ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಾತನಾಡಿರುವ ನಾಯಕರು ಉಪ್ಪು ಹುಳಿ ಕಾರವನ್ನ ಸ್ವಲ್ಪ ಹೆಚ್ಚೇ ತಿಂದಿದ್ದಾರೆ. ಅದರಲ್ಲಿಯೂ ಪ್ರಚಾರದ ಕೊನೆಯ ದಿನ ಜಮೀರ್ ಅಹ್ಮದ್ ಅವರು ಆಡಿರುವ ಮಾತನ್ನು ಕಾಂಗ್ರೆಸ್ಸಿಗರೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅತ್ತ ಜಮೀರ್ ಅಹ್ಮದ್ ತಪ್ಪು ಮಾತನಾಡಿದ್ದರೆ ಎಂದರೆ, ಎಲ್ಲಿ ಮುಸ್ಲಿಂ ಮತಗಳು ದೂರವಾಗುತ್ತವೋ ಎಂಬ ಆತಂಕ, ಸುಮ್ಮನಿದ್ದರೆ ಅಥವಾ ಜಮೀರ್ ಮಾತನಾಡಿದ್ದರಲ್ಲಿ ತಪ್ಪೇನಿದೆ ಎಂದುಬಿಟ್ಟರೆ, ಸ್ವಲ್ಪ ಮತಗಳು ಕೈ ತಪ್ಪುವ ಭಯ.. ಹೀಗಿರುವಾಗಲೇ ಕಾನೂನು ಏನು ಹೇಳುತ್ತೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಏಕೆಂದರೆ ಜಮೀರ್ ಅಹ್ಮದ್ “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್” ಎಂದು ಹೇಳಿರುವುದು ಅಪ್ಪಟ ಜನಾಂಗೀಯ ವರ್ಣ ನಿಂದನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಕಾಲಾ ಎಂದರೆ ಕರಿಯ ಎಂದರ್ಥ. ಇನ್ನು ಅದಕ್ಕೆ ಸಮರ್ಥನೆ ನೀಡಿರುವ ಜಮೀರ್ ಅಹ್ಮದ್ ʻʻನಾನು ಹೇಳಿದ್ದು ಪ್ರೀತಿಯಿಂದ. ಅವರು ನನ್ನನ್ನು ಕುಳ್ಳ ಅಂತಾರೆ. ನಾನು ಅವರನ್ನು ಕರಿಯ ಅಂತೇನೆʼ ಎಂದಿದ್ದಾರೆ. ಕ್ಷಮೆಯನ್ನೇನೂ ಕೇಳಿಲ್ಲ. ಅಲ್ಲಿಗೆ ಈ ವಿಷಯ ಇಟ್ಟುಕೊಂಡು ದೂರು ಕೊಡಬಹುದೇ.. ಎಂದರೆ ಹೌದು ಎಂಬ ಉತ್ತರ ಲಭ್ಯವಿದೆ.
