ಒಬ್ಬರಲ್ಲ.. ಇಬ್ಬರಲ್ಲ.. 17 ಶಾಸಕರು ಕಾಂಗ್ರೆಸ್/ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅದರಿಂದಲೇ ಯಡಿಯೂರಪ್ಪ (Yeddyurappa) ಸಿಎಂ ಆಗುವುದಕ್ಕೆ ಸಾಧ್ಯವಾಗಿದ್ದು ಕೂಡಾ. ಇದೀಗ ಅದೇ ಬಾಂಬೆ ಬಾಯ್ಸ್ (Bombay Boys) ಮತ್ತೊಮ್ಮೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುಖ್ಯ ಕಾರಣರಾಗಿದ್ದ ‘ಬಾಂಬೆ ಬಾಯ್ಸ್’(Bombay Boys) ಕಾಂಗ್ರೆಸ್ಗೆ ಘರ್ ವಾಪ್ಸಿ (Ghar Wapsi) ಮಾಡುವ ಸಾಧ್ಯತೆ ದಟ್ಟವಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂತಹದೊಂದು ಘರ್ ವಾಪ್ಸಿ ಆರಂಭವಾಗಲಿದೆ.
ಯಾರೆಲ್ಲ ಇದ್ದಾರೆ ಕ್ಯೂನಲ್ಲಿ..?
ಕಾಂಗ್ರೆಸ್ ಮೂಲಗಳ ಪ್ರಕಾರ ನಾಲ್ಕೈದು ಶಾಸಕರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಬರುವುದಕ್ಕೇನೋ ಎಲ್ಲರೂ ತಯಾರಿದ್ದಾರೆ. ಆದರೆ, ಎಲ್ಲರಿಗೂ ಡೋರ್ ಓಪನ್ ಇಲ್ಲ. ಮೊದಲಿಗೆ ಒಬ್ಬ ಶಾಸಕರು ರಾಜೀನಾಮೆ ನೀಡಿ ಕಾಂಗ್ರೆಸ್ಸಿಗೆ ಹೋಗುತ್ತಾರೆ. ಅವರು ಬೈಎಲೆಕ್ಷನ್ ಎದುರಿಸಿ ಗೆಲ್ಲುವ ಹೊತ್ತಿಗೆ ಉಳಿದವರು ಕಾಂಗ್ರೆಸ್ ಸೇರುತ್ತಾರೆ. ಲೋಕಸಭೆ ಎಲೆಕ್ಷನ್ ಶುರುವಾಗುವವರೆಗೂ ಹಂತ ಹಂತವಾಗಿ ಬಿಜೆಪಿಗೆ ಶಾಕ್ ಕೊಡುತ್ತಲೆ ಇರಬೇಕು ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿದೆ.
ಲೋಕಸಭಾ ಚುನಾವಣೆ ವೇಳೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ ಮರು ಆಯ್ಕೆಯಾಗುವ ಉದ್ದೇಶ ಶಾಸಕರಿಗೆ ಇದೆ. ಹೀಗಾಗಿ ಈ ಹಂತದಲ್ಲೇ ರಾಜೀನಾಮೆ ನೀಡಿದರೆ ಲೋಕಸಭಾ ಚುನಾವಣೆ ವೇಳೆಗೆ ವಿಧಾನ ಸಭೆ ಉಪ ಚುನಾವಣೆಯನ್ನು ಚುನಾವಣಾ ಆಯೋಗ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಾಂಗ್ರೆಸ್ನಿಂದ ಬಿಜೆಪಿಗೆ ತೆರಳಿ ಸಚಿವರಾಗಿದ್ದ ಬೆಂಗಳೂರು ಮೂಲದ ಇಬ್ಬರು ಶಾಸಕರು, ಜೆಡಿಎಸ್ನ ಒಬ್ಬರು ಶಾಸಕರು, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯ ಒಬ್ಬರು ಶಾಸಕರು ಕಾಂಗ್ರೆಸ್ ಸೇರುವ ಆಸಕ್ತಿ ಹೊಂದಿದ್ದರು. ಆದರೆ ಬೆಂಗಳೂರಿನ ಒಬ್ಬ ಶಾಸಕರ ಸೇರ್ಪಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D K Shivakumar) ಹಾಗೂ ಅವರ ಸಹೋದರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ (D K Suresh) ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮುಹೂರ್ತ ಯಾವಾಗ?
ಕಾಂಗ್ರೆಸ್ ರಾಜ್ಯ ನಾಯಕತ್ವ ಸದರಿ ಶಾಸಕರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದೆ. ಹೈಕಮಾಂಡ್ ಸಹ ಈ ಶಾಸಕರ ಸೇರ್ಪಡೆಗೆ ತಾತ್ವಿಕ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಆದರೆ, ಈ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆರವಾದರೆ ಅದಕ್ಕೆ ಬದಲಾಗಿ ಈ ಶಾಸಕರಿಗೆ ಸರ್ಕಾರದಲ್ಲಿ ಯಾವ ಸ್ಥಾನ ಮಾನ ದೊರೆಯುತ್ತದೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಈ ವಿಚಾರದ ಬಗ್ಗೆ ಶಾಸಕರು ಹಾಗೂ ಕಾಂಗ್ರೆಸ್ ನಾಯಕತ್ವದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಬೇಕಿದೆ. ಈ ವಿಚಾರ ಇತ್ಯರ್ಥವಾದರೆ ಶಾಸಕರು ಕಾಂಗ್ರೆಸ್ ಸೇರ್ಪಡೆ ದಿನಾಂಕ ನಿರ್ಧಾರವಾಗುತ್ತದೆ ಎನ್ನುತ್ತವೆ ಮೂಲಗಳು.



