ಗುತ್ತಿಗೆದಾರರಿಂದ ಲಂಚ ಸ್ವೀಕಾರ ಮಾಡುತ್ತಿರುವಾಗಲೇ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ವಿಚಿತ್ರ ಅಂದರೆ.. ಇವರ ಅರೆಸ್ಟ್ ಆದಾಗ ಕಾಂಗ್ರೆಸ್ಸಿಗೆ ಧಿಕ್ಕಾರ ಮತ್ತು ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳೂ ಮೊಳಗಿವೆ. ಕಾಂಗ್ರೆಸ್ಸಿಗೆ ಧಿಕ್ಕಾರ ಓಕೆ, ಭಾರತ್ ಮಾತಾಕಿ ಜೈ ಯಾಕೆ ಎಂಬ ಪ್ರಶ್ನೆಗಳೂ ಉದ್ಭವವಾಗಿವೆ. ಇದರ ಮಧ್ಯೆ ಬಿಜೆಪಿ ನಾಯಕರೆಲ್ಲ, ಪ್ರಕರಣದಿಂದ ಅಂತರ ಕಾಯ್ದುಕೊಳ್ತಿದ್ದರೆ, ಸಮರ್ಥನೆಗೆ ಬಂದಿರುವುದು ಬಸನಗೌಡ ಪಾಟೀಲ ಯತ್ನಾಳ್.
ಲೋಕಾಯುಕ್ತ ಪೊಲೀಸರ ಪ್ರಕಾರ, ಶಾಸಕ ಚಂದ್ರು ಲಮಾಣಿ, 1 ಕೋಟಿ ರೂಪಾಯಿ ಮೌಲ್ಯದ ಕಾಂಟ್ರಾಕ್ಟ್ಗೆ ಗುತ್ತಿಗೆದಾರರಿಂದ 11 ಲಕ್ಷ ರೂ. ಕಮಿಷನ್ ಕೇಳಿದ್ದರು. ಈ ಸಂಬಂಧ ಶಾಸಕ ಚಂದ್ರು ಲಮಾಣಿ, ಆಪ್ತ ಸಹಾಯಕರಾದ ಗುರು ಮತ್ತು ಮಂಜುನಾಥ್ ಅವರನ್ನು ಕೂಡ ಹಣ ಸ್ವೀಕರಿಸಿದ್ದಕ್ಕಾಗಿ ವಶಕ್ಕೆ ಪಡೆಯಲಾಗಿದೆ. ಈ ಮೂವರನ್ನೂ ಗದಗದ ಲೋಕಾಯುಕ್ತ ಎಸ್ಪಿ ವಿಚಾರಣೆ ನಡೆಸುತ್ತಿದ್ದಾರೆ.ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ವಿಜಯ ಪೂಜಾರ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿರುವಾಗಲೇ ದಾಳಿ ನಡೆದಿದೆ.ಶಾಸಕರ ಪಿಎಗಳಿಗೆ ಮೊದಲ ಕಂತಿನ 5 ಲಕ್ಷ ರೂ.ಗಳನ್ನು ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಗದಗ ಜಿಲ್ಲೆಯ ಸಂಕದಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸುಮಾರು 1 ಕೋಟಿ ರೂಪಾಯಿ ಯೋಜನೆ ರೆಡಿಯಾಗಿತ್ತು. ಈ ಕಾಮಗಾರಿಗೆ ಸಂಬಂಧಿಸಿದಂತೆ 1% ಕಮಿಷನ್ (ಲಂಚ) ಬೇಡಿಕೆ ಇಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ದಾಳಿಯ ಸಂದರ್ಭದಲ್ಲಿ, ಶಾಸಕರ ಪಿಎ 50 ಸಾವಿರ ರೂ. ಹಣವನ್ನು ಕಾಗದದ ಬಂಡಲ್‌ನಲ್ಲಿ ಹಾಕಿ ಸಮೀಪದ ಖಾಸಗಿ ಶಾಲೆ ಬಳಿ ಎಸೆದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಲೋಕಾಯುಕ್ತ ಅಧಿಕಾರಿಗಳು ಪಿಎ ಎಸೆದ ಹಣವನ್ನು ವಶಕ್ಕೆ ಪಡೆದಿದ್ದಾರೆ.