ನಟ ಉಪೇಂದ್ರ (Upendra) ವಿರುದ್ಧ ರಾಜ್ಯಾದ್ಯಂತ ಕೇಸುಗಳ ಮೇಲೆ ಕೇಸು ಬೀಳುತ್ತಿವೆ. ಒಂದು ಸರ್ಕಾರದ್ದಾದರೆ, ಇನ್ನುಳಿದವು ದಲಿತ ಪರ ಹೋರಾಟಗಾರರದ್ದು. ನಟ (Upendra) ಉಪೇಂದ್ರ ಅಟ್ರಾಸಿಟಿ (Atrocity) ಕೇಸ್ ಎದುರಿಸುತ್ತಿದ್ದಾರೆ. ಒಂದಲ್ಲ..ಎರಡಲ್ಲ ಹಲವು ಕೇಸ್`ಗಳು. ಹಲವು ಎಫ್‍ಐಆರ್‍ಗಳು. ಚೆನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ, ಮತ್ತೊಂದು ಹಲಸೂರು ಗೇಟ್ ಠಾಣೆಯಲ್ಲಿ. ಇನ್ನೂ ಹಲವು ಪ್ರಕರಣ ದಾಖಲಾಗುವ ಸಾಧ್ಯತೆಗಳೂ ಇವೆ. ಒಂದು ದೂರನ್ನು ಸಮಾಜ ಕಲ್ಯಾಣ ಇಲಾಖೆಯೇ (Social welfare dept) ದಾಖಲಿಸಿದ್ದರೆ, ಮತ್ತೊಂದು ದೂರನ್ನು ವಕೀಲರೂ ಆಗಿರುವ ಶ್ರೀನಿವಾಸ್ ಎಂಬುವವರು ದಾಖಲಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಕಡೆಯಿಂದ ದೂರು ನೀಡಿರುವುದು ಸಹಾಯಕ ನಿರ್ದೇಶಕ ಮಧುಸೂದನ್. ಭೈರಪ್ಪ ಹರೀಶ್ (Bhairappa Hareesh) ಎಂಬುವವರು ಹಲಸೂರು ಗೇಟ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಇಷ್ಟೊಂದು ಕೇಸು ದಾಖಲಾಗಿರವ ಕಾರಣ ಅರೆಸ್ಟ್ ಆಗ್ತಾರಾ ಉಪೇಂದ್ರ..?
ಇದು ಶುರುವಾಗಿದ್ದು ಊರು ಅಂದ ಮೇಲೆ ಹೊಲಗೇರಿ ಇರುತ್ತೆ.. ವಿಡಿಯೋವೊಂದರಲ್ಲಿ ನಟ ಉಪೇಂದ್ರ ಆಡಿದ ಮಾತಿನಿಂದ. ಅದೀಗ ದೊಡ್ಡ ತಿರುವು ಪಡೆದುಕೊಂಡಿದೆ. ವಿಡಿಯೋ ಆಗಿದ್ದು ಆಗಸ್ಟ್ 12ನೇ ತಾರೀಕು. 13ನೇ ತಾರೀಕು ವಿವಾದವಾಗುತ್ತಿದ್ದಂತೆಯೇ ವಿಡಿಯೋ ಡಿಲೀಟ್ ಮಾಡಿ, ಕ್ಷಮೆ ಕೇಳಲಾಗಿದೆ. ಪ್ರಜಾಕೀಯ ಪಕ್ಷದ ಬಗ್ಗೆ ಮಾತನಾಡುವಾಗ ಆಡಿದ ಮಾತು ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದ ಲೈವ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಪದ ಬಳಸಿದ್ದರು. ಇದಾದ ನಂತರ, ಅವರೇ ಅಪ್ಲೋಡ್ ಮಾಡಿದ್ದ ವೀಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು. ಆದರೂ, ಅವರ ವಿರುದ್ಧ ಸಾಮಾಜಿಕ ಜಾಲತಾಣ ಸೇರಿ ಭೌತಿಕವಾಗಿ ರಾಮನಗರ ಸೇರಿ ವಿವಿಧೆಡೆ ಪ್ರತಿಭಟನೆ ಕೂಡ ಮಾಡಲಾಗಿದೆ.
