ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣದ ತನಿಖೆಗೆ ಸಡನ್ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಆದಾಯ ಮೀರಿದ ಆಸ್ತಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಈ ಹಿಂದೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು, ನ. 23ರಂದು ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಆಗ ನೀಡಿದ್ದ ಅನುಮತಿಯನ್ನು ರದ್ದು ಮಾಡಲು ಒಪ್ಪಿಗೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದು, ಅಧಿಕೃತ ಆದೇಶ ಕೆಲವೇ ದಿನಗಳಲ್ಲಿ ಹೊರಬೀಳಲಿದೆ.
ಸರ್ಕಾರ ಕೊಟ್ಟ ಕಾರಣವಾದರೂ ಏನು?
ಹಿಂದಿನ ಸರ್ಕಾರ ವಿಧಾನಸಭೆಯ ಸ್ಪೀಕರ್ ಅನುಮತಿಯನ್ನು ಪಡೆಯದೇ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಹಾಗಾಗಿ, ಅದು ಕಾನೂನು ರೀತಿಯಾಗಿ ಸರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅನುಮತಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎನ್ನುವುದು ಸರ್ಕಾರದ ವಾದ. ಹೆಚ್.ಕೆ. ಪಾಟೀಲ್ ಹೇಳಿರುವುದು ಕೂಡಾ ಇದನ್ನೇ.
ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತ್ತು. ಅದರ ವಿರುದ್ಧ ಡಿ.ಕೆ. ಶಿವಕುಮಾರ್ ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದು, ಅದೀಗ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಅದು ಇತ್ಯರ್ಥವಾಗುವ ಮೊದಲೇ ರಾಜ್ಯ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಮುಂದೆ ಸರ್ಕಾರವನ್ನು ಪೇಜಿಗೆ ಸಿಲುಕಿಸುವ ಸಾಧ್ಯತೆಗಳಿವೆ.
ಡಿಕೆ ಶಿವಕುಮಾರ್ ಗೈರು ಹಾಜರಿನಲ್ಲಿ..
ಹೌದು, ಕ್ಯಾಬಿನೆಟ್ ಸಭೆಗೆ ಡಿಕೆ ಶಿವಕುಮಾರ್ ಗೈರು ಹಾಜರಾಗಿದ್ದರು. ಡಿಸಿಎಂ ಅನುಪಸ್ಥಿತಿಯಲ್ಲಿಯೇ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಕೆ ಶಿವಕುಮಾರ್ ಕೂಡಾ ಕ್ಯಾಬಿನೆಟ್ ಸಭೆಯಲ್ಲಿದ್ದು, ಅವರದ್ದೇ ಮೇಲಿನ ಭ್ರಷ್ಟಾಚಾರದ ಆರೋಪದ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ಸ್ವಹಿತಾಸಕ್ತಿ ಅಡ್ಡಿಯಾಗುತ್ತಿತ್ತು. ಹೀಗಾಗಿ ಡಿಕೆ ಶಿವಕುಮಾರ್ ಸಭೆಯಿಂದ ಹೊರಗುಳಿದಿದ್ದರು ಎನ್ನಲಾಗಿದೆ.
ಸರ್ಕಾರದ ನಿರ್ಧಾರ ನ್ಯಾಯಸಮ್ಮತವೇ?
ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರ ಎಲ್ಲಾ ಅಕ್ರಮಗಳನ್ನು ಹಿಂಪಡೆಯುವುದಾಗಿ ಹೇಳಿಕೊಂಡಿದ್ದ ಸಿದ್ದರಾಮಯ್ಯನವರ ಸರ್ಕಾರ, ಈಗ ತಮ್ಮ ಸಂಪುಟದ ಪ್ರಭಾವಿ ಸಚಿವರ ವಿರುದ್ಧದ ತನಿಖೆ ಅನುಮತಿಯನ್ನು ಹಿಂಪಡೆಯಲು ನಿರ್ಧರಿಸಿದೆ. ರಾಜಕೀಯವಾಗಿ ಇದು ಸರಿ ಎನ್ನಿಸಬಹುದಾದರೂ, ಕಾನೂನಾತ್ಮಕವಾಗಿ ತೊಡಕಾಗಬಹುದು. ಏಕೆಂದರೆ ಸಿಬಿಐ ತನಿಖೆ ಪ್ರಶ್ನಿಸಿ ಇತ್ತೀಚೆಗೆ ಡಿಕೆ ಶಿವಕುಮಾರ್ ಅವರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಅದರ ವಿರುದ್ಧ ಡಿಕೆ ಶಿವಕುಮಾರ್ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ವಿಚಾರಣೆ ಮತ್ತು ತನಿಖೆ ನಡೆಯುತ್ತಲೇ ಇದೆ. ತನಿಖೆ ಅಂತಿಮ ಹಂತದಲ್ಲಿದೆ. ಹೀಗಿರುವಾಗ ತನಿಖೆಗೆ ನೀಡಿದ್ದ ಅನುಮತಿಯನ್ನೇ ವಾಪಸ್ ತೆಗೆದುಕೊಳ್ಳುವ ತೀರ್ಮಾನ ಊರ್ಜಿತವಾಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಅವರಿಂದ ಸಲಹೆಯನ್ನು ಪಡೆದು ಡಿಕೆಶಿ ವಿರುದ್ಧದ ಅನುಮತಿಯನ್ನು ಹಿಂಪಡೆಯುವ ಹೊಸ ಪ್ರಸ್ತಾವನೆಯನ್ನು ರಾಜ್ಯ ಗೃಹ ಇಲಾಖೆ ಸಿದ್ಧಪಡಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ನ. 23ರ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಿದ್ದ 13 ವಿಚಾರಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ, ಅದರಲ್ಲಿ ಡಿಕೆಶಿಯವರ ಕುರಿತಾದ ಪ್ರಕರಣದ ಪ್ರಸ್ತಾಪವೇ ಇರಲಿಲ್ಲ. ಸಂಪುಟ ಸಭೆಯ ನಂತರ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಸಂಪುಟದ ಹಿರಿಯ ಸಚಿವರು ಸುಮಾರು 35 ನಿಮಿಷಗಳವರೆಗೆ ಡಿಕೆಶಿ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಆ ಚರ್ಚೆಯಲ್ಲಿ ಪ್ರಸ್ತಾವನೆ ಹಿಂಪಡೆಯಲು ಸಿಎಂ ಸಿದ್ದರಾಮಯ್ಯ ಒಪ್ಪಿದ್ದಾರೆ ಎನ್ನಲಾಗಿದೆ.



