ಧರ್ಮಸ್ಥಳ ಬುರುಡೆ ಕೇಸಿನಲ್ಲಿ ಕೊನೆಗೂ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇತ್ರ ಕೋರ್ಟ್ ಮೆಟ್ಟಿಲೇರಿದೆ. ಸೌಜನ್ಯ ರೇಪ್ ಕೇಸ್, ಕ್ಷೇತ್ರದಲ್ಲಿ ನೂರಾರು ಅತ್ಯಾಚಾರ ಆರೋಪ, ತಲೆ ಬುರುಡೆ ಪ್ರಕರಣ, ಎಸ್‌ಐಟಿ ತನಿಖೆ.. ಇತ್ಯಾದಿಗಳಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದು ಭಕ್ತರೇ ಹೊರತು, ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳಲ್ಲ. ಇದೀಗ ಕ್ಷೇತ್ರದ ಪರವಾಗಿ ಕೋರ್ಟ್ ಮೆಟ್ಟಿಲೇರಲಾಗಿದೆ. ಕೋರ್ಟಿನಲ್ಲಿ ಕ್ಷೇತ್ರದವರು ಎತ್ತಿರುವ ಅಂಶಗಳು, ವಾದಗಳು ಇಂಟ್ರೆಸ್ಟಿಂಗ್ ಆಗಿವೆ.
ಧರ್ಮಸ್ಥಳ ಕ್ಷೇತ್ರದ ಪರ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಅವರು, ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರ ಮುಂದೆ ವಾದ ಮಂಡಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರವನ್ನು ಸಂತ್ರಸ್ತರು ಎಂದು ಪರಿಗಣಿಸಲಾಗಿದೆ. ತಲೆಬುರುಡೆ ಕೇಸಿನಲ್ಲಿ ಧರ್ಮಸ್ಥಳ ಕ್ಷೇತ್ರವನ್ನು ಉಲ್ಲೇಖಿಸಿ ಬುರುಡೆ ಕೇಸ್ ಆರೋಪಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಧರ್ಮಸ್ಥಳ ದೇವಸ್ಥಾನವನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಸಂತ್ರಸ್ಥರ ನೆಲೆಯಲ್ಲಿ, ಧರ್ಮಸ್ಥಳ ಕ್ಷೇತ್ರದವರಿಗೂ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶ ನೀಡಬೇಕು ಎನ್ನುವುದು ಕ್ಷೇತ್ರದ ವಾದ. ವಿಚಾರಣೆಯನ್ನು ಜನವರಿ 3ಕ್ಕೆ ನಿಗದಿ ಮಾಡಲಾಗಿದೆ.
ಹಿರಿಯ ನ್ಯಾಯವಾದಿ ಮಹೇಶ್ ಕಜೆ ನೀಡಿರುವ ಮಾಹಿತಿ ಪ್ರಕಾರ ಪ್ರತಿವಾದಿಗಳ ಕಡೆಯಿಂದ ಯಾವುದೇ ರೀತಿಯ ಆಕ್ಷೇಪವೂ ವ್ಯಕ್ತವಾಗಿಲ್ಲ. ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ದೂರು ನೀಡಿದ್ದವರೇ ಷಡ್ಯಂತ್ರ ಮಾಡಿದ್ದರು ಎಂದು ಕೋರ್ಟಿಗೆ ವರದಿ ಕೊಟ್ಟಿದೆ. ಆದರೆ ಇದುವರೆಗೆ ಷಡ್ಯಂತ್ರ ಮಾಡಿದ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಒಬ್ಬರೇ ಒಬ್ಬರು ಅರೆಸ್ಟ್ ಆಗಿಲ್ಲ.
ತಿಮ್ಮರೋಡಿ, ಚಿನ್ನಯ್ಯ, ಸುಜಾತಾ ಭಟ್, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಎಂಡಿ ಸಮೀರ್.. ಹೀಗೆ ಯಾರೊಬ್ಬರನ್ನೂ ಎಸ್‌ಐಟಿ ಅರೆಸ್ಟ್ ಮಾಡಿಲ್ಲ. ಈ ಮಧ್ಯೆ ಅಪಪ್ರಚಾರ ಆರೋಪ ಪ್ರಕರಣ ಸಂಬಂಧ ಕೋರ್ಟ್ಗೆ ಎಸ್‌ಐಟಿ ಸಲ್ಲಿಸಿದ ಪ್ರಾಥಮಿಕ ವರದಿ ಹಲವಾರು ಕುತೂಹಲಕಾರಿ ಅಂಶಗಳನ್ನು ಬಹಿರಂಗಗೊಳಿಸಿದೆ. ಧರ್ಮಸ್ಥಳದ ವಿರುದ್ಧ ಆರೋಪ ಹೊರಿಸಿದ್ದ ಬುರುಡೆ ಗ್ಯಾಂಗ್ ಸದಸ್ಯನೋರ್ವನಿಗೆ ಅವರು ತಂದಿದ್ದ ಬುರುಡೆಯೇ ಕಾಟ ಕೊಟ್ಟಿತ್ತು ಎನ್ನುವ ಮಾಹಿತಿ SIT ವರದಿಯಲ್ಲಿ ಉಲ್ಲೇಖವಾಗಿದೆ.
