ಯತ್ನಾಳ್, ವಿಜಯೇಂದ್ರ ಬಿಕ್ಕಟ್ಟು ಸರಿ ಮಾಡಲು ಬಂದೆವು ಎಂದು ಹೇಳಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಸ್ಥಳೀಯ ನಾಯಕರ ಆಕ್ರೋಶಕ್ಕೆ ಸುಸ್ತು ಹೊಡೆದಿದೆ. ಒಂದು ಕಡೆ ಬಂಡಾಯ ಏಳಲು ಬಿಟ್ಟು, ಮತ್ತೊಂದು ಕಡೆ ಸಮಾಧಾನದ ನಾಟಕವಾಡುತ್ತಿದ್ದ ಹೈಕಮಾಂಡ್, ಈಗ ಸ್ಥಳೀಯ ನಾಯಕರ ಆಕ್ರೋಶಕ್ಕೆ ಥಂಡಾ ಹೊಡೆದಿದೆ. ಈಗ ಭಿನ್ನಮತದ ಬೆಂಕಿಗೆ ತುಪ್ಪು ಸುರಿದವರ ವಿರುದ್ಧ ಆಕ್ಷನ್ ತೆಗೆದುಕೊಳ್ಳುತ್ತಾ.. ಕಾದು ನೋಡಬೇಕಷ್ಟೇ.
ಶ್ರೀರಾಮುಲು ಗುರ್ :
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸೋಲಿನ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಕೋರ್ ಕಮಿಟಿ ಸಭೆಯಲ್ಲಿ ಜಟಾಪಟಿಯೇ ನಡೆದಿದೆ. ನೀವು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಮರ್ಪಕವಾಗಿ ಕೆಲಸ ಮಾಡಿಲ್ಲ: ಸೋಲಿಗೆ ನೀವೇ ಕಾರಣ ಎನ್ನುವ ದೂರು ಬಂದಿದೆ ರಾಧಾ ಮೋಹನ್ ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ಶ್ರೀರಾಮುಲು, ಸೋಲಿಗೆ ನಾನೇ ಕಾರಣ ಎಂಬುದನ್ನು ಸಾಬೀತುಪಡಿಸಿ ಎಂದು ಆಗ್ರಹಿಸಿದ್ದಾರೆ. ಬೇಕಾದರೆ ರಾಜೀನಾಮೆ ಕೊಡ್ತೀನಿ, ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಕೆಲಸ ಮಾಡೋದಿಲ್ಲ ಎಂದು ಹೇಳಿದ್ದಾರೆ. ಇನ್ನು ಜನಾರ್ದನ ರೆಡ್ಡಿ ವಿರುದ್ಧವೂ ಆಕ್ರೋಶಗೊಂಡಿರುವ ಶ್ರೀರಾಮುಲು ʻಸೋತ ಅಭ್ಯರ್ಥಿ ಹನುಮಂತು ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆʼ ಎಂದು ತಿರುಗೇಟು ಕೊಟ್ಟಿದ್ಧಾರೆ. ಸಭೆ ಮುಗಿದು ಹೊರ ಬಂದ ಬಳಿಕ ಶ್ರೀರಾಮುಲು ಮಾಧ್ಯಮದ ಎದುರು ಮಾತನಾಡುವುದನ್ನು ಸಿಟಿ ರವಿ ಅವರಿಗೆ ಸನ್ನೆ ಮಾಡಿ ವಿಜಯೇಂದ್ರ ತಡೆದಿದ್ದಾರೆ. ಸಿಟಿ ರವಿಗೆ ʻಶ್ರೀರಾಮುಲು ಅವರನ್ನು ಕಂಟ್ರೋಲ್ ಮಾಡಿʼ ಎಂದು ವಿಜಯೇಂದ್ರ ಸನ್ನೆ ಮಾಡುತ್ತಿರುವ ವಿಡಿಯೋ ಹೊರಬಿದ್ದಿದೆ.
