ಸೋಷಿಯಲ್ ಮೀಡಿಯಾದಲ್ಲಿ (Social Media) ಈಗ ಅಕ್ಷರಗಳಿಗಿಂತ, ಬರಹಗಳಿಗಿಂತ.. ಇಮೋಜಿಗಳೇ (Emoji) ಹೆಚ್ಚು ಮಾತನಾಡ್ತವೆ. ಜನ ಬರೆಯೋದು ಕಡಿಮೆ. ಅದರಲ್ಲೂ ಹುಡುಗ ಹುಡುಗಿಯರ ಮೆಸೇಜು, ರಿಪ್ಲೈಗಳಲ್ಲಿ ಹಾರ್ಟ್ ಇಮೇಜ್.. (Heart Emoji) ಸ್ವಲ್ಪ ಜಾಸ್ತಿಯೇ ಇರುತ್ತೆ. ಇಮೋಜಿಗಳನ್ನು ಕಳಿಸೋದು ಹದಿ ಹರೆಯದವರು ಹಾಗೂ ಯುವ ವಯಸ್ಕರಲ್ಲಿ ಸಾಮಾನ್ಯವಾದ ಸಂಗತಿ. ಆದರೆ, ಇಂತಹ ಇಮೋಜಿ (Emoji) ಕಳಿಸೋದ್ರಿಂದ ನಿಮಗೆ ಸಂಕಷ್ಟವೂ ಕಾದಿದೆ ಅನ್ನೋ ವಿಚಾರ ಗೊತ್ತಿಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ.
ವಾಟ್ಸಾಪ್ (Whats app) ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹಾರ್ಟ್ ಸಿಂಬಲ್ (Love symbol) ಇರುವ ಅಥವಾ ಹೃದಯದ ಇಮೋಜಿಯನ್ನು ಕಳಿಸಿದ್ರೆ ನೀವು ಜೈಲು ಶಿಕ್ಷೆಗೊಳಗಾಗಬಹುದು. ಇದು, ಶಿಕ್ಷಾರ್ಹ ಅಪರಾಧ. ಬಟ್, ಡೋಂಟ್`ವರಿ. ಇಂತಾದ್ದೊಂದು ರೂಲ್ಸ್, ಕಾನೂನು, ಶಿಕ್ಷೆ ಭಾರತದಲ್ಲಿ ಇಲ್ಲ. ಹಾಗಂತ ರಿಲ್ಯಾಕ್ಸ್ ಆಗುವಂತೆಯೂ ಇಲ್ಲ. ಭಾರತೀಯರು ಅತೀ ಹೆಚ್ಚು ಹೋಗುವ ಕೆಲವು ದೇಶಗಳಲ್ಲಿ ಈ ರೀತಿಯ ಕಾನೂನು ಇದೆ.
ಕುವೈತ್`ನಲ್ಲಿ : ಇದು ಕೇವಲ ಪೆಟ್ರೋಲ್ ಖಜಾನೆಯಲ್ಲ. ಶ್ರೀಮಂತ ದೊರೆಗಳ ತಾಣವಷ್ಟೇ ಅಲ್ಲ. ಕಟ್ಟರ್ ಮುಸ್ಲಿಂ ಕಾನೂನುಗಳಿರುವ (Sharia law) ದೇಶ ಕುವೈತ್ (Kuwait) . ಕುವೈತ್ನಲ್ಲಿ (Kuwait) ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹೃದಯದ ಇಮೋಜಿ ಕಳುಹಿಸುವುದನ್ನು ದುಷ್ಕೃತ್ಯಕ್ಕೆ ಪ್ರಚೋದಿಸುವ ಅಪರಾಧವೆಂದು ಪರಿಗಣಿಸಲಾಗಿದೆ. ಕಾನೂನಿನ ಪ್ರಕಾರ ಶಿಕ್ಷಾರ್ಹ. ತಪ್ಪು ಮಾಡಿದವರಿಗೆ ಜೈಲು ಶಿಕ್ಷೆ ಹಾಗೂ ಎರಡು ಸಾವಿರ (Kuwait dinaar) ಕುವೈತ್ ದಿನಾರ್`ನ್ನು ದಂಡವಾಗಿ ಕಟ್ಟಬೇಕು.
ಸೌದಿ ಅರೇಬಿಯಾ : (Saudi Arabia) ಇಲ್ಲಿಯೂ ಅಷ್ಟೆ, ಷರಿಯಾ ಕಾನೂನು ಜಾರಿಯಲ್ಲಿದೆ. ಇಲ್ಲಿಯೂ ಸಹ ವಾಟ್ಸಾಪ್ನಲ್ಲಿ ‘ಕೆಂಪು ಹೃದಯ’ (Red Heart) ಇಮೋಜಿಗಳನ್ನು ಕಳುಹಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು. ಸೌದಿ ಕಾನೂನಿನ (Saudi Arabia) ಪ್ರಕಾರ, ಈ ಕೃತ್ಯದ ತಪ್ಪಿತಸ್ಥರು 100,000 ಸೌದಿ ರಿಯಾಲ್ಗಳ (Saudi Reals) ದಂಡದೊಂದಿಗೆ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.
ವಾಟ್ಸಾಪ್ನಲ್ಲಿ ಕೆಂಪು ಹೃದಯಗಳನ್ನು ಕಳುಹಿಸುವುದನ್ನು ಕಿರುಕುಳ ಎಂದು ಅರ್ಥೈಸಬಹುದು ಎಂದು ಸೌದಿ ಸೈಬರ್ ಕ್ರೈಮ್ ತಜ್ಞರು ಮಾಹಿತಿ ನೀಡಿದ್ದಾರೆ. ಆನ್ಲೈನ್ ಸಂಭಾಷಣೆಯ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ಅಭಿವ್ಯಕ್ತಿಗಳನ್ನು ಬಳಸಿದರೆ, ಈ ಬಗ್ಗೆ ನೊಂದ ವ್ಯಕ್ತಿ ಮೊಕದ್ದಮೆ ಹೂಡಿದರೆ ಕಿರುಕುಳದ ಅಪರಾಧವಾಗಿ ಬದಲಾಗಬಹುದು ಎಂದು ಕಾನೂನು ಹೇಳುತ್ತದೆ. ಅಷ್ಟೇ ಅಲ್ಲ ಒಂದು ಬಾರಿ ಈ ನಿಯಮ ಉಲ್ಲಂಘಿಸಿದ್ರೆ 100,000 ಸೌದಿ ರಿಯಾಲ್ಗಳ ದಂಡ ಮತ್ತು ಇದೂ ಪದೇ ಪದೇ ರಿಪೀಟ್ ಆದರೆ, ದಂಡದ ಪ್ರಮಾಣ 300,000 ಸೌದಿ ರಿಯಾಲ್ಗಳಿಗೆ ಹೆಚ್ಚಾಗುತ್ತದೆ. ಗರಿಷ್ಠ ಐದು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಹೆಚ್ಚಿಸಬಹುದು ಎಂದೂ ತಿಳಿದುಬಂದಿದೆ.



