ನವೆಂಬರ್ ತಿಂಗಳಿಗೆ ಸಿದ್ಧರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷ. ಅಧಿಕಾರಾವಧಿಯ ಅರ್ಧ ಪೀರಿಯಡ್ ಮುಗಿಯುತ್ತದೆ. ಹೀಗಿರುವಾಗಲೇ ಸಂಪುಟ ವಿಸ್ತರಣೆಯ ಮಾತು ಜೋರಾಗಿದೆ. ಸಚಿವ ಸಂಪುಟ ಪುನಾರಚನೆ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರೇ ಸುಳಿವು ಕೊಟ್ಟಿದ್ದಾರೆ. ಒಂದು ಕಡೆಯಲ್ಲಿ ಸಿಎಂ ಸ್ಥಾನದ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಹೊರಬಿದ್ದ ಸಂಪುಟ ವಿಸ್ತರಣೆ ಮಾತು.. ಸಂಚಲನವನ್ನೇ ಸೃಷ್ಟಿಸಿದೆ. ಇದರಲ್ಲಿ ಇನ್ನೂ ಒಂದು ಮೆಸೇಜ್ ಇದೆ. ಸಿದ್ಧರಾಮಯ್ಯ ಹೇಳಿದಂತೆ ಸಂಪುಟ ವಿಸ್ತರಣೆ ಆದರೆ.. ಸಿದ್ಧರಾಮಯ್ಯ ಅವರು ಹೇಳಿದಂತೆ ಸರ್ಕಾರ ಸೇಫ್. ಸಿದ್ಧರಾಮಯ್ಯ ಕುರ್ಚಿಯೂ ಸೇಫ್. ಅಕಸ್ಮಾತ್.. ಸಂಪುಟ ವಿಸ್ತರಣೆಯೇ ಆಗದಿದ್ದರೆ… ಮುಲಾಜೇ ಇಲ್ಲ. ಸಿಎಂ ಕುರ್ಚಿ ಸೇಫ್ ಅಲ್ಲ. ಡಿಕೆ ಯಾವ ಕ್ಷಣದಲ್ಲಾದರೂ ಸಿಎಂ ಆಗಬಹುದು.
ಹೇಗೆ.. ಎಂದರೆ..
ಈಗ ಸಂಪುಟ ವಿಸ್ತರಣೆ ಆಯಿತು ಎಂದಿಟ್ಟುಕೊಳ್ಳಿ. ಅದು ಸಿದ್ಧರಾಮಯ್ಯ ಅವರ ನೇತೃತ್ವದಲ್ಲೇ ಆದರೆ.. ಅದರ ಮೂಲಕ ಒಂದು ಸಂದೇಶ ಹೋಗುತ್ತದೆ. ಮಿನಿಸ್ಟರ್ ಚೇಂಜ್ ಆದರೂ.. ಸಿಎಂ ಚೇಂಜ್ ಆಗಿಲ್ಲ ಅನ್ನೋ ಸಂದೇಶ ಅದು. ಅದರ ಅರಿವು ಸಿದ್ಧರಾಮಯ್ಯ ಬಣದವರಿಗೆ ಚೆನ್ನಾಗಿಯೇ ಇದೆ. ಸಂಪುಟ ಪುನಾರಚನೆ ವೇಳೆ ತಮಗೆ ಅವಕಾಶ ಸಿಕ್ಕೇ ಸಿಗಕಿದೆ ಎಂಬ ಬಲವಾದ ವಿಶ್ವಾಸದಲ್ಲಿ ಆಕಾಂಕ್ಷಿಗಳು ಇದ್ದಾರೆ. ಸಂಪುಟ ಪುನಾರಚನೆ ಸುಳಿವು ಬೆನ್ನಲ್ಲೇ ಒತ್ತಡ ತಂತ್ರಗಳು ಜೋರಾಗಿವೆ. ಲಾಬಿಗೆ ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಇತರರ ಬಳಿ ಓಡುತ್ತಿದ್ದಾರೆ.