ಗ್ಯಾಂಗ್ ಸದಸ್ಯ ಜಯಂತ್ ಬುರುಡೆಯನ್ನ ರೈಲಿನ ಮೂಲಕ ದೆಹಲಿಗೂ ತೆಗೆದುಕೊಂಡು ಹೋಗಿದ್ದ. ಇತರರಾದ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಮತ್ತು ಸುಜಾತಾ ಫ್ಲೈಟ್ ಮೂಲಕ ತೆರಳಿದ್ದರು. ಈ ವೇಳೆ ಒಂದೇ ರೂಂನಲ್ಲಿ ಚಿನ್ನಯ್ಯ, ಮಟ್ಟಣ್ಣನವರ್ ಮತ್ತು ಜಯಂತ್ ಮಲಗಿದ್ದ ವೇಳೆ ಕೆಟ್ಟ ಕನಸು ಬಿದ್ದು ಜಯಂತ್ ಕಿರುಚಿಕೊಂಡಿದ್ದ. ಇದೇ ಕಅರಣಕ್ಕೆ ಹೆದರಿ ವಾಪಸ್ ಬುರುಡೆ ತರಲು ಒಪ್ಪದೆ ಅದನ್ನು ದೆಹಲಿಯಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದ. ಬಳಿಕ ಮತ್ತೆ ವಿಮಾನದ ಮೂಲದ ದೆಹಲಿಗೆ ತೆರಳಿದ್ದ ಜಯಂತ್, ರೈಲಿನ ಮೂಲಕ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಬುರುಡೆ ತಂದಿದ್ದ. ತಿಮರೋಡಿ ಮನೆಗೆ ಅದನ್ನು ಕೊಂಡೊಯ್ದಿದ್ದ ಎಂದು ವರದಿಯಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.
ದೆಹಲಿಯಲ್ಲಿ ಪ್ರತ್ಯೇಕ ರೂಮ್ನಲ್ಲಿ ಇದ್ದ ಸುಜಾತಾ ಭಟ್ ಅರಿವಿಲ್ಲದೇ ಬುರುಡೆ ಜೊತೆ ರಾತ್ರಿ ಕಳೆದಿದ್ದರು. ದೆಹಲಿಯ ವಿಠ್ಠಲ ಮಂದಿರದಲ್ಲಿ ಆರೋಪಿಗಳು ರೂಂ ಮಾಡಿದ್ದು, ಸುಜಾತಾ ಭಟ್ ಇದ್ದ ರೂಂ ಮಂಚದ ಕೆಳಗೆ ಜಯಂತ್ ಬುರುಡೆ ಬಾಕ್ಸ್ ಇಟ್ಟಿದ್ದ. ಈ ವೇಳೆ ಬಾಕ್ಸ್ನಲ್ಲಿ ಏನಿದೆ ಅಂತಾ ಸುಜಾತಾ ಭಟ್ ಕೇಳಿದ್ದು, ಏನಿಲ್ಲ ಅಂತಾ ಹೇಳಿ ಜಯಂತ್ ಸುಮ್ಮನಾಗಿದ್ದ. ಹೀಗಾಗಿ ಅಂದು ರಾತ್ರಿ ಸುಜಾತಾ ಭಟ್ ಮಲಗಿದ್ದ ಮಂಚದ ಕೆಳಗೇ ಬುರುಡೆ ಇತ್ತು. ಅದೇ ರಾತ್ರಿ ಜಯಂತ್ಗೆ ಕೆಟ್ಟ ಕನಸು ಕೂಡ ಬಿದ್ದಿತ್ತು ಎಂದು ಕೋರ್ಟ್ಗೆ ಎಸ್‌ಐಟಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.



