ನಮ್ಮ ಹೋಟೆಲ್ಲಿನಲ್ಲಿ ಊಟ ಸ್ಪೆಷಲ್ಲು. ನಮ್ಮ ಟ್ರಿಪ್ಪಿನಲ್ಲಿ ಪ್ರವಾಸವೇ ಸ್ಪೆಷಲ್ಲು. ನಮ್ಮ ಅಂಗಡಿಯಲ್ಲಿ ಅದು ಸ್ಪೆಷಲ್ಲು.. ಇದು ಸ್ಪೆಷಲ್ಲು. ಎಂದು ಮಾರ್ಕೆಟಿಂಗ್ ಮಾಡೋದನ್ನ ನೋಡಿಯೇ ಇರ್ತೀರಿ. ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿನ ವಿಶೇಷಗಳನ್ನೆಲ್ಲ ಪಟ್ಟಿ ಮಾಡಿ, ಇಷ್ಟು ಪ್ಯಾಕೇಜ್ ಕೊಟ್ಟರೆ ಎಲ್ಲವೂ ಸಿಗುತ್ತೆ ಅನ್ನೋ ಆಫರ್ ಕೊಡೋವ್ರಿದ್ಧಾರೆ. ಆದರೆ.. ಭೂತಕೋಲ, ದೈವಾರಾಧನೆಯೂ ಅಂಥಾ ಪ್ಯಾಕೇಜಿಗೆ ಬಂದವಾ..?
ತುಳುನಾಡಿನಲ್ಲಿ ದೈವಾರಾಧನೆ, ಕಂಬಳ, ಜಾತ್ರೋತ್ಸವಗಳು ಒಂದರ ಹಿಂದೆ ಒಂದರಂತೆ ಆರಂಭಗೊಂಡಿವೆ. ಕಾಂತಾರದ ನಂತರವಂತೂ ಪ್ರವಾಸಕ್ಕೆ ಹೋಗುವವರು ಅಂತಹ ಭೂತಕೋಲ, ದೈವನರ್ತನ ನಡೆಯುವ ಪ್ರದೇಶಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಭೂತಕೋಲವನ್ನೂ ಪ್ರವಾಸಿಗಳ ಪ್ಯಾಕೇಜ್ ಮಾಡಿದೆ ಇಲ್ಲೊಂದು ಕಂಪೆನಿ. ನಂಬಿಕೆಯನ್ನೇ ವ್ಯವಹಾರ ವನ್ನಾಗಿಸಲು ಹೊರಟ ಸಂಸ್ಥೆಯೊಂದು ದೈವಕೋಲ, ಕಂಬಳದ ಹೆಸರಲ್ಲಿ ಟೂರ್ ಪ್ಯಾಕೇಜ್ ಘೋಷಿಸಿದೆ.
ಟ್ರಾವೆಲ್ ಏಜೆನ್ಸಿಯೊಂದರ ಪೋಸ್ಟರಿನಲ್ಲಿ ದೈವಾರಾಧನೆಯ ಚಿತ್ರವೊಂದನ್ನು ಹಾಕಿ ಒಬ್ಬ ವ್ಯಕ್ತಿಗೆ 2899ರೂ. ಮೌಲ್ಯದ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. 2024ರ ಫೆ.10 ಮತ್ತು 11ರಂದು ಈ ಪ್ಯಾಕೇಜ್ ದಿನವನ್ನೂ ಘೋಷಣೆ ಮಾಡಲಾಗಿದೆ. ಈ ಪ್ಯಾಕೇಜ್‌ನಲ್ಲಿ ನದಿಯಲ್ಲಿ ಬೋಟಿಂಗ್, ಉಪ್ಪಿನಂಗಡಿ ಕಂಬಳ ವೀಕ್ಷಣೆ, ಬೊಳ್ಳಾಡಿ ಫಾರ್ಮ್ನನಲ್ಲಿ ಪಾರ್ಟಿ, ಬೊಳ್ಳಾಡಿ ಮನೆಯಲ್ಲಿ ಭೂತ ಕೋಲ, ಬೀರಮಲೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಪ್ರವಾಸ ಎಂದು ನಮೂದಿಸಲಾಗಿದೆ. ದೈವಕೋಲದ ಫೋಟೋವನ್ನು ಟೂರ್ ಪ್ಯಾಕೇಜ್‌ನಲ್ಲಿ ಬಳಸಿ ಪ್ರಚಾರ ಮಾಡಿದ್ದಲ್ಲದೆ, ಧಾರ್ಮಿಕ ನಂಬಿಕೆಯನ್ನೇ ವ್ಯವಹಾರ ಮಾಡಲು ಹೊರಟ ಟೂರ್ ಏಜೆನ್ಸಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು, ಮುಂಬಯಿ ಸೇರಿದಂತೆ ನಾನಾ ಕಡೆ ವ್ಯಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಈ ಟೂರ್ ಪ್ಯಾಕೇಜ್ ಹರಿದಾಡುತ್ತಿದ್ದು, ಹಲವರು ಈಗಾಗಲೇ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿ ಗರು ಕೂಡಲೇ ಈ ಪ್ಯಾಕೇಜನ್ನು ರದ್ದುಪಡಿಸುವಂತೆ ಕೋರಿದ್ದಾರೆ. ದೈವವನ್ನು ದೈವದ ರೀತಿಯಲ್ಲಿ ಆರಾಧನೆ ಮಾಡಬೇಕೆ ಹೊರತು ಅದು ಹಾದಿ ತಪ್ಪಿದರೆ ಹೀಗೆ ಆಗುವುದು ಎಂದು ಆಕ್ರೋಶ ವ್ಯಕ್ತವಾಗಿದೆ. ಒಂದು ವೇಳೆ ಪ್ಯಾಕೇಜ್ ಘೋಷಿಸಿದ ಟ್ರಾವಲ್ ಸಂಸ್ಥೆ ಈ ಪ್ಯಾಕೇಜ್ ಮುಂದುವರಿಸಿದರೆ ಅದಕ್ಕೆ ತಕ್ಕುದಾದ ಕ್ರಮವನ್ನು ದೈವಾರಾಧಕರು ತೆಗೆದುಕೊಳ್ಳಲಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಕಾಂತಾರದ ಎಫೆಕ್ಟ್ :
ಕಾಂತಾರ ಸಿನಿಮಾ ಯಶಸ್ವಿಯಾದ ಹಿನ್ನೆಲೆಯೇ ಇದಕ್ಕೆಲ್ಲ ಕಾರಣ ಎನ್ನುವುದು ಒಂದು ವಾದ. ಆದರೆ ಕಾಂತಾರ ಸಿನಿಮಾ ಅನಿರೀಕ್ಷಿತ ಯಶಸ್ಸು ಕಂಡಿತ್ತು. ಅಲ್ಲದೆ ದೈವಾರಾಧನೆಯನ್ನು ಭಯಭಕ್ತಿಯಿಂದಲೇ ಮಾಡಿ ತೋರಿಸಲಾಗಿತ್ತು. ಅದನ್ನು ಬೇರೆಯವರು ಮಾಡುವ ಪ್ರಯತ್ನ ಮಾಡುತ್ತಿದ್ದರೂ.. ಮುಂದೆ ಹೆಜ್ಜೆಯಿಡಲು ಹಿಂದೇಟು ಹಾಕುತ್ತಿದ್ಧಾರೆ. ಕಾರಣ, ಭಯ. ಆದರೆ ಈ ಟ್ರಾವೆಲ್ ಏಜೆನ್ಸಿಯವರಿಗೆ ಭಯವೂ ಇಲ್ಲ. ಕಾಳಜಿ ಅನ್ನೋದು ಮೊದಲೇ ಇಲ್ಲ. ಹೀಗಾಗಿಯೇ ಇಂತಹ ಅಪಸವ್ಯಗಳನ್ನು ಮಾಡುತ್ತಿದ್ಧಾರೆ.



