ನೀನು ಗಂಡ್ಸು ಕಣೋ.. ಹೆಂಗಸಿನ ತರಾ ಆಡಬೇಡ.. ಹಂಗಂದ್ರೆ.. ಗಂಡಸಾದವನು ದರ್ಪ ಮಾಡುವುದೇ ಡ್ಯೂಟಿಯಾ..?
ಹೆಣ್ಣು ಮಗು.. ತಗ್ಗಿ ಬಗ್ಗೀ ನಡೆಯೋದು ಕಲಿತುಕೊ.. ಹಂಗಂದ್ರೆ.. ಹೆಂಗಸಾದವಳು ತಲೆ ತಗ್ಗಿಸಿಯೇ ಬದುಕಬೇಕಾ..?
ನಾವು ದಿನನಿತ್ಯ ಕೇಳುವ ಈ ಡೈಲಾಗುಗಳನ್ನಿಟ್ಟುಕೊಂಡೇ.. ಚೆಂದದ ಕಥೆಯೊಂದಿಗೆ ಬಂದಿರುವ ಸಿನಿಮಾ ಕೌಸಲ್ಯ ಸುಪ್ರಜಾ ರಾಮ (Kausalya Supraja Rama) . ಡಾರ್ಲಿಂಗ್ ಕೃಷ್ಣ(Darling Krishna), ಬೃಂದಾ ಆಚಾರ್ಯ, ರಂಗಾಯಣ ರಘು(Rangayana Raghu), ಸುಧಾ ಬೆಳವಾಡಿ, ನಾಗಭೂಷಣ್ ಹಾಗೂ ಸ್ಪೆಷಲ್ ಆಗಿ ಬರೋ ಮಿಲನಾ ನಾಗರಾಜ್ (Milana Nagaraj) ಎಲ್ಲರನ್ನೂ ಇಟ್ಟುಕೊಂಡೇ ಚೆಂದದ ಕಥೆ ಹೇಳಿದ್ದಾರೆ ನಿರ್ದೇಶಕ ಶಶಾಂಕ್(Shashank). ಇದು ನಮ್ಮದೇ ಕಥೆ ಅಲ್ವಾ ಅನ್ನಿಸೋ ಹೊತ್ತಿಗೆ.. ಈ ಕಥೆಯ ಸಿನಿಮಾವನ್ನ ಎಲ್ಲಿಯೂ ನೋಡಿಲ್ಲ ಎಂಬುದೂ ನೆನಪಾಗಿ ನೋಡುಗರು ಭಾವುಕರಾಗುತ್ತಾರೆ. ಯಾರಿಗೆ ಜಾಸ್ತಿ ಮಾಕ್ರ್ಸ್ ಕೊಡೋಣ ಎಂದುಕೊಂಡಾಗ ಪ್ರೇಕ್ಷಕಪ್ರಭು ಅವರಿಗಾ..ಇವರಿಗಾ.. ಅವರಿಗಿಂತ ಇವರು ಚೆನ್ನಾಗಿ ನಟಿಸಿದ್ದಾರೆ..ಅಲ್ಲಲ್ಲ.. ಅವರು ಇನ್ನೂ ಚೆನ್ನಾಗಿ ನಟಿಸಿದ್ದಾರೆ.. ಕಥೆ ಸಖತ್.. ಹೀಗೆ ಅಂದುಕೊಂಡೇ ಥಿಯೇಟರಿಂದ ಹೊರಬರುತ್ತಾನೆ..
