ಹಿಂದೂಸ್ತಾನ್ ಯುನಿ ಲಿವರ್ʻನ ಪ್ರಾಡಕ್ಟುಗಳು, ರಿನ್ ಸೋಪು, ಪೌಡರ್, ಸರ್ಫ್ ಎಕ್ಸೆಲ್, ವ್ಹೀಲ್ ಪೌಡರ್, ಸೋಪ್ ಹಾಗೂ ವಾಷಿಂಗ್ ಮೆಷಿನ್ ಲಿಕ್ವಿಡ್, ಹಾರ್ಪಿಕ್, ಲೈಜಾಲ್ʻನಂತಹ ಟಾಯ್ಲೆಟ್ ಕ್ಲೀನರ್ ಲಿಕ್ವಿಡ್, ಲೈಫ್ ಬಾಯ್ ಸೇರಿದಂತೆ ದೊಡ್ಡ ದೊಡ್ಡ ಬ್ರಾಂಡುಗಳ ಹ್ಯಾಂಡ್ ವಾಷ್, ರೆಡ್ ಲೇಬಲ್, ತ್ರೀರೋಸಸ್ ಟೀ ಪುಡಿ, ಎವರೆಸ್ಟ್ ಮೊದಲಾದ ಮಸಾಲೇ ಪೌಡರ್ ಪದಾರ್ಥಗಳು.. ಒಂದೇ ಎರಡೇ.. ಯಾವುದೂ ವೊರಿಜಿನಲ್ ಅಲ್ಲ. ಅಲ್ಲಿಗೆ ಹೋಗಿದ್ದ ಪೊಲೀಸರೂ ಶಾಕ್ ಆಗಿದ್ದರು.
ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಯ ವ್ಯಾಪ್ತಿಯಲ್ಲಿ ವಿನಾಯಕ ನಗರದಲ್ಲಿರುವ ಗೋಡೌನ್ʻಗೆ ಸ್ಪಷ್ಟ ಮಾಹಿತಿ ಮೇಲೆ ರೇಡ್ ಮಾಡಿದ ಪೊಲೀಸರಿಗೆ ಅಲ್ಲಿ ಸಿಕ್ಕ ನಕಲಿ ಬ್ರಾಂಡುಗಳ ರಾಶಿಯನ್ನೇ ನೋಡಿ ಶಾಕ್ ಆಗಿದ್ದಂತೂ ಸತ್ಯ.
ಏಕೆಂದರೆ.. ಇವುಗಳನ್ನು ನೋಡಲು ಥೇಟ್ ವೊರಿಜಿನಲ್ ಹಾಗೆಯೇ ಕಾಣಿಸುತ್ತವೆ. ಆದರೇ ಆ ವಸ್ತುಗಳು ವೊರಿಜಿನಲ್ ಆಗಿರಲ್ಲ. ಬಜಾರ್ ನಲ್ಲಿ ಅಸಲಿ ವಸ್ತುಗಳ ಬೆಲೆಗಿಂತ ಕಡಿಮೆ ಹಣಕ್ಕೆ ಬಿಕರಿಯಾಗೋ ಪ್ರತಿಷ್ಠಿತ ಕಂಪನಿಗಳ ವಸ್ತುಗಳು ಅಕ್ಷರಶಃ ನಕಲಿ. ದಿನ ನಿತ್ಯ ಜನರು ಬಳಸುವ ವಸ್ತುಗಳನ್ನೇ ಟಾರ್ಗೆಟ್ ಮಾಡಿಕೊಂಡ ಗ್ಯಾಂಗ್ವೊಂದು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿತ್ತು. ಜೊತೆಗೆ ವ್ಯವಸ್ಥಿತವಾಗಿ ನಕಲಿ ವಸ್ತುಗಳ ಮಾರಾಟ ಮಾಡುತಿತ್ತು. ಸದ್ಯ ಈ ಗ್ಯಾಂಗ್ ಈಗ ಸಿಸಿಬಿ ಬಲೆಗೆ ಬಿದ್ದಿದೆ. ಶಿವಪಾಟೀಲ್, ದೌಲತ್ ಸಿಂಗ್ ಹಾಗೂ ಶುಭಂ ಬಂಧಿತ ಆರೋಪಿಗಳಾಗಿದ್ಧಾರೆ.
ಮೂಲತಃ ಉತ್ತರ ಭಾರತದ ಈ ಆರೋಪಿಗಳು ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ನಕಲಿ ಬ್ರಾಂಡ್ ಉತ್ಪನ್ನಗಳನ್ನು ಮಾಡುವುದರಲ್ಲಿ ಹಾಗೂ ಮಾರುವುದರಲ್ಲಿ ಫೇಮಸ್ ಆಗಿದ್ದರು. ಇವರಿಗೆ ಈ ಕಸುಬು ಕಲಿಸಿದವನು ಮಹೇಶ್ ಗಾಂಧಿ ಎಂಬಾತ. ಆತನ ಬಳಿ ಕಲಿತ ವಿದ್ಯೆಯನ್ನಿಟ್ಟುಕೊಂಡು ದೊಡ್ಡ ಜಾಲವನ್ನೇ ಬೆಳೆಸಿದ್ದ ಈ ಖದೀಮರು, ದಿನಕ್ಕೆ ಲಕ್ಷಾಂತರ ರೂ. ವ್ಯವಹಾರ ಮಾಡ್ತಿದ್ರು.
ಶಿವ ಪಾಟೀಲ್ ನಕಲಿ ವಸ್ತುಗಳ ತಯಾರಿ ಮಾಡಿದ್ರೆ ದೌಲತ್ ಸಿಂಗ್ ಅದರ ಡಿಸ್ಟ್ರಿಬ್ಯೂಟಿಂಗ್ ನೋಡಿ ಕೊಳ್ಳುತಿದ್ದ. ಇವರದ್ದು 5 ವರ್ಷಗಳಿಗೂ ಮೀರಿದ ದಂಧೆ. ಇದು ಹಿಂದೂಸ್ತಾನ್ ಯುನಿ ಲಿವರ್ ಹಾಗೂ ರೆಕಿಟ್ ಬೆಂಕಿಸರ್ ಕಂಪೆನಿಯ ಸೇಲ್ಸ್ʻಮ್ಯಾನ್ʻಗೆ ಗೊತ್ತಾಗಿ.. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರು.
ದೂರಿನ ಪ್ರಕಾರ ವಿಲ್ಸನ್ ಗಾರ್ಡನ್ ನ ಗೋಡಾನ್ ಹಾಗೂ ಇದನ್ನು ತಯಾರಿಸುತಿದ್ದ ಆವಲಹಳ್ಳಿ ಬಳಿಯ ರಾಮಪುರ ಮತ್ತು ಬಿದರಹಳ್ಳಿಯ ಫ್ಯಾಕ್ಟರಿಗಳಿಗೆ ಸಿಸಿಬಿ ದಾಳಿ ಮಾಡಿ ನಕಲಿ ತಯಾರಿಕಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಸದ್ಯ ಈ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ 95 ಲಕ್ಷ ಮೌಲ್ಯದ ನಕಲಿ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.