ಸಂವಿಧಾನದಲ್ಲಿ ಬರುವ ಆರ್ಟಿಕಲ್ 15 ಪ್ರಕಾರ ಎಲ್ಲ ಭಾರತೀಯರೂ ಸಮಾನರು. ಧರ್ಮ, ವರ್ಣ, ಜಾತಿ, ಬಣ್ಣ, ಸ್ಥಳ, ಲಿಂಗ ತಾರತಮ್ಯ ಮಾಡುವಂತೆಯೇ ಇಲ್ಲ. ಹಾಗೆ ಮಾಡಿದರೆ ಈ ಎಲ್ಲ ಸಮಾನತೆ ನೀಡಿರುವ ಆರ್ಟಿಕಲ್ 14ರ ಉಲ್ಲಂಘನೆ ಮಾಡಿದಂತೆ. ಈ ರೀತಿಯ ಬಣ್ಣ ಆಧರಿಸಿ ನಿಂದನೆ ಮಾಡಿದರೆ ಅಂತಹವ ವಿರುದ್ಧ ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿಯೂ ಎಫ್‌ಐಆರ್ ದಾಖಲಿಸಬಹುದು ಅಥವಾ ಯಾರಾದರೂ ದೂರು ಕೊಡಬಹುದು. ಅಥವಾ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದವರು ʻಈ ರೀತಿ ಜನಾಂಗೀಯ ನಿಂದನೆ ಮಾಡಿದ ವ್ಯಕ್ತಿಯನ್ನು ಕರೆತಂದು ವಿಚಾರಣೆ ನಡೆಸಿʼ ಎಂದು ಪೊಲೀಸರಿಗೆ ಸೂಚನೆ ನೀಡಬಹುದು. ಆದರೆ ಈ ರೀತಿಯ ಪ್ರಕರಣದಲ್ಲಿ ಯಾವ ರೀತಿಯ ಶಿಕ್ಷೆ ನೀಡಲಾಗುವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಸದ್ಯಕ್ಕೆ ಜೆಡಿಎಸ್ ನಾಯಕರು ʻʻವರ್ಣನಿಂದಕ, ಜನಾಂಗೀಯ ದ್ವೇಷಿ ಮಿಸ್ಟರ್ ಜಮೀರ್, ನಿನ್ನನ್ನು ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎನ್ನುವ ನಿನ್ನ ಅಧಿಕಾರ ಮತ್ತು ದುಡ್ಡಿನ ದರ್ಪ ಹೆಚ್ಚು ದಿನ ಉಳಿಯಲ್ಲ.. ನಿನ್ನ ಸೊಕ್ಕಿನ ಮಾತಿಗೆ, ಕಪ್ಪು ವರ್ಣದ ಬಗ್ಗೆ ನಿನಗಿರುವ ಹೊಲಸು ಮನಸ್ಥಿತಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ.ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣ ಯಾವುದು ? ಹೆಚ್.ಸಿ. ಮಹದೇವಪ್ಪ ಅವರ ಬಣ್ಣ ಯಾವುದು ? ಸತೀಶ್ ಜಾರಕಿಹೊಳಿ ಅವರ ಬಣ್ಣ ಯಾವುದು ? ಪ್ರಿಯಾಂಕ್ ಖರ್ಗೆ ಅವರ ಬಣ್ಣ ಯಾವುದು ? ಕೆ.ಹೆಚ್. ಮುನಿಯಪ್ಪ ಅವರ ಬಣ್ಣ ಯಾವುದು ?ಕೆ.ಜೆ. ಜಾರ್ಜ್ ಅವರ ಬಣ್ಣ ಯಾವುದು ? ಡಿ.ಕೆ. ಸುರೇಶ್ ಅವರ ಬಣ್ಣ ಯಾವುದು ? ರಹೀಮ್ ಖಾನ್ ಅವರ ಬಣ್ಣ ಯಾವುದು ? ಮನುಷ್ಯರ ಚರ್ಮ ಕಪ್ಪಾದರೇನು, ಬಿಳಿಯಾದರೇನು ? ಇಷ್ಟೊಂದು ಕೀಳು ಮನಸ್ಥಿತಿಯ ವ್ಯಕ್ತಿ ಜಮೀರ್ ಅಹ್ಮದ್ ಅವರನ್ನು ಈ ಕೂಡಲೇ ರಾಷ್ಟ್ರೀಯ ಕಾಂಗ್ರೆಸ್,ರಾಜ್ಯ ಕಾಂಗ್ರೆಸ್, ಹಾಗೂ ಸಿದ್ದರಾಮಯ್ಯ ಸಂಪುಟದಿಂದ ವಜಾಮಾಡಿʼʼ ಎಂದು ಆಗ್ರಹಿಸಿದೆ.
ಅಲ್ಲದೆ ಗೃಹ ಸಚಿವ ಪರಮೇಶ್ವರ್ ಅವರಿಗೆ ರಾಮನಗರ ಎಸ್‌ಪಿ, ರಾಮನಗರ ಜಿಲ್ಲಾ ಪೊಲೀಸರು ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿ ಎಂದು ಒತ್ತಾಯಿಸಿದೆ. ಆದರೆ.. ಪರಮೇಶ್ವರ್ ಕಾನೂನು ಕ್ರಮಕ್ಕೆ ಆದೇಶ ಕೊಡ್ತಾರಾ..?