ಸಿಟಿ ರವಿಯೂ ರಾಂಗ್ :
ಇನ್ನು ಸಿಟಿ ರವಿ ಅವರ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ಥಂಢಾ ಹೊಡೆದಿದೆ. ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದವನು, ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತೀನಾ.. ಪಕ್ಷದ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳ ನೇಮಕದ ಬಗ್ಗೆ ಒನ್ ಸೈಡ್ ನಿರ್ಧಾರವಾಗುತ್ತಿದೆ. ಹೈಕಮಾಂಡ್ ಏನ್ ಮಾಡ್ತಿದೆ ಎಂದು ತರಾಟೆಗೆ ತೆಗೆದುಕೊಂಡಾಗ ವಿಜಯೇಂದ್ರ ಅವರೇ ʻಇನ್ನು ಮುಂದೆ ಹಾಗಾಗಲ್ಲ, ತಿದ್ದಿಕೊಳ್ತೇನೆʼ ಎಂದು ಕೇಳಿದ್ರಂತೆ. ಅಷ್ಟೇ ಅಲ್ಲ, ವರ್ಷಕ್ಕೊಂದ್ಸಲ ಬರ್ತೀರಿ, ಇಲ್ಲಿ ಏನಾಗ್ತಿದೆ ಅನ್ನೋದ್ರ ಸುಳಿವೇನಾದರೂ ನಿಮಗೆ ಇದೆಯಾ ಎಂದು ಗುರ್ ಎಂದಾಗ ರಾಧಾ ಮೋಹನ್ ಬಳಿ ಮಾತುಗಳಿರಲಿಲ್ಲ.
ಡಿವಿ ಸದಾನಂದ ಗೌಡ ಮನೆಯಲ್ಲಿ ಡಿನ್ನರ್ ಮೀಟಿಂಗ್ :
ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಆರ್.ಅಶೋಕ್, ಡಾ.ಸಿ. ಎನ್.ಅಶ್ವತ್ಥನಾರಾಯಣ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು ಸದಾನಂದಗೌಡರ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿರುವುದು ಇನ್ನೊಂದು ವಿಶೇಷ. ಸಭೆಯ ನಂತರ ತೀರಾ ಯತ್ನಾಳ್, ರಮೇಶ್ ಜಾರಕಿಹೊಳಿ ಲೆವೆಲ್ಲಿಗೆ ಅಲ್ಲದಿದ್ದರೂ, ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡಿರುವ ನಾಯಕರು ಎಲ್ಲ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರ ಟೀಂ ಕೂಡಾ ಗರಂ :
ಪಕ್ಷದಲ್ಲಿ ಸಮಸ್ಯೆಗಳಿದ್ದರೆ, ಪಕ್ಷದ ಆಂತರಿಕ ವೇದಿಕೆಗಳಲ್ಲಿ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಹಾದಿಬೀದಿಗಳಲ್ಲಿ ರಂಪ ರಾದ್ಧಾಂತ ಮಾಡುತ್ತಿದ್ದರೆ, ಪಕ್ಷಕ್ಕೆ ಮರ್ಯಾದೆ ಇರಲ್ಲ. ಮೋದಿ, ಅಮಿತ್ ಶಾಗೂ ಮರ್ಯಾದೆ ಇರಲ್ಲ ಎಂದು ಗುಡುಗಿದ್ದಾರೆ. ವಿಜಯೇಂದ್ರ ಜೊತೆ ನಾವಿದ್ದೇವೆ ಎಂದು ಬಹುತೇಕ ಶಾಸಕರು ಹೇಳಿದ್ದು, ರಾಧಾ ಮೋಹನ್ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಒಟ್ಟಿನಲ್ಲಿ ಯತ್ನಾಳ್ ಟೀಂ ಬಂಡಾಯ ರಾಜ್ಯದಲ್ಲಿ ಬಿಜೆಪಿಗೆ ಸಮಾಧಿ ಕಟ್ಟುವ ಎಲ್ಲ ಸೂಚನೆಗಳನ್ನೂ ಕೊಡುತ್ತಿದೆ.



