ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಅರ್ಹರಾಗಿದ್ದು, ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ 24 ಗಂಟೆಯೊಳಗೆ ಬಿಪಿಎಲ್ ಕಾರ್ಡ್ ಕೊಡುವ ವ್ಯವಸ್ಥೆ ಮಾಡುತ್ತೇವೆ. ಇದು ರಾಜ್ಯ ಸರ್ಕಾರ ನೀಡುತ್ತಿರುವ ಭರವಸೆ. 4 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ಉದ್ದೇಶಿಸಲಾಗಿದ್ದು, ಈವರೆಗೆ 3.63 ಲಕ್ಷ ಕಾರ್ಡ್‌ಗಳು ರದ್ದಾಗಿವೆ. ಅಂದಹಾಗೆ ಯಾವ್ಯಾವ ಕಾರಣಗಳಿದ್ದರೆ, ಯಾವ್ಯಾವ ಪ್ರಾಬ್ಲಂ ಇದ್ರೆ ಬಿಪಿಎಲ್ ಕಾರ್ಡ್ ರದ್ದಾಗಲಿದೆ..? ಇಲ್ಲಿದೆ ಮಾಹಿತಿ.
ಟ್ಯಾಕ್ಸ್ ಕಟ್ಟುತ್ತಿದ್ದರೆ ಬಿಪಿಲ್ ಕಾರ್ಡ್ ಇಲ್ಲ
ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿ ಮಾಡುತ್ತಿದ್ದರೆ, ಅಂದರೆ ಉದ್ಯಮಿಗಳು, ತೆರಿಗೆ ಪಾವತಿ ಮಾಡುತ್ತಿರುವವರು ರೇಷನ್ ಕಾರ್ಡಿನಲ್ಲಿದ್ದರೆ ಅವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ.
ಏಳೂವರೆ ಎಕರೆ ಜಮೀನು ಇದ್ದರೆ..
ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಗಳಲ್ಲಿ 3 ಹೆಕ್ಟೇರ್ ಒಣಭೂಮಿಯಾಗಲೀ, ನೀರಾವರಿ ಭೂಮಿಯಾಗಲೀ ಹೊಂದಿರುವ ಭೂಮಾಲೀಕರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ರದ್ದಾಗಲಿದೆ.ಅಂದರೆ ಒಂದು ಹೆಕ್ಟೇರ್ ಎಂದರೆ ಎರಡೂವರೆ ಎಕರೆ, ೩ ಹೆಕ್ಟೇರ್ ಎಂದರೆ ಏಳೂವರೆ ಎಕರೆ.
ನಗರಗಳಲ್ಲಿ ಸ್ವಂತ ಮನೆ ಇದ್ದರೆ..
ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಇದ್ದವರಿಗೆಲ್ಲ ಬಿಪಿಎಲ್ ಕಾರ್ಡ್ ರದ್ದಾಗಲ್ಲ. ಕೆಲವರು ಅರ್ಧ ಸೈಟಿನಲ್ಲಿ, ಅದಕ್ಕಿಂತ ಕಡಿಮೆ ವಿಸ್ತೀರ್ಣದ ಪುಟ್ಟ ಮನೆ ಕಟ್ಟಿಕೊಂಡಿರುತ್ತಾರೆ. ಅವರಿಗೆ ಸಮಸ್ಯೆ ಇಲ್ಲ. ಆದರೆ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಇದ್ದವರಿಗೂ ಬಿಪಿಎಲ್ ಕಾರ್ಡ್ ಕೊಡುವಂತಿಲ್ಲ. ಇದ್ದರೆ ಅನರ್ಹ.
ಮನೆ ಬಾಡಿಗೆಗೆ ಕೊಟ್ಟಿದ್ದರೆ..
ಮನೆ ಹೊಂದಿದ್ದು, ಆ ಮನೆಗಳನ್ನು ಬಾಡಿಗೆ ಕೊಟ್ಟು, ಬಾಡಿಗೆಯಿಂದಲೂ ಹಣ ಬರುತ್ತಿದ್ದರೆ, ಆಗಲೂ ಕೂಡಾ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ದಂಡವನ್ನೂ ಕಟ್ಟಬೇಕಾಗುತ್ತದೆ.
ಸ್ವಂತ ಕಾರ್ ಹೊಂದಿದ್ದರೆ ಅನರ್ಹ
ಸ್ವಂತ ಕಾರ್ ಹೊಂದಿದ್ದರೆ ಅಂತಹವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ಆದರೆ ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಇದ್ದರೆ, ಜೀವನೋಪಾಯಕ್ಕಾಗಿ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಹೊಂದಿದ್ದರೆ ಅಂತಹವರಿಗೆ ಕಾರ್ಡ್ ರದ್ದಾಗುವುದಿಲ್ಲ.
ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿದ್ದರೆ..
ಕುಟುಂಬದ ವಾರ್ಷಿಕ ಆದಾಯ ವರ್ಷಕ್ಕೆ 1.20 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿದ್ದರೆ ಅವರಿಗೆ ನೀಡಲಾಗಿರುವ ಬಿಪಿಎಲ್ ಕಾರ್ಡ್ ಅನರ್ಹಗೊಳ್ಳಲಿದೆ.
ಸರ್ಕಾರಿ ನೌಕರರಾಗಿದ್ದರೆ..!
ರೇಷನ್ ಕಾರ್ಡಿನಲ್ಲಿರುವ ಕುಟುಂಬ ಸದಸ್ಯರಲ್ಲಿ ಯಾರಾದರೂ ಸರ್ಕಾರಿ ನೌಕರರು ಇದ್ದರೆ ಅನರ್ಹವಾಗಲಿದೆ. ಅಂದರೆ ರೇಷನ್ ಕಾರ್ಡಿನಲ್ಲಿರುವ ಸದಸ್ಯರ ಪೈಕಿ ಯಾರಾದರೂ ಸರ್ಕಾರಿ ನೌಕರರಾಗಿದ್ದರೆ, ಅವರಿಗೆ ಕೊಟ್ಟಿದ್ದ ಕಾರ್ಡ್ ರದ್ದಾಗಲಿದೆ. ಅಥವಾ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಲಿದೆ.
ಸರ್ಕಾರಿ ಸ್ವಾಮ್ಯ ಸಂಸ್ಥೆಗಳ ನೌಕರರಾಗಿದ್ದರೂ ಅನರ್ಹ
ಸರ್ಕಾರಿ ಅನುದಾನ ಪಡೆಯುತ್ತಿರುವ ಸಂಸ್ಥೆಗಳಲ್ಲಿ, ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರರಾಗಿದ್ದರೆ, ಅಂತಹವರು ಬಿಪಿಎಲ್ ಕಾರ್ಡ್ ಸದಸ್ಯರ ಪಟ್ಟಿಯಲ್ಲಿದ್ದರೆ ಅಂತಹವರ ಕಾರ್ಡ್ ಕೂಡಾ ಅನರ್ಹವಾಲಿದೆ.
ಇನ್ನು ದಂಡ ಕಟ್ಟಬೇಕು ಎಂಬ ಠರಾವನ್ನೂ ಹೊರಡಿಸಿದೆ ಸರ್ಕಾರ. ಅರ್ಹತೆ ಇಲ್ಲದಿದ್ದರೂ ರೇಷನ್ ಕಾರ್ಡ್ ಪಡೆದವರಿಗೆ ಕೆಜಿ ಇದೂವರೆಗೆ ಪಡೆದಿರುವ ಒಟ್ಟಾರೆ ಅಕ್ಕಿಗೆ ಕೆಜಿಗೆ ೩೩ ರೂ.ಗಳಂತೆ ದಂಡ ವಿಧಿಸಲಾಗುತ್ತದೆ. ದಂಡ ಕಟ್ಟದೇ ಹೋದರೆ ಕಾನೂನು ಕ್ರಮ ಜರುಗಿಸಲೂಬಹುದು. ನೀವು ಅರ್ಹತಾ ನಿಯಮ ಉಲ್ಲಂಘಿಸಿ, ಎಷ್ಟು ವರ್ಷ ರೇಷನ್ ತಗೊಂಡಿರುತ್ತೀರೋ, ಅಷ್ಟಕ್ಕೂ ದಂಡ ಸಮೇತ ವಸೂಲಿ ಮಾಡಿಕೊಳ್ಳಲಾಗುವುದು.
ಬಿಪಿಎಲ್ ನಿಯಮಕ್ಕಿಂತ ಹೆಚ್ಚಾಗಿ ವಾರ್ಷಿಕ ವಹಿವಾಟು ನಡೆಸಿರುವವರು ಸೇರಿದಂತೆ ಇತರರ ಬಿಪಿಎಲ್ ರದ್ದು ಮಾಡಲಾಗುತ್ತಿದೆ. ಹಂತ ಹಂತವಾಗಿ ಬಿಪಿಎಲ್ ಪಡೆದ ಅನರ್ಹರನ್ನು ಪತ್ತೆ ಮಾಡಿ ಎಪಿಎಲ್ ಕಾರ್ಡ್ ನೀಡಲಾಗುವುದು. ಒಟ್ಟು 14 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಬಿಪಿಎಲ್‌ನಿಂದ ಹೊರಗೆ ಹೋಗುವ ಸಾಧ್ಯತೆ ಇದೆ