ಸಮತಾ ಸೈನಿಕ ದಳದ ಮುಖಂಡರು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು, ಸರ್ಕಾರದಿಂದಲೇ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ನಟನಾಗಿರುವ ಉಪೇಂದ್ರ ಅವರು ರಾಜ್ಯಕ್ಕೆ ಮಾದರಿಯಾಗಬೇಕಿತ್ತು. ಆದರೆ, ಈಗ ಅವರ ಹೇಳಿಕೆಯನ್ನು ಕೆಲವರು ಅನುಕರಣೆ ಮಾಡಿದಲ್ಲಿ ಸಮಾಜದ ಸ್ವಾಸ್ಥ್ಯ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಜಾತಿನಿಂದನೆ ಆರೋಪದಡಿ ದೂರು ದಾಖಲಿಸಲಾಗಿದೆ ಎನ್ನುವುದು ಸಮಾಜ ಕಲ್ಯಾಣ ಇಲಾಖೆಯ ವಾದ.
ಉಪೇಂದ್ರ ವಿಡಿಯೋದಲ್ಲಿ ಏನು ಹೇಳಿದ್ದಾರೆ..?
ಇನ್ನೋಸೆಂಟ್ ಹೃದಯಗಳಿಂದಲೇ ನಿಜವಾದ ಬದಲಾವಣೆ ಸಾಧ್ಯ. ಇನ್ನೋಸೆಂಟ್ ಅಂದರೆ ಮುಗ್ಧತೆ ಇದೆಯಲ್ಲಾ ಅದೇ ಸತ್ಯದ ಮನಸ್ಸು. ಇನ್ನೋಸೆಂಟ್ ಮನಸ್ಸುಗಳು ಇಲ್ಲಿ ಜಾಯಿನ್ ಆಗಲಿ ಮಾತನಾಡಲಿ, ಹೇಳುವುದಕ್ಕೆ ಇಷ್ಟಪಡ್ತೀನಿ. ಅವರಿಂದ ನಮಗೆ ತುಂಬಾ ಬೆನಿಫಿಟ್ ಇದೆ, ಸಜೆಷನ್ ಕೂಡ ಉತ್ತಮವಾಗಿರುತ್ತದೆ. ಏನೋ ಒಂದು ಕೇರ್ಲೆಸ್ ಆಗಿ ಏನೋ ಒಂದು ಸಜೆಸ್ಟ್ ಮಾಡೋಣ, ಕೇರ್ಲೆಸ್ಆಗಿ ಅವಹೇಳನ ಮಾಡುವುದಾಗಲಿ, ಏನೋ ನಾವು ಮಾತನಾಡಬೇಕು ಟೈಮ್ ಇದೆ ಎಂದು ಬಾಯಿಗೆ ಬಂದಂತೆ ಕಮೆಂಟ್ ಮಾಡೋಣ ಎನ್ನುವವರೂ ಇದ್ದಾರೆ. ಅಂತಹವರನ್ನ ಬಿಡಿ, ಅವರನ್ನು ಏನೂ ಮಾಡೋಕೆ ಆಗಲ್ಲ. “ಊರು ಎಂದಮೇಲೆ ಹೊಲೆಗೇರಿ ಇರುತ್ತೆ”, ಆ ತರಹ ಇಂಥವರೂ ಇರುತ್ತಾರೆ ಜಗತ್ತಲ್ಲಿ ಏನೂ ಮಾಡೋಕಾಗಲ್ಲ. ಅವರನ್ನೆಲ್ಲಾ ಬಿಟ್ಟಾಕೋಣ ಅದನ್ನು ಓದೋದು ಬೇಡ ನಾವು. ಸ್ವಲ್ಪ ನಾವು ಹೇಳ್ತಿರೋದು ಇಂಥ ಒಂದು ಪ್ಯೂರ್ ಜನರನ್ನ ಪ್ರೀತಿಸೋವಂಥದ್ದು, ಜನರನ್ನು ಪ್ರೀತಿಸುವುದೇ ಜನಾರ್ಧನನ ಪೂಜೆ ಎನ್ನುತ್ತಾರೆ. ಜನರನ್ನು ಪ್ರೀತಿಸುವುದೇ ದೇಶಪ್ರೇಮ ಎನ್ನುತ್ತಾರೆ ಎಂದು ಮಾತನಾಡಿದ್ದಾರೆ.
