ಕನ್ನಡ ಚಿತ್ರರಂಗದಲ್ಲಿ ಒಂದೇ ಕುಟುಂಬದ ಪತಿ, ಪತ್ನಿಯರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ಹೊಸದೇನಲ್ಲ. ಆದರೆ, ಮನೆಯಲ್ಲಿರುವ ಎಲ್ಲರೂ ಗೌರವ ಡಾಕ್ಟರೇಟ್ ಪಡೆಯುವುದು ವಿಶೇಷ. ಡಾ. ರಾಜ್ ಕುಟುಂಬ ಆ ಗೌರವಕ್ಕೆ ಪಾತ್ರವಾಗಿದೆ. ʻಗೌರವ ಡಾಕ್ಟರೇಟ್ʼಗೆ C/o ಅಡ್ರೆಸ್ ದೊಡ್ಮನೆ ಆಗಿದೆ. ಇದೀಗ ರಾಘವೇಂದ್ರ ರಾಜ್ ಕುಮಾರ್ ಕೂಡಾ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ರಾಘಣ್ಣಗೆ ಗೌರವ ಡಾಕ್ಟರೇಟ್
ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಮಂತ್ರಾಲಯದಲ್ಲಿ ಗುರುವೈಭವೋತ್ಸವದಲ್ಲಿ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಅವರೇ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ.
ನನಗೆ ಈಗ ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ. ಇದರಿಂದ ಜವಾಬ್ದಾರಿ, ಭಯ ಜಾಸ್ತಿ ಆಗ್ತಿದೆ. ಏನು ಸಾಧನೆ ಮಾಡದೇ ಇರುವವನಿಗೆ ಯಾಕೆ ಕೊಟ್ಟರು ಎನಿಸುತ್ತದೆ. ದೇವರ ಆಶೀರ್ವಾದದಿಂದ ಡಾಕ್ಟರೇಟ್ ಬಂದಿದೆ. ಇನ್ಮೇಲೆ ನಾನು ಸಮಾಜ ಸೇವೆ ಮಾಡಿಕೊಂಡು ಜನರ ಜೊತೆ ಬೆರೆತು ಕೆಲಸ ಮಾಡುತ್ತೇನೆ. ತಂದೆ ತಾಯಿ ಇಬ್ಬರೂ ಆಶೀರ್ವಾದ ಮಾಡಿ ಈ ಗೌರವ ಕೊಡಿಸಿರೋ ಥರ ಆಗಿದೆ. ಇದನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುತ್ತಿದ್ದೇನೆ ಎಂದಿರುವ ಡಾಕ್ಟರ್ ರಾಘವೇಂದ್ರ ರಾಜ್ ಕುಮಾರ್, ತಮ್ಮ ಹೆಸರು ಮತ್ತು ಮಂತ್ರಾಲಯದ ನೆನಪನ್ನು ಹಂಚಿಕೊಂಡರು.
ʻʻನಾನು ಹುಟ್ಟಿದಾಗ ಅಪ್ಪಾಜಿ ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡುತ್ತಿದ್ದರು. ಆಗ ನನಗೆ ರಾಘವೇಂದ್ರ ಅಂತ ನನಗೆ ಹೆಸರು ಇಟ್ಟಿದ್ರು. ಅದು ರಾಘವೇಂದ್ರ ರಾಜ್‌ಕುಮಾರ್ ಆಗಿ ಬೆಳೆದು ಬಂದಿದೆ ಎಂದು ಹೇಳಿಕೊಂಡರು. ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಈಗ 60 ವರ್ಷ ವಯಸ್ಸು. 1988ರಿಂದಲೂ ಚಿತ್ರರಂಗದಲ್ಲಿರುವ ರಾಘವೇಂದ್ರ ರಾಜ್ ಕುಮಾರ್, ನಟರಾಗಿ ಅಷ್ಟೇ ಅಲ್ಲ, ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದಾರೆ. ಚಿರಂಜೀವಿ ಸುಧಾಕರ್ ಚಿತ್ರದ ಮೂಲಕ ಹೀರೋ ಆದ ರಾಘವೇಂದ್ರ ರಾಜ್ ಕುಮಾರ್ ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗದಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ನಟ. ನಿರ್ಮಾಪಕರಾಗಿಯೂ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಇದೀಗ ರಾಘಣ್ಣ ಕೂಡಾ ಗೌರವ ಡಾಕ್ಟರೇಟ್ ಪಡೆಯುವುದರೊಂದಿಗೆ ಇಡೀ ದೊಡ್ಮನೆ ಡಾಕ್ಟರೇಟ್ ಫ್ಯಾಮಿಲಿ ಆದಂತಾಗಿದೆ.
ದೊಡ್ಮನೆಯಲ್ಲಿ ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ಗೌರವ ಡಾಕ್ಟರೇಟ್ ಪಡೆದ ಮೊದಲಿಗ ಡಾ.ರಾಜ್ ಕುಮಾರ್. ಅವರಿಗೆ ಮೈಸೂರು ವಿವಿ 1976 ಫೆಬ್ರವರಿ 8 ರಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅದಾದ ಮೇಲೆ ಹಲವರು ಡಾಕ್ಟರೇಟ್ ಪುರಸ್ಕಾರ ಪಡೆದಿದ್ದರೂ, ರಾಜ್ ಕುಮಾರ್ ಅವರ ಹೆಸರಿನ ಹಿಂದೆ ಡಾಕ್ಟರ್ ಬೆರೆತಷ್ಟು ಸಹಜವಾಗಿ ಬೇರೆಯವರಿಗೆ ಮ್ಯಾಚ್ ಆಗಿಲ್ಲ.
ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಬೆಂಗಳೂರು ವಿವಿ, 2015ರ ಮೇ ತಿಂಗಳಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಅದಾದ ಮೇಲೆ ಶಿವರಾಜ್ ಕುಮಾರ್ ಅವರು 2014ರಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರೆ, ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಲಾಗಿತ್ತು. 2022ರಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದರು.
ಡಾ.ರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದವು. ಇದೀಗ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.
ಪತಿ ಪತ್ನಿ ಇಬ್ಬರೂ ಗೌರವ ಡಾಕ್ಟರೇಟ್ ಪಡೆದ ದಾಖಲೆಯೂ ಇದೆ. ವಿಷ್ಣುವರ್ಧನ್-ಭಾರತಿ ವಿಷ್ಣುವರ್ಧನ್, ಅಂಬರೀಷ್-ಸುಮಲತಾ ಅಂಬರೀಷ್ ಪತಿ ಪತ್ನಿಯರಾಗಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಆದರೆ ಡಾ.ರಾಜ್ ಕುಟುಂಬದ ಗೌರವ ಡಾಕ್ಟರೇಟ್ ಹಿಸ್ಟರಿ ದೊಡ್ಡದು. ಪತಿ, ಪತ್ನಿ, ಮಕ್ಕಳು ಎಲ್ಲರೂ ಗೌರವ ಡಾಕ್ಟರೇಟ್ ಪಡೆದಿದ್ದಾರೆ.