ಲೋಕಾಯುಕ್ತ ದಾಳಿ ವಿಷಯ ತಿಳಿಯುತ್ತಿದ್ದಂತೆ ಬಾಲಾಜಿ ಆಸ್ಪತ್ರೆ ಎದುರು ಶಾಸಕರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮೇಲ್ಮನೆ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರೆಲ್ಲ ಹೆಚ್ಚಿನ ಮಾಹಿತಿ ಇಲ್ಲ. ಪ್ರಕರಣದ ಬಗ್ಗೆ ವಿಷಯ ತಿಳಿದುಕೊಂಡು ಮಾತನಾಡುತ್ತೇವೆ ಎನ್ನುವ ಮೂಲಕ ಅಂತರ ಕಾಯ್ದುಕೊಳ್ಳುತ್ತಿದ್ದರೆ, ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಕ್ಕೆ ಬಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೊಂದು ವ್ಯವಸ್ಥಿತವಾದ ಸಂಚು ಎಂದು ಕಿಡಿಕಾರಿದ್ದಾರೆ. ಚಂದ್ರು ಲಮಾಣಿ ಅವರು ಒಬ್ಬ ಒಳ್ಳೆಯ ವೈದ್ಯರು ಹಾಗೂ ಉತ್ತಮ ಮನುಷ್ಯ. ಅವರು ಕೇವಲ ಎರಡು-ಮೂರು ಲಕ್ಷ ರೂಪಾಯಿಗಾಗಿ ಕೈವೊಡ್ಡುವಂತಹ ಸಣ್ಣ ವ್ಯಕ್ತಿತ್ವದ ಮನುಷ್ಯ ಅಲ್ಲವೇ ಅಲ್ಲ,” ಎಂದು ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ. ಬಂಜಾರ ಸಮಾಜದ ಉದಯೋನ್ಮುಖ ನಾಯಕನನ್ನು ಹತ್ತಿಕ್ಕುವ ಉದ್ದೇಶದಿಂದ ಈ ಟ್ರ್ಯಾಪ್ ಮಾಡಲಾಗಿದೆ. ವ್ಯವಸ್ಥಿತವಾಗಿ ಒಬ್ಬ ಬಂಜಾರ ಸಮಾಜದ ಶಾಸಕನನ್ನು ಸಿಲುಕಿಸಬೇಕು ಎಂಬ ಕಾರಣಕ್ಕೆ ಈ ಪ್ಲಾನ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಇಡೀ ಪ್ರಕರಣದ ಹಿಂದೆ ರಾಜಕೀಯ ಪ್ರೇರಿತ ಸಂಚು ಅಡಗಿದೆ. ಅವರನ್ನು ಸಿಲುಕಿಸಲೇಬೇಕು ಎಂಬ ಹಠದಿಂದ ಈ ಕಾರ್ಯಾಚರಣೆ ನಡೆಸಿದಂತೆ ಕಾಣುತ್ತಿದೆ ಎಂದು ಯತ್ನಾಳ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ಶಾಸಕರ ಮೇಲಿನ ಆರೋಪ ಕಾಂಗ್ರೆಸ್ಸಿಗೆ ಶಕ್ತಿ ಕೊಟ್ಟಿದೆ. “ಬಿಜೆಪಿಯವರು ಈ ದೇಶದಲ್ಲೇ ಅತ್ಯಂತ ಪ್ರಾಮಾಣಿಕರಲ್ಲವೇ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲೇವಡಿ ಮಾಡಿದ್ದಾರೆ.



