ಇದು ಹೊಸದಲ್ಲ. ಇದಿನ್ನೂ ಆರಂಭವಷ್ಟೆ. ಇತ್ತೀಚೆಗೆ ನೀವು ಸಿನಿಮಾಗಳಲ್ಲಿ ದೃಶ್ಯಕ್ಕೆ, ಪಾತ್ರಕ್ಕೆ ಅಗತ್ಯ ಇದೆಯೋ.. ಇಲ್ಲವೋ.. ಹೀರೋಗಳು ಸ್ಮೋಕಿಂಗ್ ಮಾಡೋದನ್ನು ನೋಡಿರುತ್ತೀರಿ. ಚುಟ್ಟಾ ಹಚ್ಚಿಕೊಳ್ಳೋದನ್ನೂ ನೋಡಿರುತ್ತೀರಿ. ಆದರೆ ಇದರ ಹಿಂದಿನ ಕಥೆಯೇ ಬೇರೆ. ನೀವು ಕೆಜಿಎಫ್ ನೋಡಿರಬಹುದು, ಕೆಂಪಗೆ ಕಾದಿರುವ ಗನ್ ಬ್ಯಾರೆಲ್`ನಿಂದ ಸಿಗರೇಟು ಹಚ್ಚಿಕೊಳ್ಳುವ ದೃಶ್ಯ. ಚಿತ್ರದಲ್ಲಿ ಮತ್ತೆಲ್ಲೂ ಅಂತಹ ದೃಶ್ಯ ಬರಲ್ಲ. ಆದರೆ ಟ್ರೇಲರ್`ನಲ್ಲಿ ಹೈಲೈಟ್ ಆಗಿತ್ತು. ಸ್ಟಾರ್ ನಟರ ಚಿತ್ರಗಳಲ್ಲಿ ಇತ್ತೀಚೆಗೆ ಇಂತಹ ದೃಶ್ಯಗಳು ಆಗಾಗ್ಗೆ ಕಾಣಿಸಿಕೊಳ್ತಿವೆ.
ಅದಿರಲಿ.. ತಮಿಳು ನಟ ವಿಜಯ್ ವಿರುದ್ಧ ಮಾದಕ ವಸ್ತುಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಲಿಯೋ ಅನ್ನೋ ತಮಿಳು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆ ಚಿತ್ರದ ನಾ ರೆಡಿ.. ಅನ್ನೋ ಹಾಡಿನ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿತ್ತು. ಆ ಹಾಡಿನಲ್ಲಿ ವಿಜಯ್ ಅವರು ಸ್ಮೋಕಿಂಗ್ ಮಾಡುತ್ತಲೇ ಡ್ಯಾನ್ಸ್ ಸ್ಟೆಪ್ ಹಾಕುವ ದೃಶ್ಯಗಳಿದ್ದವು. ಹಾಡಿನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿವೆಯಾದರೂ, ಹಾಡು ಹಿಟ್ ಆಗಿದೆ. ಆದರೆ, ಜೊತೆಯಲ್ಲೇ ಸೆಲ್ವಂ ಎಂಬ ಆರ್`ಟಿಐ ಕಾರ್ಯಕರ್ತರೊಬ್ಬರು ವಿಜಯ್ ವಿರುದ್ಧ ಮಾದಕ ವಸ್ತು ಬಳಕೆ ಮತ್ತು ರೌಡಿಸಂ ವೈಭವೀಕರಣ ಮಾಡುತ್ತಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಜೂನ್ 25ರಂದು ಆನ್ಲೈನ್ನಲ್ಲಿ ದೂರನ್ನು ದಾಖಲಿಸಿದ್ದಾರೆ. ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ಅಡಿ ಈ ಚಿತ್ರತಂಡದ ವಿರುದ್ಧ ನ್ಯಾಯಾಲಯವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದು ಹೊಸದೇನಲ್ಲ. ಇತ್ತೀಚೆಗೆ ಹಲವು ಸಿನಿಮಾಗಳಲ್ಲಿ ಪರೋಕ್ಷವಾಗಿ ಸಿಗರೇಟ್, ಚುಟ್ಟಾ ಸೇದುವ ದೃಶ್ಯಗಳಿರುತ್ತವೆ. ಅಂತಹ ಸಿನಿಮಾಗಳಲ್ಲಿ ಸ್ಟಾರ್ ನಟರೇ ಇರುತ್ತಾರೆ. ಆ ದೃಶ್ಯಗಳಲ್ಲಿ ಸ್ಟಾರ್ ನಟರೇ ನಟಿಸುತ್ತಾರೆ. ಧೂಮಪಾನ ಮಾಡುವ ದೃಶ್ಯಗಳನ್ನು ವಿಭಿನ್ನವಾಗಿ ಚಿತ್ರೀಕರಿಸುತ್ತಾರೆ. ಆದರೆ ಕೆಲವು ಸಿನಿಮಾಗಳಲ್ಲಿ ಆ ರೀತಿಯ ದೃಶ್ಯ ಟ್ರೇಲರ್ ಅಥವಾ ಒಂದೋ ಎರಡೋ ದೃಶ್ಯಗಳಲ್ಲಿ ಇರುತ್ತದೆ. ಇನ್ನೂ ಕೆಲವು ಸಿನಿಮಾಗಳಲ್ಲಿ ಚಿತ್ರದುದ್ದಕ್ಕೂ ಹೀರೋ ಬಾಯಲ್ಲಿ ಹೊಗೆಯುಗುಳುತ್ತಲೇ ಇರುತ್ತಾನೆ. ಇದೇಕೆ.. ಇದರ ಹಿಂದೆ ಒಂದು ವಿಭಿನ್ನ ಪ್ರಚಾರದ ತಂತ್ರವೂ ಇದೆ ಎಂಬ ಆರೋಪಗಳಿವೆ.
