ಬೆಟ್ಟಿಂಗ್ ಕಾನೂನು ಬಾಹಿರವಾದರೂ ಚುನಾವಣೆಯ ಸಂದರ್ಭದಲ್ಲಿ ಗೌಪ್ಯವಾಗಿ ನಡೆಯುತ್ತಲೇ ಇರುತ್ತದೆ. ಕೆಲವು ಕಾರ್ಯಕರ್ತರ ಮಟ್ಟದಲ್ಲಿ ಬೆಟ್ಟಿಂಗ್ ನಡೆದರೆ, ಮತ್ತೆ ಕೆಲವರು ತಮ್ಮ ವೈಯಕ್ತಿಕ ಆಸಕ್ತಿಯ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರಿಗೆ ಸ್ಥಳೀಯವಾಗಿ ವಾತಾವರಣದ ಸ್ಪಷ್ಟ ಅರಿವು ಇರುತ್ತದೆ. ಚುನಾವಣಾ ಸಮೀಕ್ಷೆಗಳು, ಆಂತರಿಕ ವರದಿಗಳು ಹಾಗೂ ಮಾಧ್ಯಮಗಳ ವರದಿಗಳು ಬೆಟ್ಟಿಂಗ್ ಮೇಲೆ ಪರಿಣಾಮ ಬೀರುತ್ತವೆ. ಈಗ ನಡೆದಿರುವ ೩ ಕ್ಷೇತ್ರ ಬೈ ಎಲೆಕ್ಷನ್ ರಿಸಲ್ಟ್ ಬರೋದು ನವೆಂಬರ್ 23ಕ್ಕೇ ಆದರೂ, ಬೆಟ್ಟಿಂಗ್ ಮಾತ್ರ ಜೋರಾಗಿಯೇ ಇದೆ.
ಕುತೂಹಲ ಎಂದರೆ ಈ ಮೂರು ಕ್ಷೇತ್ರಗಳಲ್ಲಿ ಮಾತ್ರ ಬೆಟ್ಟಿಂಗ್ ಭರಾಟೆ ನಡೆಯುತ್ತಿಲ್ಲ, ಈ ಚುನಾವಣೆಯ ಬಗ್ಗೆ ಆಸಕ್ತಿ ಹೊಂದಿದ ಇತರ ಜಿಲ್ಲೆಗಳ ಬೆಟ್ಟಿಂಗ್ ದಂದೆಕೋರರು ಬಾಜಿ ಕಟ್ಟಿದ್ದಾರಂತೆ. ಶಿಗ್ಗಾಂವಿ, ಸಂಡೂರು ಕ್ಷೇತ್ರಕ್ಕಿಂತ ಚನ್ನಪಟ್ಟಣವೇ ಎಲ್ಲರ ಫೇವರೆಟ್ ಆಗಿದೆ. ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಇತರ ಜಿಲ್ಲೆಯ ಜನರೂ ಆಸಕ್ತರಾಗಿದ್ದಾರೆ.
ಚನ್ನಪಟ್ಟಣದಲ್ಲಿ 50 : 50
ಚುನಾವಣೆಯಲ್ಲಿ ಸೋಲು ಗೆಲುವು 50-50 ಆಧಾರದಲ್ಲೇ ಇರುತ್ತದೆ. ಬೆಟ್ಟಿಂಗ್ ದಾರರು ಗೊಂದಲದಲ್ಲಿದ್ದರೂ, ದಂಧೆಯಂತೂ ನಡೆಯುತ್ತಿದೆ. ಆರಂಭದಲ್ಲಿ ಚನ್ನಪಟ್ಟಣದಲ್ಲಿ ಸಿಪಿವೈ ಮೇಲುಗೈ ಸಾಧಿಸಿದ್ದರು. ಆದರೆ ಬರಬರುತ್ತಾ ನಿಖಿಲ್ ಕುಮಾರಸ್ವಾಮಿ ಅವರಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಚುನಾವಣೆಯ ಕೊನೆಯ ಹಂತದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ್ದ ಹೇಳಿಕೆ ಚುನಾವಣೆಯಲ್ಲಿ ಪ್ರಭಾವ ಬೀರಿದೆ. ಇದನ್ನು ಸ್ವತಃ ಸಿಪಿವೈ ಒಪ್ಪಿಕೊಂಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಗೆಲ್ಲುವ ಬಗ್ಗೆ ಪೂರ್ತಿ ವಿಶ್ವಾಸವನ್ನು ಅವರು ವ್ಯಕ್ತಪಡಿಸಿಲ್ಲ, ಸಿಪಿವೈ ಈ ಹೇಳಿಕೆ ಬೆಟ್ಟಿಂಗ್ ಮೇಲೂ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ. ಹೀಗಿದ್ದರೂ ಬೆಟ್ಟಿಂಗ್ ದಾರರು ೫೦:೫೦ ಯಲ್ಲಿಯೇ ಬೆಟ್ ಮಾಡ್ತಿದ್ದಾರೆ. ಯಾರು ಗೆದ್ದರೂ ಕೂದಲೆಳೆ ಅಂತರ ಎಂದಿರುವುದೂ ಅದಕ್ಕೆ ಕಾರಣ.
