ಗಣತಿ ವೈಜ್ಞಾನಿಕವಾಗಿ, ಪ್ರತಿಯೊಂದು ಕುಟುಂಬದ ಮನೆ ಬಾಗಿಲಿಗೆ ಹೋಗಿ ಮಾಡಬೇಕಿತ್ತು. ಆ ರೀತಿ ಆಗಿಲ್ಲ
ಪ್ರಶ್ನೆ ನಂ. 3 : ಸೋರಿಕೆ ಮಾಡ್ತಿರೋದು ಏಕೆ..?
ಜಾತಿ ಗಣತಿ ವರದಿಗಳು ಆಗಾಗ್ಗೆ ಸೋರಿಕೆಯಾಗುತ್ತಲೇ ಇವೆ. ಅಂಕಿ-ಅಂಶ ಸೋರಿಕೆಯಾಗಿದೆ. ಎಲ್ಲಾ ಪತ್ರಿಕೆ, ಸುದ್ದಿವಾಹಿನಿಗಳು ಆ ಅಂಕಿ ಅಂಶಗಳು ಬಿತ್ತರವಾಗಿತ್ತಿವೆ. ಈ ಅಂಕಿ ಅಂಶಗಳನ್ನು ಹೊರ ಹಾಕಿರುವವರು ಅಥವಾ ಸೋರಿಕೆ ಮಾಡಿದವರು ಯಾರು? ವರದಿ ಅಧಿಕೃತವಾಗಿ ಇನ್ನೂ ಬಹಿರಂಗ ಆಗಿಲ್ಲ. ಅಂಕಿ ಅಂಶಗಳು ಎಲ್ಲಾ ಕಡೆ ತೇಲಾಡುತ್ತಿವೆ. ಆದರೆ, ಇದು ಅನಧಿಕೃತ ಮಾಹಿತಿ. ಊಹಾಪೋಹದ ಅಂಕಿ ಅಂಶಗಳು. ಇದು ಸರ್ಕಾರದ ಕಡೆಯಿಂದಲೇ ಸೋರಿಕೆ ಆಗಿರುವ ಅನಧಿಕೃತ ಅಂಕಿ ಅಂಶ. ಸರ್ವಜನಿಕ ವಲಯದಲ್ಲಿ ಯಾವ ರೀತಿ ಚರ್ಚೆ ಬರಬಹುದೆಂದು ನೋಡೋಣ ಎಂದು ಸಿದ್ದರಾಮಯ್ಯ ಅವರು ಟೆಸ್ಟ್ ರನ್ ಮಾಡುತ್ತಿದ್ದಾರೆ.
ಪ್ರಶ್ನೆ ನಂ. 4 : 150 ಕೋಟಿ ಖರ್ಚು ತನಿಖೆ ಮಾಡಿ
ಕಾಂತರಾಜು ಆಯೋಗದ ವರದಿಗೆ 150 ಕೋಟಿ ಖರ್ಚು ಮಾಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಆಯೋಗ ಯಾರ ಮನೆಗೂ ಹೋಗಿ ಸಮೀಕ್ಷೆ ಮಾಡಿಲ್ಲ ಎಂದು ಜನರೇ ಹೇಳುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಸೃಷ್ಟಿಯಾದ ವರದಿ ಇದು. ಹಾಗಾದರೆ, ಇಷ್ಟು ಮೊತ್ತವನ್ನು ಎಲ್ಲಿ ಖರ್ಚು ಮಾಡಿದ್ದಾರೆ. ಯಾರ ಮನೆಗೆ ಹೋಗಿದ್ದಾರೆ? ಯಾಕೆ ಇಷ್ಟು ಹಣ ಖರ್ಚು ಮಾಡಿದ್ದಾರೆ? ಲೆಕ್ಕ ಬೇಕಲ್ಲವೇ? ಇದರ ಬಗ್ಗೆಯೂ ತನಿಖೆ ನಡೆಸಬೇಕು.
ಪ್ರಶ್ನೆ ನಂ. 5 : ಯಾರನ್ನೋ ಮೆಚ್ಚಿಸುವುದಕ್ಕೆ ವರದಿ
ಜಾತಿ ಗಣತಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಕೆಲ ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ. ಹಾಗಾಗಿ ಎಲ್ಲಿಯವರೆಗೆ ವರದಿ ಹೊರಗೆ ಬಂದಿಲ್ಲ. ಅಲ್ಲಿಯವರೆಗೆ ನಾವು ಚರ್ಚೆ ಮಾಡೋಕೆ ಆಗಲ್ಲ. ಒಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ರಾಜಕೀಯ ಅಸ್ತಿತ್ವಕ್ಕಾಗಿ ಜಾತಿಗಣತಿ ಮಂಡಿಸುವುದಕ್ಕೆ ಮುಂದಾಗಿದ್ದಾರಾ ಎಂಬ ಅನುಮಾನಗಳು ಚರ್ಚೆ ನಡೆಯುತ್ತಿದೆ. ಒಂದು ಸಮುದಾಯ ಮೆಚ್ಚಿಸುವುದಕ್ಕೆ ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಜಾತಿ ಗಣತಿ ಮಂಡಿಸುತ್ತಿದ್ದಾರೆ. ಒಂದು ಸಲ ಅಂಕಿ ಅಂಶಗಳ ಹೊರ ಹಾಕಲಿ. ಜಾತಿ ಗಣತಿ ಮಾಡಿರುವುದರಲ್ಲಿ ಸ್ಪಷ್ಟತೆ, ಪಾರದರ್ಶಕ ಇಲ್ಲದಿದ್ದರೆ. ನಾವು ಮರುಪರಿಶೀಲನೆಗೆ ಒತ್ತಡ ಹಾಕ್ತೀವಿ. ಪಾರದರ್ಶಕ ಇದೆ, ವೈಜ್ಞಾನಿಕವಾಗಿ ಇದೆ ಸಾರ್ವಜನಿಕ ವಲಯದಲ್ಲಿ ಇಡಲಿ ಎಂದಿದ್ದಾರೆ.
ಹೌದು, 150 ಕೋಟಿ ಖರ್ಚು ಮಾಡಿ, ಅತ್ತ ಜನಗಳ ಮನೆಗೂ ಹೋಗದೆ.. ಹೋಗಲಿ.. ದೊಡ್ಡ ದೊಡ್ಡ ರಾಜಕೀಯ ನಾಯಕರ ಮನೆಯಲ್ಲಿಯೂ ಗಣತಿ ಮಾಡದೆ.. 150 ಕೋಟಿ ಖರ್ಚು ಮಾಡಿದ್ದಾದರೂ ಎಲ್ಲಿ.. ನಿಖಿಲ್ ಪ್ರಶ್ನೆಗೆ ಸಿದ್ದರಾಮಯ್ಯ ಬಳಿ, ಸರ್ಕಾರದ ಬಳಿ ಉತ್ತರ ಇಲ್ಲ.