ಇದೇ ವೇಳೆ ಈಗಾಗಲೇ ಸಚಿವರಾಗಿ ಇರುವವರಿಗೆ ಟೆನ್ಷನ್. ಸಚಿವ ಸ್ಥಾನ ಕೈತಪ್ಪುವ ಆತಂಕದಲ್ಲಿರುವ ಕೆಲ ಸಚಿವರು ಪ್ರತ್ಯೇಕ ಸಭೆ ನಡೆಸಿ, ಸ್ಥಾನ ಉಳಿಸಿಕೊಳ್ಳುವ ತಂತ್ರಗಾರಿಕೆ ಹೂಡುವ ಪ್ರಯತ್ನ ನಡೆಸಿದ್ದಾರೆ. ಸಂಪುಟ ಪುನಾರಚನೆ ವಿಚಾರವಾಗಿ ಕೆ.ಎಚ್.ಮುನಿಯಪ್ಪ, ಎನ್.ಎಸ್.ಬೋಸರಾಜು, ಚಲುವರಾಯಸ್ವಾಮಿ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಮತ್ತಿತರ ಹಾಲಿ ಸಚಿವರು ತಮ್ಮದೇ ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿ ಶಾಸಕರೂ ಪ್ರತಿಕ್ರಿಯೆ ನೀಡಿದ್ದಾರೆ. ಮುನಿಯಪ್ಪ ಒಬ್ಬರು ಮಾತ್ರ ಮಗಳಿಗೆ ಮಂತ್ರಿಗಿರಿ ಸಿಕ್ಕಿದರೆ ಬಿಡೋದಕ್ಕೆ ನಾನು ರೆಡಿ ಎಂದಿದ್ದಾರೆ. ಅಷ್ಟೆ.
ಸಂಪುಟ ಪುನಾರಚನೆ ಆಗಬಾರದು ಎಂದು ಡಿಕೆ ಬಣದವರು ಹೇಳುತ್ತಿರುವುದಕ್ಕೆ ಕಾರಣ ಇದೆ. ಕ್ಯಾಬಿನೆಟ್ ಹೊಸದಾಗಿ ರಚಿಸುವುದಾದರೆ, ಸಿಎಂ ಸ್ಥಾನವೇ ಮೊದಲು ಬದಲಾಗಬೇಕು ಎನ್ನುವುದು ಅವರ ಬೇಡಿಕೆ. ಸಿದ್ದು ನೇತೃತ್ವದಲ್ಲೇ ಬದಲಾದರೆ.. ಆಗ ಸಿಎಂ ಸ್ಥಾನವನ್ನು ಅಷ್ಟು ಬೇಗ ಬದಲಿಸುವುದಕ್ಕೆ ಬರುವುದಿಲ್ಲ. ಹೊಸದಾಗಿ ಮಂತ್ರಿಗಳಾದವರು ರೊಚ್ಚಿಗೇಳುತ್ತಾರೆ ಎನ್ನುವುದು ಅವರ ಆತಂಕ. ಅವರ ವಾದ ಇಷ್ಟೇ. ಬದಲಾವಣೆ ಆಗುವುದಾದರೆ.. ಆ ಬದಲಾವಣೆ ಸಿಎಂ ಸ್ಥಾನದಿಂದಲೇ ಶುರುವಾಗಲಿ ಎನ್ನುವುದು.
ರಾಜಕೀಯ ಪಂಡಿತರ ಪ್ರಕಾರ.. ಇದು ಸಿದ್ಧರಾಮಯ್ಯ ಆಡುತ್ತಿರುವ ಹೊಸ ಗೇಮ್. ಸಿದ್ದು ಬಣದಲ್ಲಿದ್ದ ಕೆಲ ಶಾಸಕರು ಡಿಕೆ ಟೀಂ ಕಡೆ ವಾಲುತ್ತಿದ್ದಾರೆ. ಅತ್ತ ಅನುದಾನವೂ ಸಿಗುತ್ತಿಲ್ಲ. ಕೆಲಸಗಳೂ ಆಗುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ. ಹಾಗೆ ಬೇಸರಗೊಂಡಿರುವವರನ್ನು ಮತ್ತೆ ತಮ್ಮ ಬಣದತ್ತ ಸೆಳೆಯುವ, ಆಸೆ ತೋರಿಸುವ ಟೆಕ್ನಿಕ್ ಅಷ್ಟೇ ಎನ್ನುತ್ತಾರೆ.