ಶಿಗ್ಗಾಂವಿ 60 : 40
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ. ಹೀಗಿದ್ದರೂ ಕಾಂಗ್ರೆಸ್ ಆಂತರಿಕ ಜಗಳ, ಕಿತ್ತಾಟ ಬಿಜೆಪಿಗೆ ಲಾಭವಾಗಿದೆ ಎಂಬ ಅಭಿಪ್ರಾಯ ಇದೆ. ಆದರೂ ಇಲ್ಲೂ ಸೋಲು ಗೆಲುವಿನ ಅಂತರ ದೊಡ್ಡ ಪ್ರಮಾಣದಲ್ಲಿ ಇರಲು ಸಾಧ್ಯವಿಲ್ಲ. ಹೀಗಾಗಿ ಶಿಗ್ಗಾಂವಿಯಲ್ಲೂ ಬೆಟ್ಟಿಂಗ್ ಎಚ್ಚರಿಕೆಯಿಂದಲೇ ನಡೆಯುತ್ತಿದೆ. ಜೊತೆಗೆ ವಕ್ಫ್ ವಿವಾದ, ಪಕ್ಕದ ಕ್ಷೇತ್ರದಲ್ಲಿಯೇ ನಡೆದ ವಕ್ಫ್ ಗಲಾಟೆ, ಲಿಂಗಾಯತ ಮಠಗಳಲ್ಲಿ ವಕ್ಫ್ ಪ್ರವೇಶ ಸೇರಿದಂತೆ ಚುನಾವಣೆಯ ಕೊನೆಯ ಹಂತದ ಬೆಳವಣಿಗೆಗಳ ಆಧಾರದಲ್ಲಿ ಭರತ್ ಬೊಮ್ಮಾಯಿ ಅವರ ಪರವಾಗಿ ಬೆಟ್ಟಿಂಗ್ ಒಲವು ಕಾಣಿಸುತ್ತಿದೆ ಎಂಬ ಮಾಹಿತಿ ಇದೆ.
ಸಂಡೂರು 70 : 30
ಇನ್ನು ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರಿನಲ್ಲಿ 17 ಎಲೆಕ್ಷನ್ ನಡೆದಿವೆ. ಬಿಜೆಪಿ ಕೇವಲ 2 ಬಾರಿ ಗೆದ್ದಿದೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯತ್ತ ಬೆಟ್ಟಿಂಗ್ ವಲವು ವ್ಯಕ್ತವಾಗುತ್ತಿದೆ. ಅನ್ನಪೂರ್ಣ ಅವರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. 70% ಬೆಟ್ಟಿಂಗ್ ಅನ್ನಪೂರ್ಣ ಪರವಾಗಿ ಇದೆ ಎನ್ನಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಲಕ್ಷ್ಮಣ್ ಈ ಬಾರಿ ಕ್ಷೇತ್ರದಲ್ಲಿ ಪೈಪೋಟಿ ನೀಡಿದರೂ ಗೆಲ್ಲುವ ಸಾಧ್ಯತೆ ಕಾಂಗ್ರೆಸ್ ಪರವಾಗಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ವಾಲ್ಮೀಕಿ ನಿಗಮದ ಹಗರಣ, ವಕ್ಫ್ ಗಲಾಟೆ, ಮುಡಾ ಹಗರಣ ಯಾವುದೂ ಪ್ರಭಾವ ಬೀರಿಲ್ಲ ಎನ್ನಲಾಗುತ್ತಿದೆ.



