ಹೆಂಡತಿ ಮಕ್ಕಳನ್ನು ಸಾಕುವ ಮಕ್ಕಳಿಗೆ ತಾಯಿಯನ್ನು ಆರೈಕೆ ಮಾಡುವುದಕ್ಕೆ ಆಗಲ್ವೇ.. ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳಲಿಗೆ ಪ್ರಾಯಶ್ಚಿತ್ತವೇ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಬ್ರಹ್ಮಾಂಡ ಪುರಾಣ, ತೈತ್ತರೀಯ ಉಪನಿಷತ್ ಉಲ್ಲೇಖ ಮಾಡಿರುವ ನ್ಯಾಯಾಲಯ, ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಬುದ್ದಿ ಹೇಳಿ ಇಬ್ಬರೂ ಮಕ್ಕಳಿಗೆ ತಲಾ 10 ಸಾವಿರ ರೂ. ಜೀವನಾಂಶ ಕೊಡುವಂತೆ ಆದೇಶ ನೀಡಿದೆ.
ಮೈಸೂರಿನ ಎನ್.ಆರ್.ಮೊಹಲ್ಲಾದ ಗೋಪಾಲ್ ಮತ್ತು ಮಹೇಶ್ ಎಂಬ ಇಬ್ಬರು ಮಕ್ಕಳಿಗೆ ಈ ಆದೇಶ ನೀಡಿದ್ದಾರೆ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್. ಮೈಸೂರಿನ ಈ ಇಬ್ಬರು ಮಕ್ಕಳು ತಾಯಿಯನ್ನು ಹೊರಹಾಕಿದ್ದರು. ತಾಯಿ ಹೆಣ್ಣು ಮಕ್ಕಳ ಜೊತೆ ವಾಸಿಸುತ್ತಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆಗ ಮೈಸೂರಿನ ಜಿಲ್ಲಾಧಿಕಾರಿಗಳು ಇಬ್ಬರೂ ಮಕ್ಕಳಿಗೆ ತಾಯಿಯನ್ನು ನೋಡಿಕೊಳ್ಳಲು 10 ಸಾವಿರ ರೂ. ನೀಡುವಂತೆ ಆದೇಶ ಕೊಟ್ಟಿದ್ದರು. ಇದನ್ನು ಪ್ರಶ್ನಿಸಿ ಇಬ್ಬರೂ ಮಕ್ಕಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೆಂಡತಿಯನ್ನು ನೋಡಿಕೊಳ್ಳಲು ಸಾಧ್ಯವಿದೆ. ತಾಯಿಯನ್ನು ಸಾಕುವುದಕ್ಕೆ ಏಕೆ ಆಗುವುದಿಲ್ಲ ಎಂಬ ವಾದವನ್ನಿಟ್ಟಿದ್ದಷ್ಟೇ ಅಲ್ಲ, ಇದು ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ ಎಂದು ಅಭಿಪ್ರಾಯಪಟ್ಟಿತು. ದೇಶದಲ್ಲಿ ಈಗ ಬ್ಲಡ್(ರಕ್ತ)ಗಿಂತ ಬ್ರೆಡ್(ಆಹಾರ) ದುಬಾರಿಯಾಗಿದೆ. 5 ಸಾವಿರದಿಂದ ಏನೂ ಬರುವುದಿಲ್ಲ. ದೇಹವನ್ನು ಆರೈಕೆ ಮಾಡುವುದಕ್ಕೆ ಆಗುವುದಿಲ್ಲ. ಮಕ್ಕಳು ತಾಯಿಯನ್ನು ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿತು.
2019ರ ಮೇ 22ರಂದು ಮೈಸೂರಿನ ಅಸಿಸ್ಟೆಂಟ್ ಕಮಿಷನರ್ ಇಬ್ಬರೂ ಸೋದರರಿಗೆ ತಲಾ 5 ಸಾವಿರ ರೂ. ನೀಡಬೇಕು. ತಾಯಿಯನ್ನು ನೋಡಿಕೊಳ್ಳಬೇಕು ಎಂದು ಆದೇಶ ನೀಡಿದ್ದರು. ಈ ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದ ಅಣ್ಣ-ತಮ್ಮ ಇಬ್ಬರಿಗೂ ಹೈಕೋರ್ಟ್ ಪ್ರತಿ ತಿಂಗಳೂ ನೀಡುವ ಹಣವನ್ನು ತಲಾ 10 ಸಾವಿರಕ್ಕೆ ಹೆಚ್ಚಿಸಿ ಆದೇಶ ನೀಡಿದೆ. ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಕಾನೂನು ಅಷ್ಟೇ ಅಲ್ಲ ನಮ್ಮ ಧರ್ಮ, ಸಂಸ್ಕøತಿಗಳೂ ಹೇಳುವುದು ಇದನ್ನೇ. ವಿದ್ಯಾರ್ಥಿಗಳು ಗುರುಕುಲ ತೊರೆಯುವಾಗ ಗುರುವಾದವನು ತನ್ನ ವಿದ್ಯಾರ್ಥಿಗೆ ಹೇಳುವುದು ತಂದೆ, ತಾಯಿ, ಗುರು, ಅತಿಥಿಗಳನ್ನು ದೇವರಂತೆ ಕಾಣಿ ಎಂದು ಬೋಧಿಸುತ್ತಾರೆ. ಬ್ರಹ್ಮಾಂಡ ಪುರಾಣ, ತೈತ್ತರೀಯ ಉಪನಿಷತ್ ಸೇರಿದಂತೆ ಎಲ್ಲ ಧಾರ್ಮಿಕ ಗ್ರಂಥಗಳಲ್ಲೂ ತಂದೆ ತಾಯಿಯರನ್ನು ಸಾಕುವುದು ಮಕ್ಕಳ ಹೊಣೆಗಾರಿಕೆ ಎಂದೇ ಹೇಳುತ್ತದೆ ಎಂದು ಉಲ್ಲೇಖಿಸಿದರು.
ತಾಯಿಯನ್ನು ಗಂಡು ಮಕ್ಕಳು ಹೊರಹಾಕಿದ ನಂತರ ಆಕೆಯನ್ನು ನೋಡಿಕೊಂಡ ಹೆಣ್ಣು ಮಕ್ಕಳಿಗೆ ಪ್ರಶಂಸೆ ಮಾಡಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹೆಣ್ಣು ಮಕ್ಕಳೂ ಆಕೆಯ ನೆರವಿಗೆ ಬಾರದೇ ಇರುತ್ತಿದ್ದರೆ ಆ ತಾಯಿ ಬೀದಿಯಲ್ಲಿ ಬಿದ್ದಿರಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೆ ತಾಯಿಯನ್ನು ತಮ್ಮೊಂದಿಗೆ ಕಳಿಸುವಂತೆ ಮಕ್ಕಳು ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಆ ರೀತಿಯ ಆದೇಶ ನೀಡುವುದಕ್ಕೆ ಬರುವುದಿಲ್ಲ. ಅದು ತಾಯಿಯೇ ತೆಗೆದುಕೊಳ್ಳಬೇಕಾದ ನಿರ್ಧಾರ ಎಂದು ಹೇಳಿದೆ.



