ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ತಕ್ಷಣ ಹಳೆಯ ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿದ್ದ ಹಾಗೂ ನಡೆಯುತ್ತಿದ್ದ ಎಲ್ಲ ಕಾಮಗಾರಿಗಳಿಗೂ ಬ್ರೇಕ್ ಹಾಕಿತ್ತು. ಅನುದಾನ ಬಿಡುಗಡೆಗೆ ತಡೆ ಕೊಟ್ಟಿತ್ತು. ರಾಜ್ಯದಾದ್ಯಂತ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಇದೆಲ್ಲದರ ಹಿಂದೆ ಬೇರೆಯದೇ ಹುನ್ನಾರ ಇದೆ ಎಂದು ಆರೋಪಿಸಿದ್ದಾರೆ ಕುಮಾರಸ್ವಾಮಿ.
ಕಾಂಗ್ರೆಸ್ನಲ್ಲೂ ಈಗ ಪರ್ಸೆಂಟೇಜ್ ಶುರುವಾಗುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ರೇಟ್ ಫಿಕ್ಸ್ ಮಾಡುವ ಸಲುವಾಗಿ ಎಲ್ಲ ಕೆಲಸ ನಿಲ್ಲಿಸಿದ್ದಾರೆ. ಕಳೆದ 4 ವರ್ಷದ ಬೆಂಗಳೂರು ಅಭಿವೃದ್ಧಿ ಬಗ್ಗೆ ತನಿಖೆ ಮಾಡ್ತೀವಿ ಅಂತ ಒಬ್ಬ ಮಂತ್ರಿ ಹೇಳ್ತಾರೆ. ಇದು ನಗೆಪಾಟಲಿನ ವಿಚಾರ. ನಾಲ್ಕು ವರ್ಷದ ಅಭಿವೃದ್ಧಿ ಕಾರ್ಯಗಳ ತನಿಖೆ ಯಾವ ರೀತಿ, ಎಲ್ಲಿಂದ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ ಕುಮಾರಸ್ವಾಮಿ.
ಕಾಂಗ್ರೆಸ್ನವರು ಹೊರನೋಟಕ್ಕೆ ನಾವು ಲಂಚ ತೆಗೆದುಕೊಳ್ಳಲ್ಲ ಅಂತಾರೆ. ನಾನು ಲಂಚ ಮುಟ್ಟಲ್ಲ, ನೀವು ಮುಟ್ಟಬೇಡಿ ಎಂದು ವೀರಾವೇಶದಲ್ಲಿ ಹೇಳ್ತಾರೆ. ಆದರೆ, ಬೆಳಗ್ಗೆ ಎದ್ದರೆ ಕಾಂಗ್ರೆಸ್ನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇವತ್ತು ಬೆಳಿಗ್ಗೆಯಾದರೆ ಯಾವ ಮಂತ್ರಿ ನೋಡಿದರೂ ತನಿಖೆ ಅಂತಾರೆ. ಈ ಸರ್ಕಾರದ ಹೇಳಿಕೆ ನೋಡಿದ್ರೆ ಇದು 6ನೇ ಗ್ಯಾರಂಟಿ. ಹಿಂದಿನ ಸರ್ಕಾರದ ತನಿಖಾ ಜ್ಯೋತಿ ಅಂತ ಸೇರಿಸ್ಕೊಳ್ಳಿ. ಇವರ ಯಾವ ತನಿಖೆಗಳಿಗೂ ತಾರ್ಕಿಕ ಅಂತ್ಯ ಇಲ್ಲ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಹೊಸ ಹೊಸ ಹೇಳಿಕೆ ಕೊಡ್ತಿದ್ದಾರೆ. ರಾಜ್ಯದಲ್ಲಿ ಪರಿಶುದ್ಧ ಆಡಳಿತ ತರ್ತಿವಿ ಅನ್ನೊದು ಇವರ ಭ್ರಮೆ ಎನ್ನುವುದು ಕುಮಾರಸ್ವಾಮಿ ಆರೋಪ.
ಇದೇ ವೇಳೆ, ಅಕ್ಕಿ ಭಾಗ್ಯ ಕೊಡುವುದಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಾರೆ. ಬೆಲೆ ಏರಿಕೆ ಬಗ್ಗೆ ಕೇಳಿದ್ರೆ ಕೇಂದ್ರ ಸರ್ಕಾರದ ಕಡೆ ಕೈತೋರಿಸ್ತಾರೆ. ಗೃಹಜ್ಯೋತಿ ವಿಷಯ ಕೇಳಿದ್ರೆ ಕೇಂದ್ರದವರು ಹ್ಯಾಕ್ ಮಾಡಿದ್ದಾರೆ ಅಂತಾರೆ.. ಎಲ್ಲದಕ್ಕೂ ಕೇಂದ್ರದತ್ತ ಬೆರಳು ತೋರಿಸುವುದೇ ಆದ್ರೆ ನೀವ್ಯಾಕೆ ಇದ್ದೀರಿ ಎನ್ನುವುದು ಕುಮಾರಸ್ವಾಮಿ ಎತ್ತಿರುವ ಪ್ರಶ್ನೆ.
ರಾಜ್ಯದಲ್ಲಿ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಇದನ್ನು ಕೇಂದ್ರ ಸರ್ಕಾರ ಮಾಡಿರುವುದಲ್ಲ. ಇವರು ಈಗ ಕೇಂದ್ರದ ಕಡೆಗೆ ಕೈ ತೋರಿಸ್ತಿದ್ದಾರೆ. ಅವರನ್ನ ಹೊಣೆ ಮಾಡಿದ್ರೆ ಇವರು ಇರೋದ್ಯಾಕೆ. ಚುನಾವಣೆ ಪೂರ್ವದಲ್ಲಿ ಇಬ್ಬರು ಫೋಟೋ ಹಾಕಿ ಜಾಹೀರಾತು ಕೊಟ್ಟಿದ್ರಲ್ಲ. ಬೆಲೆ ಏರಿಕೆ ಇಳಿಸ್ತೀವಿ ಅಂತಾ ತಾನೇ ವೋಟ್ ಕೇಳಿದ್ದು. ಈಗ ಕೇಂದ್ರದ ಕಡೆ ಕೈ ತೋರಿಸಿದ್ರೆ ನೀವೇನು ಮಾಡ್ತೀರಿ. ಹಾಗಿದ್ರೆ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.