ಡಾರ್ಲಿಂಗ್ ಕೃಷ್ಣ (Darling Krishna) ಅವರಂತೂ ಫಸ್ಟ್ ಹಾಫ್ ಬೇರೆ.. ಸೆಕೆಂಡ್ ಹಾಫ್ ಬೇರೆ.. ಮೊದಲನೇ ಅರ್ಧದಲ್ಲಿ ನನ್ನ ಪಾತ್ರವನ್ನು ಇಷ್ಟ ಪಡದ ಜನರೇ ಆ ನಂತರ ಆ ಪಾತ್ರ ಬದಲಾಗುವ ರೀತಿ ನೋಡಿ ಖುಷಿ ಪಡುತ್ತಾರೆ. ಮೊದಲಾರ್ಧದಲ್ಲಿರುವ ನನ್ನ ರಗಡ್ ಲುಕ್ನ ಪಾತ್ರವೂ ಹಲವರಿಗೆ ಇಷ್ಟವಾಗಲಿದೆ ಎಂದಿದ್ದಾರೆ ಕೃಷ್ಣ(Darling Krishna). ಕೌಸಲ್ಯ ಸುಪ್ರಜಾ ರಾಮ (Kausalya Supraja Rama) ಸಿನಿಮಾದಲ್ಲಿ ಗಂಡಸಿನ ಅಹಂ ಕುರಿತ ಕತೆಯನ್ನು ನಿರ್ದೇಶಕ ಶಶಾಂಕ್ ಹೇಳಿದ್ದಾರೆ.
ಕೃಷ್ಣ ಅವರಿಗೆ ಇನ್ನೊಂದು ಖುಷಿಯೆಂದರೆ ಮಿಲನಾ ನಾಗರಾಜ್ (Milana Nagaraj) ಚಿತ್ರದಲ್ಲಿ ಅವರಿಗೆ ಹೊಡೆದಿದ್ದಾರಂತೆ. ಲವ್ ಮಾಕ್ಟೆಲ್ (Love mocktail) ಸಿನಿಮಾದಲ್ಲಿ ಮಿಲನಾ, ನನ್ನನ್ನು ಒದ್ದಿದ್ದರು, ಈ ಸಿನಿಮಾದಲ್ಲಿ ಹೊಡೆದಿದ್ದಾರೆ. ಅವರು (Milana Nagaraj) ನನ್ನನ್ನು ಹೊಡೆದರೆ ಅಥವಾ ಒದ್ದರೆ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಅದು ಈ ಸಿನಿಮಾ ಮೂಲಕವೂ ಮುಂದುವರೆಯಲಿದೆ ಎಂದಿದ್ದಾರೆ.
ಹೆಣ್ಣಿನ ಅಹಂಕಾರದಿಂದ ಕುಟುಂಬಗಳು ಹಾಳಾಗಿರುವ ಕಥೆ ಹೇಳುವ ನೂರಾರು ಸಿನಿಮಾಗಳು ಬಂದಿವೆ. ಮನೆ ನೆಮ್ಮದಿಯಾಗಿರಬೇಕೆಂದರೆ ಹೆಂಗಸರು ಗುಣಶೀಲೆಯಾಗಿರಬೇಕು ಎನ್ನುವ ತತ್ವ, ಪಾಠ ಹೇಳುವ ಕಥೆಗಳು ನೂರಾರು. ಆರಂಭದಲ್ಲಿ ಅಹಂಕಾರ ಮೆರೆಯುವ ಹೆಣ್ಣನ್ನು ನಾಯಕ ಪಳಗಿಸುವ ಕಥೆಗಳು ಎಷ್ಟೋ ಏನೋ.. ಹೆಣ್ಣಿನ ಅಹಂಕಾರ ಹೋಗಿ, ಬುದ್ದಿ ಬಂತು ಎನ್ನುವುದನ್ನ ತೋರಿಸೋಕೆ.. ಅಹಂಕಾರ ಮೆರೆಯುತ್ತಿದ್ದ ನಾಯಕಿಗೆ ಸೀರೆ ತೊಡಿಸಿದರೆ.. ಆಯ್ತು.. ಖೇಲ್ ಖತಂ.. ಇಂತಹ ಚಿತ್ರಗಳಿಗಂತೂ ಬಿಡಿ, ಲೆಕ್ಕಕ್ಕೇ ಇಲ್ಲ. ಇವೆಲ್ಲವುಗಳ ಮಧ್ಯೆ ಬಂದಿರೋ ಕೌಸಲ್ಯ ಸುಪ್ರಜಾ ರಾಮ ಬೇರೆಯದೇ ರೀತಿಯ ಕಥೆ. ಇದು ಹೆಣ್ಣು ಮಕ್ಕಳಲ್ಲ, ಗಂಡಸರೆಲ್ಲರೂ ನೋಡಲೇಬೇಕಾದ ಸಿನಿಮಾ.
