ವೀರಶೈವ ಪಂಥಕ್ಕೆ ಒಂದು ಸುದೀರ್ಘ ಇತಿಹಾಸವೇ ಇದೆ. ಆ ವೀರಶೈವ ಪಂಥದ ಒಳಗಿಂದಲೇ ಒಂದಿಷ್ಟು ಬದಲಾವಣೆ ಮಾಡಿಕೊಂಡು ಸೃಷ್ಟಿಯಾಗಿದ್ದು ಲಿಂಗಾಯತ ಪಂಥ. ಆ ಕ್ರಾಂತಿ ಮಾಡಿದ್ದು 12ನೇ ಶತಮಾನದಲ್ಲಿದ್ದ ಕ್ರಾಂತಿಯೋಗಿ ಬಸವಣ್ಣ. ಈಗಲೂ ಕೂಡಾ ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ.. ಎಂಬ ವಾದ ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ, ಲಿಂಗಾಯತರಿಗೂ, ಇಸ್ಲಾಂ ಧರ್ಮಕ್ಕೂ ಹೋಲಿಕೆ ಇದೆಯಾ..? ಹೌದು ಎಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ಸಾಣೇಹಳ್ಳಿ ಮಠದ ಪೀಠಾಧಿಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.
ಚಿತ್ರದುರ್ಗದ ತಾರಾಸು ರಂಗಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಲಾಗಿದ್ದ ಕುರಾನ್ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಬೇರೆ ಬೇರೆಯಾಗಿದ್ದರೂ ಕೆಲವು ಒಂದೇ ರೀತಿಯ ಅಂಶಗಳನ್ನು ಹೊಂದಿವೆ ಎಂದಿದ್ದಾರೆ.
ಲಿಂಗಾಯತ ಧರ್ಮ ಬಹು ದೇವರುಗಳ ಆರಾಧನೆ ಮತ್ತು ಮೂರ್ತಿ ಪೂಜೆಯನ್ನು ನಿರಾಕರಿಸುತ್ತದೆ. ಆದರೆ ಅದು ಇಷ್ಟಲಿಂಗ ಪೂಜೆಯನ್ನು ಪ್ರತಿಪಾದಿಸುತ್ತದೆ. ಅದೇ ರೀತಿ ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಕೂಡ ಮೂರ್ತಿ ಪೂಜೆ ಬೇಡವೆಂಬ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ವಿಗ್ರಹಗಳನ್ನು ಪೂಜಿಸಬೇಡಿ, ಅಲ್ಲಾಗೆ ಮಾತ್ರ ನಡೆದುಕೊಳ್ಳಿ ಎಂದು ಮುಸ್ಲಿಮರನ್ನು ಪೈಗಂಬರ್ ಕೇಳಿಕೊಂಡಿದ್ದರು ಎನ್ನುವುದು ಸಾಣೇಹಳ್ಳಿ ಶ್ರೀಗಳ ವಾದ.
ಶಿವಾಚಾರ್ಯರು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ನಂಬುವವರು. ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಪ್ರತ್ಯೇಕ ಎಂದು ವಾದಿಸುವವರು. ಲಿಂಗಾಯತರು ಹಿಂದೂ ಧರ್ಮದ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಅಭಿಪ್ರಾಯವನ್ನು ಈ ಹಿಂದೆಯೂ ಸ್ವಾಮೀಜಿ ನೀಡಿದ್ದರು. ಇದೀಗ ಇಸ್ಲಾಂ ಧರ್ಮ ಹಾಗೂ ಲಿಂಗಾಯತ ಧರ್ಮದಲ್ಲಿ ಈ ನಿರ್ದಿಷ್ಟ ಸಾಮ್ಯತೆ ಇದೆ ಎಂದು ಶಿವಾಚಾರ್ಯರು ಹೇಳಿದ್ದು, ವಿವಾದ ಸೃಷ್ಟಿಸಿದೆ.
