ರಾಜ್ಯ ಸರ್ಕಾರದ ಬಳಿ ಜನರ ಕಷ್ಟಕ್ಕೆ ಕೊಡುವುದಕ್ಕೆ ಹಣ ಇಲ್ಲ. ರಸ್ತೆ, ನೀರು, ಚರಂಡಿ, ಔಷಧಿ, ಸಂಬಳ ಕೊಡುವುದಕ್ಕೂ ಹಣ ಇಲ್ಲ. ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ಅರ್ಥ ವ್ಯವಸ್ಥೆ ದಿವಾಳಿಯಾಗಿದೆ ಎನ್ನುವ ಆರೋಪ ಕೇಳಿ ಬರುತ್ತಲೇ ಇದೆ. ಬಿಜೆಪಿ, ಜೆಡಿಎಸ್ ಅಷ್ಟೇ ಅಲ್ಲ, ಕೆಲವು ಕಾಂಗ್ರೆಸ್ ಶಾಸಕರೂ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೆಲವರನ್ನು ಕಾಂಗ್ರೆಸ್ ಬಾಯಿ ಮುಚ್ಚಿಸಿದೆ. ಕೆಲವರು ಮುಚ್ಚಿಲ್ಲ. ಹೀಗಿರುವಾಗಲೇ ಸ್ವತಃ ಡಿಕೆ ಶಿವಕುಮಾರ್ ಗ್ಯಾರಂಟಿಯಿಂದ ಹೊರೆ ಎಂದು ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ʻಕುಸುಮ ಸಂಜೀವಿನಿʼ ಯೋಜನೆ ಉದ್ಘಾಟಿಸಿದ ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾದರೂ ಆರ್ಥಿಕ ವಿಚಾರದಲ್ಲಿ ರಾಜ್ಯದ ಜನತೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕುಸುಮ ಸಂಜೀವಿನಿ’ ಹೆಸರಲ್ಲಿ ಹಿಮೋಫಿಲಿಯ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಹಾಗೂ 108 ಆ್ಯಂಬುಲೆನ್ಸ್ ಸೇವೆಗಳನ್ನು ಡಿಸಿಎಂ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡುತ್ತಿದ್ದ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಇದರಿಂದ ಹೊರೆ ಆಗುತ್ತಿರಬಹುದು. ಹೊರೆಯಾದರೂ ಸರ್ಕಾರ ಜನತೆಗೆ ಆರ್ಥಿಕ ಶಕ್ತಿ ಕಡಿಮೆ ಆಗಬಾರದು, ಮಾನಸಿಕ ಒತ್ತಡ ಉಂಟಾಗಬಾರದು. ಹೀಗೆ ಜನರಿಗೆ ಮಾನಸಿಕ ಧೈರ್ಯ ತುಂಬಲು, ಆರ್ಥಿಕ ಶಕ್ತಿ ತುಂಬುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಭಾಗವಾಗಿರುವ ಶಾಸಕರೇ ಗ್ಯಾರಂಟಿ ವಿರುದ್ಧ ಮಾತನಾಡಿದ್ದರು. ಶಾಸಕ ಎಚ್ ಆರ್ ಗವಿಯಪ್ಪ, ರಾಘವೇಂದ್ರ ಹಿಟ್ನಾಳ್, ಆರ್ ವಿ ದೇಶಪಾಂಡೆ, ಕೆ ಎನ್ ರಾಜಣ್ಣ, ಲೋಕೇಶ್ವರ್, ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವರು ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನು ಆಂತರಿಕ ಸಭೆಗಳಲ್ಲಿ ಕಿತ್ತಾಟಗಳೂ ಆಗಿವೆ. ಈ ಮಧ್ಯೆ ಈ ಬಾರಿಯ ಬಜೆಟ್ಟಿನಲ್ಲಿ ʻಗಿವ್ ಇಟ್ ಅಪ್ʼ ಎಂಬ ಯೋಜನೆ ಜಾರಿಗೆ ತರಲು ಮುಂದಾಗಿದೆ ಸರ್ಕಾರ. ಅಂದರೆ ಯಾರು ಯಾರಿಗೆ ಯೋಜನೆ ಅಗತ್ಯ ಇಲ್ಲವೋ, ಅವರು ಸ್ವಯಂ ಪ್ರೇರಿತರಾಗಿ ಸರ್ಕಾರದ ಉಚಿತ ಯೋಜನೆಗಳನ್ನು ನಿರಾಕರಿಸಬಹುದು. ಈ ಮೂಲಕ ಹೊರೆಯನ್ನು ತಗ್ಗಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಗ್ಯಾರಂಟಿಗಳು ರಾಜ್ಯದ ಆರ್ಥಿಕತೆಗೆ ಹೊರೆ ಎಂಬ ಟೀಕೆ ಹೆಚ್ಚಾಗಿದೆ. ಕಾಂಗ್ರೆಸ್ ಶಾಸಕರು ಮತ್ತು ಕೆಲವು ಸಚಿವರು (ಉದಾ: ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್) ಶ್ರೀಮಂತರನ್ನು ಹೊರತುಪಡಿಸಿ ಕೇವಲ ಬಡವರಿಗೆ (BPL) ಮಾತ್ರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದರಿಂದ ವಾರ್ಷಿಕ ₹10,000 ಕೋಟಿ ಉಳಿಸಬಹುದು ಎಂಬ ಅಂದಾಜು. ಡಿ.ಕೆ. ಶಿವಕುಮಾರ್ ಅವರು “ಗ್ಯಾರಂಟಿಗಳು ಹೊರೆಯೇ ಆದರೂ ಜನರ ಮಾನಸಿಕ ಒತ್ತಡ ಕಡಿಮೆ ಮಾಡಲು ಬೇಕು” ಎಂದು ಹೇಳಿದ್ದಾರೆ.ಸರ್ಕಾರ ಯೋಜನೆಗಳನ್ನು ಮುಂದುವರೆಸುತ್ತಿದ್ದರೂ, ಆರ್ಥಿಕ ಒತ್ತಡದಿಂದಾಗಿ ಪರಿಷ್ಕರಣೆ (eligibility tightening) ಮಾಡುವ ದಿಕ್ಕಿನಲ್ಲಿ ಹೋಗುತ್ತಿದೆ. ಮಾರ್ಚ್ ಬಜೆಟ್‌ನಲ್ಲಿ ಇನ್ನಷ್ಟು ಸ್ಪಷ್ಟತೆ ಬರಲಿದೆ.