ಕ್ಷಮೆ ಕೇಳಿದ್ದರೂ ದೂರು ವಾಪಸ್ ಆಗಿಲ್ಲ : ತಮ್ಮ ಹೇಳಿಕೆಯ ವಿವಾದ ಆಗುತ್ತಿದ್ದಂತೆಯೇ, ಆ ವಿಡಿಯೋವನ್ನು ಡಿಲೀಟ್ ಮಾಡಿ, ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದ ಉಪೇಂದ್ರ, “ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು.. ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ ಮತ್ತು ಈ ಮಾತಿಗೆ ಕ್ಷಮೆಯಿರಲಿ”ಎಂದು ಮನವಿ ಮಾಡಿಕೊಂಡಿದ್ದರು.
ಆದರೆ ಕೇಸ್ ಹಿಂತೆಗೆದುಕೊಂಡಿಲ್ಲ. ಎಫ್‍ಐಆರ್ ರದ್ದಾಗಿಯೂ ಇಲ್ಲ. ಏಕೆಂದರೆ ದೂರು ನೀಡಿರುವುದು ಖುದ್ದು ಸಮಾಜ ಕಲ್ಯಾಣ ಇಲಾಖೆ. ಅರ್ಥಾತ್ ಸರ್ಕಾರ. ಕೇಸ್ ಕುರಿತಂತೆ ಮತ್ತೊಂದು ಪೋಸ್ಟ್ ಹಾಕಿರುವ ಉಪೇಂದ್ರ ತಮ್ಮ ಬದುಕಿನ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ. ನಾನೂ ಅವಮಾನ, ತುಳಿತ ಅನುಭವಿಸಿ ಬಂದವನೇ.. ಕ್ಷಮೆ ಸ್ವೀಕರಿಸುವ ದೊಡ್ಡತನವೂ ಇಲ್ಲವೇ ಎನ್ನುವುದು ಉಪೇಂದ್ರ ಪ್ರಶ್ನೆ.
ಕಾನೂನು ಏನು ಹೇಳುತ್ತೆ..? ಅರೆಸ್ಟ್ ಆಗ್ತಾರಾ ಉಪೇಂದ್ರ..? (What is Atrocity case? Weather Upendra to be arrest or not? )
ಎರಡೂ ದೂರುಗಳನ್ನು, ಎರಡೂ ಎಫ್‍ಐಆರ್`ನ್ನು ಒಂದೇ ಕೇಸ್ ಎಂದು ಪರಿಗಣಿಸಬಹುದು. ಅಥವಾ ಎರಡೂ ಕೇಸ್`ಗಳಲ್ಲಿ ಉಪೇಂದ್ರ ಪ್ರತ್ಯೇಕವಾಗಿ ವಿಚಾರಣೆ ಎದುರಿಸಬೇಕಾಗಬಹುದು. ಅರೆಸ್ಟ್ ಆಗುವ ಸಾಧ್ಯತೆ ಇಲ್ಲದೇ ಇಲ್ಲ. ದೂರಿನ ಪ್ರಕಾರ ಅಟ್ರಾಸಿಟಿ ಕೇಸು ದಾಖಲು ಮಾಡಿದ್ದಾರೆ. ಎಸಿಪಿ ಅಥವಾ ಅದಕ್ಕೂ ಮೇಲ್ಪಟ್ಟ ದರ್ಜೆಯ ಅಧಿಕಾರಿಯೇ ತನಿಖೆ ಮಾಡುತ್ತಾರೆ. ರೂಲ್ಸ್ ಪ್ರಕಾರ ಎಸಿಪಿ ದರ್ಜೆಯ ಅಥವಾ ಮೇಲ್ಪಟ್ಟ ಅಧಿಕಾರಿಗಳೇ ತನಿಖೆ ಮಾಡಬೇಕು. ತನಿಖಾಧಿಕಾರಿ ಉಪೇಂದ್ರ ಅವರನ್ನು ಅರೆಸ್ಟ್ ಮಾಡಬಹುದು ಅಥವಾ ಮಾಡದೆಯೂ ಇರಬಹುದು. ಅದು ತನಿಖಾಧಿಕಾರಿಗಳಿಗೆ ಬಿಟ್ಟ ವಿಷಯ. ಆದರೆ ಅದಕ್ಕೂ ಮುನ್ನ ನೋಟಿಸ್ ಕೊಡಲಾಗುತ್ತದೆ. ನೋಟಿಸ್ ನಂತರವೇ ಅರೆಸ್ಟ್ ಮಾಡುವುದಾ ಅಥವಾ ಬಿಡುವುದಾ ಎಂಬ ನಿರ್ಧಾರವನ್ನು ತನಿಖಾಧಿಕಾರಿಗಳು ತೆಗೆದುಕೊಳ್ಳುತ್ತಾರೆ.