ಲಿಂಗಾಯತರ ಇಷ್ಟಲಿಂಗ ಪೂಜೆ ಮತ್ತು ಮುಸ್ಲಿಮರ ವಿಗ್ರಹ ಪೂಜೆ ಮಾಡದೇ ಇರುವುದರ ಮಧ್ಯೆ ಅದು ಹೇಗೆ ಸಾಮ್ಯತೆ ಕಂಡರೋ ಗೊತ್ತಿಲ್ಲ.. ಸಾಣೆಹಳ್ಳಿ ಶ್ರೀಗಳ ಪ್ರಕಾರ ಎಲ್ಲ ಧರ್ಮಗಳೂ ಮನುಷ್ಯರ ಸೃಷ್ಟಿಸಿದ್ದೇ ಆಗಿದೆ. ನಾವು ಎಲ್ಲಾ ಧರ್ಮಗಳನ್ನೂ ಸಮಾನವಾಗಿ ನೋಡಬೇಕು ಎನ್ನುತ್ತಾರೆ.
ಸಾಣೆಹಳ್ಳಿ ಶ್ರೀಗಳ ಪ್ರಕಾರ ಇಸ್ಲಾಂ ಧರ್ಮದಲ್ಲಿ ದಾನ ಮಾಡಬೇಕು ಎನ್ನುವ ಪದ್ಧತಿಯನ್ನು ರೂಢಿಸಿಕೊಳ್ಳಲಾಗಿದೆ. ಅದೇ ರೀತಿ ಲಿಂಗಾಯತ ಧರ್ಮದಲ್ಲಿಯೂ ದಾಸೋಹ ಪದ್ಧತಿ ಇದೆ ಎಂದು ಎರಡರಲ್ಲಿಯೂ ಸಾಮ್ಯತೆ ಕಂಡಿದ್ದಾರೆ. ಇದೇ ರೀತಿ ಹಲವು ವಿಚಾರಗಳಲ್ಲಿ ಒಂದೇ ಮಾದರಿ ಇದೆ. ಎಲ್ಲಾ ಧರ್ಮಗಳ ಮೂಲ ಉದ್ದೇಶ ಒಳ್ಳೆಯದ್ದನ್ನು ಹಂಚುವುದೇ ಆಗಿದೆ. ವಿಪರ್ಯಾಸವೆಂದರೆ, ನಮ್ಮ ದೇಶದಲ್ಲಿ ಮತಾಂಧತೆ ಹೆಚ್ಚಾಗ್ತಿದೆ ಎಂದು ಮುಂದುವರೆಸಿದ್ದಾರೆ.
ಇಷ್ಟಕ್ಕೂ ಸಾಣೆಹಳ್ಳಿ ಶ್ರೀಗಳು ವಾದಿಸುತ್ತಿರುವುದಾದರೂ ಏನು ಅನ್ನೋದು ಅರ್ಥವಾಗದೆ ಅದೇ ಸಾಣೆಹಳ್ಳಿ ಮಠದ ಭಕ್ತರೂ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಇದೇ ಸ್ವಾಮೀಜಿ ಣಪತಿ ಪೂಜೆ ನಮ್ಮ ಸಂಪ್ರದಾಯವಲ್ಲ ಎಂದಿದ್ದರು. ಸ್ವಾಮೀಜಿಗಳ ಈ ಹೇಳಿಕೆಯೂ ಸಹ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಲಿಂಗಾಯತ ಧರ್ಮ ಪ್ರತ್ಯೇಕವಾದದ್ದು ಎನ್ನುವ ಅಭಿಪ್ರಾಯ ಕೆಲವರಲ್ಲಿ ಇದೆಯಾದರೂ ಚಿಕ್ಕಂದಿನಿಂದಲೂ ಹಿಂದೂ ಧರ್ಮದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ರೀತಿಯ ಹೇಳಿಕೆಗಳು ಸರಿ ಎನಿಸಿರಲಿಲ್ಲ.
ಈಗ ನೋಡಿದರೆ.. ಇಸ್ಲಾಂ ಮತ್ತು ಲಿಂಗಾಯತರ ನಡುವೆ ಸಾಮ್ಯತೆ ಇದೆ ಎನ್ನುತ್ತಿದ್ದಾರೆ. ಒಪ್ಪುವುದು ಬಿಡುವುದು ಸಾರ್ವಜನಿಕರಿಗೇ ಬಿಟ್ಟಿದ್ದು.