ಹೆಂಗಸರ ಮುಂದೆ ತಲೆ ಬಾಗಬಾರದು, ತಾನು ಗಂಡಸು ಅನ್ನುವ ಪೊಗರಿನ ರಾಮೇಗೌಡ ಅಲಿಯಾಸ್ ರಾಮ, ಪುರುಷ ಅಹಂಕಾರದಿಂದಲೇ ಪ್ರೀತಿ ಕಳೆದುಕೊಳ್ತಾನೆ. ಬಂದಾ ಆಚಾರ್ಯ/ ಶಿವಾನಿ ಇವನಿಂದ ದೂರವಾಗ್ತಾಳೆ. ಆಗ ರಾಮ್ ಜೀವನದಲ್ಲಿ ಬಿರುಗಾಳಿಯಂತೆ ಎಂಟ್ರಿ ಕೊಡೋ ಮುತ್ತುಲಕ್ಷ್ಮಿ. ರಾಮ್`ಗೆ ಕಪಾಳಕ್ಕೆ ಬೀಸಿ ಬೀಸಿ ಹೊಡೆಯೋ ಮುತ್ತುಲಕ್ಷ್ಮಿ, ರಾಮನ ಗರ್ವಭಂಗ ಮಾಡ್ತಾಳೆ. ಕೃಷ್ಣಗೆ ಕಪಾಳಕ್ಕೆ ಹೊಡೆಯೋದು ರಿಯಲ್ ಲೈಫ್ ಹೆಂಡತಿ ಮಿಲನ ನಾಗರಾಜ್ ಅನ್ನೋದು ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತೆ. ಮಗನಿಗೆ ತಾಯಿ ಹೇಳೋ ಬುದ್ದಿಮಾತುಗಳು ಸಿನಿಮಾದ ಹೊರಗೂ ಅನ್ವಯವಾಗುತ್ತವೆ. ರಂಗಾಯಣ ರಘು ಅಂತಹ ಅಪ್ಪಂದಿರು ಎಲ್ಲ ಕಡೆಯೂ ಕಾಣಿಸ್ತಾರೆ.
ಇದು ಗಂಡಸರೆಲ್ಲ ನೋಡಬೇಕಾದ ಸಿನಿಮಾ (Kausalya Supraja Rama). ಹೆಣ್ಣು ಮಕ್ಕಳೆಲ್ಲ ಗಂಡಸರಿಗೆ ತೋರಿಸಲೇಬೇಕಾದ ಸಿನಿಮಾ. ಹೆಣ್ಣು ಮತ್ತು ಗಂಡು ಮಕ್ಕಳಿದ್ದರೆ, ಇಡೀ ಕುಟುಂಬದ ಜೊತೆ ಹೋಗಿ ನೋಡಬೇಕಾದ ಸಿನಿಮಾ. ಗಂಡು ಮಕ್ಕಳು ಹೇಗಿರಬೇಕು ಎಂಬ ಸಿನಿಮಾ ಬಂದಿಲ್ಲ. ಅಪ್ಪ-ಅಮ್ಮನೂ ಹೇಳಿಕೊಡಲ್ಲ. ಅದನ್ನು ಶಶಾಂಕ್ (Shashank) ಸಿನಿಮಾದಲ್ಲಿ ಹೇಳಿದ್ದಾರೆ.