ಟೊಬ್ಯಾಕೋ ಕಂಪೆನಿಗಳು ಜಾಹೀರಾತು ಮಾಡುವಂತಿಲ್ಲ. ಪ್ರಮೋಟ್ ಮಾಡುವ ಹಾಗಿಲ್ಲ. ಟಿವಿಗಳಲ್ಲಿ, ಆನ್`ಲೈನ್ ವೇದಿಕೆಗಳಲ್ಲಿಯೂ ಅಡ್ವರ್ಟೈಸ್`ಮೆಂಟ್ ಹಾಕುವಂತಿಲ್ಲ. ಆದರೆ ಕಂಪೆನಿ ಬೆಳೆಯಬೇಕು ಎಂದರೆ ಹೊಸ ಹೊಸ ಗ್ರಾಹಕರು ಬರುತ್ತಿದ್ದರಷ್ಟೇ ಬೆಳೆಯೋಕೆ ಸಾಧ್ಯ. ಮದ್ಯಪಾನದ ಕಂಪೆನಿಗಳೇನೋ ಓಪನರ್, ವಾಟರ್ ಬಾಟಲ್, ಏರ್`ಲೈನ್ಸ್.. ಹೀಗೆ ಬೇರೆ ಬೇರೆ ಹೆಸರಿನ ಮೂಲಕ ಪರೋಕ್ಷ ಜಾಹೀರಾತು ಮಾಡಿಕೊಳ್ತಾರೆ. ಅಂತಹ ಅವಕಾಶವೂ ಸಿಗರೇಟ್, ಚುಟ್ಟಾ ಕಂಪೆನಿಗಳಿಗೆ ಇಲ್ಲ. ಹೀಗಾಗಿಯೇ ಈ ರೀತಿ ಸಿನಿಮಾ ಸೀನ್`ಗಳ ಮೂಲಕ ಜಾಹೀರಾತು ಮಾಡುತ್ತಿದ್ದಾರೆ ಎಂಬ ಆರೋಪಗಳೂ ಇವೆ.
ಆದರೆ ವಿಜಯ್ ಅವರು ಇಂತಹ ಪರೋಕ್ಷ ಜಾಹೀರಾತಿನ ಬ್ರಾಂಡ್ ಆಗಿದ್ದಾರೆಯೇ ಇಲ್ಲವೇ ಎನ್ನುವುದು ಗೊತ್ತಿಲ್ಲ. ಪ್ರಕರಣದ ಹಿನ್ನೆಲೆಯಲ್ಲಿ ಇಂತಹ ಬಿಸಿನೆಸ್ ಕೂಡಾ ನಡೆಯುತ್ತಿದೆ ಎಂದು ಹೇಳುವ ಪ್ರಯತ್ನವಷ್ಟೇ. ಸಿಗರೇಟ್/ಚುಟ್ಟಾ ಕಂಪೆನಿಗಳು ಈ ರೀತಿ ಹಿಂಬಾಗಿಲ ಮೂಲಕ ಪ್ರಚಾರ ನಡೆಸುತ್ತಿವೆ ಎಂಬ ದೂರುಗಳೂ ಇವೆ. ಒಟ್ಟಿನಲ್ಲಿ ತೆರೆಮರೆಯ ಹಿಂದಿನ ಜಾಹೀರಾತು ತಂತ್ರ ಏನೇ ಇರಲಿ, ನಟರು ಅದರಲ್ಲಿಯೂ ಹೆಚ್ಚು ಫಾಲೋವರ್ಸ್ ಹೊಂದಿರುವ ನಟರು ಈ ರೀತಿಯ ದುಶ್ಚಟಗಳಿಗೆ ರಾಯಭಾರಿಗಳಾಗುವುದು ಸರಿಯಲ್ಲ.



