ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ವಿರಾಜಮಾನರಾಗಿರುವ ವಿಜಯೇಂದ್ರ ಅವರ ಸ್ಥಾನದ ಮೇಲೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಣ್ಣು ಹಾಕಿದ್ದಾರೆ. ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಕಂಟಿನ್ಯೂ ಆಗುತ್ತಾರೆ ಎಂದು ಹೈಕಮಾಂಡ್ ಹೇಳಿದ್ದರೂ, ಅಧಿಕೃತವಾಗಿ ಸೂಚಿಸಿಲ್ಲ. ಹಾಗೆ ಸೂಚನೆ ಬರುವ ಮೊದಲೇ ಹೊಸ ಗೇಮ್ ಶುರುವಾಗಿದೆ. ಈ ಗೇಮ್ ಶುರು ಮಾಡಿರೋದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.
ಈ ತಿಂಗಳಾಂತ್ಯಕ್ಕೆ ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದರ ನಡುವೆ ಮತ್ತೆ ಈ ಕುರ್ಚಿ ಫೈಟ್ ಶುರುವಾಗಿದೆ. ಬಿಜೆಪಿಯ ಹಿರಿಯ ನಾಯಕ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಬಸವರಾಜ ಬೊಮ್ಮಾಯಿ. ಹೀಗೊಂದು ಮನವಿ ಪತ್ರ ಹಿಡಿದುಕೊಂಡು ಬಿಎಲ್ ಸಂತೋಷ್ ಅವರ ಹತ್ತಿರ ಹೋಗಿದ್ದಾರೆ. ಬಿಎಲ್ ಸಂತೋಷ್ ಹೇಳಿ ಕೇಳಿ ಬಹಿರಂಗವಾಗಿ ಯಡಿಯೂರಪ್ಪ ಪರವಾಗಿಯೂ, ಅಂತರಂಗದಲ್ಲಿ ಯಡಿಯೂರಪ್ಪ ವಿರೋಧಿಗಳ ಜೊತೆ ಆತ್ಮೀಯವಾಗಿರುವ ನಾಯಕ. ಯತ್ನಾಳ್ & ಟೀಂ ಹಿಂದೆ ಇದ್ದವರೂ ಕೂಡಾ ಬಿಎಲ್ ಸಂತೋಷ್ ಎಂದು ಹೇಳಲಾಗುತ್ತಿತ್ತು. ಈಗ ಬೊಮ್ಮಾಯಿ ಅವರು ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟು ಹೋಗಿರುವುದು ಇದೇ ಬಿಎಲ್ ಸಂತೋಷ್ ಅವರ ಹತ್ತಿರ.
ಬೊಮ್ಮಾಯಿ ಆಸೆಗೆ ಬಿಎಲ್ ಸಂತೋಷ್ ತಣ್ಣೀರು :
ವಿಶೇಷ ಎಂದರೆ ಈ ಬಸವರಾಜ ಬೊಮ್ಮಾಯಿ ಅವರ ಆಸೆಗೆ ಬಿಎಲ್ ಸಂತೋಷ್ ತಣ್ಣೀರು ಎರಚಿದ್ದಾರೆ. ಮೂಲಗಳ ಪ್ರಕಾರ ಸಂತೋಷ್ ಅವರು, ಬೊಮ್ಮಾಯಿ ಅವರಿಗೆ ಬುದ್ದಿವಾದ ಹೇಳಿದ್ದಾರಂತೆ. ಏನೆಂದರೆ ಹೈಕಮಾಂಡ್ ವಿಜಯೇಂದ್ರ ಅವರ ಪರವಾಗಿ ಇದೆ. ಅಲ್ಲದೆ ಈ ಹಿಂದೆ 2023ರಲ್ಲಿ ಚುನಾವಣೆ ಎದುರಿಸಿದ್ದೇ ನಿಮ್ಮ ನೇತೃತ್ವದಲ್ಲಿ. ನೀವು ಹೇಳಿದಂತೆಯೇ ಬಹುತೇಕ ಹೈಕಮಾಂಡ್ ಕೇಳಿತ್ತು. ನಿಮ್ಮ ನಾಯಕತ್ವದಲ್ಲಿ ಪಕ್ಷವೂ ಹೀನಾಯವಾಗಿ ಸೋತಿತ್ತು. ಕೊನೆಯ ದಿನಗಳಲ್ಲಿ ನೀವೇ.. ರಾಜ್ಯಾದ್ಯಂತ ಪ್ರಚಾರ ಮಾಡದೆ ನಿಮ್ಮ ಕ್ಷೇತ್ರಕ್ಕೆ ಸೀಮಿತವಾಗಿಬಿಟ್ಟಿರಿ. ಕೇವಲ ನಿಮ್ಮ ಗೆಲುವೊಂದನ್ನೇ ಮುಖ್ಯ ಎಂದುಕೊಂಡಿರಿ. ಇದೆಲ್ಲವನ್ನೂ ಹೈಕಮಾಂಡ್ ಗಮನಿಸಿದೆ. ಅಲ್ಲದೆ ನಿಮ್ಮ ಕ್ಷೇತ್ರಕೆಕ ನಡೆದ ಬೈಎಲೆಕ್ಷನ್ನಿನಲ್ಲಿ ನಿಮ್ಮ ಮಗನನ್ನೇ ಗೆಲ್ಲಿಸಿಕೊಳ್ಳೋಕೆ ಆಗಲಿಲ್ಲ. ಲೋಕಸಭೆ ಚುನಾವಣೆಗೆ ಟಿಕೆಟ್ ಕೊಟ್ಟಾಗಲೂ, ನಿಮ್ಮನ್ನು ನೀವು ರಾಜ್ಯ ನಾಯಕರಂತೆ ಪ್ರೊಜೆಕ್ಟ್ ಮಾಡಿಕೊಳ್ಳದೆ ಕ್ಷೇತ್ರಕ್ಕೆ ಸೀಮಿತವಾಗಿದ್ದಿರಿ. ಹೀಗಿರುವಾಗ ಅದು ಹೇಗೆ ನಿಮ್ಮ ಹೆಸರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ರೆಕಮೆಂಡ್ ಮಾಡಿ ಎಂದು ಕೇಳುತ್ತಿರಿ.. ಇದೆಲ್ಲ ಸಾಧ್ಯವಿಲ್ಲ. ಹೈಕಮಾಂಡ್ ಮನಸ್ಸಿನಲ್ಲಿ ಯಾರಿದ್ದಾರೋ.. ಅವರೇ ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರೆ ಎಂದು ಹೇಳಿ ಕಳಿಸಿದ್ದಾರಂತೆ.