ಆರಂಭದಲ್ಲಿ ವಿಜಯೇಂದ್ರ ಮತ್ತು ಆರ್ ಅಶೋಕ್ ಇಬ್ಬರೂ ಒಟ್ಟಿಗೇ ಕೆಲಸ ಮಾಡುತ್ತಿದ್ದರು. ಅವರನ್ನು ಇವರು.. ಇವರನ್ನು ಅವರು ಹೊಗಳುತ್ತಿದ್ದರು. ಬಿಜೆಪಿಯ ಜೋಡೆತ್ತಿನಂತೆ ಮುಂದಿನ ದಿನಗಳಲ್ಲಿ ನಾವಿಬ್ಬರು ಕೆಲಸ ಮಾಡ್ತೀವಿ ಎಂದು ಹೇಳುತ್ತಿದ್ದ ಇಬ್ಬರ ನಡುವೆ.. ವೈಮನಸ್ಯ ಶುರುವಾಗಿದ್ದು ಎಲ್ಲಿಂದ.. ಅದಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ.. ವಿಜಯೇಂದ್ರ ವಿರುದ್ಧ ನಡೆಯುತ್ತಿದ್ದ ʻರೆಬಲ್ಸ್ ಟೀಂʼಗೆ ಒಳಗೊಳಗೇ ಕುಮ್ಮಕ್ಕು ನೀಡಿದ್ದರು ಎಂಬ ವಿಷಯ ತಿಳಿದು, ವಿಜಯೇಂದ್ರ ಅವರ ಬೇಸರಕ್ಕೆ ಕಾರಣವಾಗಿದ್ದರೆ, ಅದಾದ ನಂತರ ವಿಜಯೇಂದ್ರ ನೇರವಾಗಿಯೇ ಆರ್ ಅಶೋಕ್ ವಿಪಕ್ಷ ನಾಯಕರಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಏಂದು ವರಿಷ್ಠರಿಗೇ ಹೇಳಿದ್ದು ಅಶೋಕ್ ಬೇಸರಕ್ಕೆ ಕಾರಣವಾಗಿತ್ತು. ಅದಾದ ನಂತರ.. ಜೋಡೆತ್ತು.. ಎಡದ ಎತ್ತು ಏರಿಗೆ.. ಬಲದ ಎತ್ತು ನೀರಿಗೆ ಎಂಬಂತಾಗಿ ಹೋಗಿತ್ತು. ಇದೀಗ ಇಬ್ಬರ ನಡುವೆ ಸಂಧಾನಕ್ಕೆ ಖುದ್ದು ಬಿಎಲ್ ಸಂತೋಷ್ ಅವರೇ ಮುಂದಾಗಿದ್ದಾರಂತೆ.
ಬಿಜೆಪಿಯಲ್ಲಿ ಬಣ ಕಿತ್ತಾಟ ತೀವ್ರಗೊಂಡ ಸಂದರ್ಭದಲ್ಲೂ ಆರ್ ಅಶೋಕ್ ಅಂತರ ಕಾಯ್ದುಕೊಂಡಿದ್ದರು. ಅಶೋಕ್ ಮತ್ತು ವಿಜಯೇಂದ್ರ ನಡುವೆ ಸದನದಲ್ಲೂ ದೊಡ್ಡ ಮಟ್ಟದ ಹೊಂದಾಣಿಕೆ ಕಂಡು ಬರುತ್ತಿರುಲಿಲ್ಲ. ಬಿಜೆಪಿ ಪಕ್ಷ ಮತ್ತು ವಿರೋಧ ಪಕ್ಷವಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೂ ಇಬ್ಬರು ನಾಯಕರ ನಡುವಿನ ಹೊಂದಾಣಿಕೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದೆಲ್ಲವನ್ನೂ ಗಮನಿಸುತ್ತಲೇ ಇದ್ದ ಬಿಎಲ್ ಸಂತೋಷ್, ಇಬ್ಬರನ್ನೂ ಕರೆದು ಬುದ್ದಿ ಹೇಳಿದ್ದಾರಂತೆ.
ʻಸದನದ ಒಳಗೆ ಆರ್ ಅಶೋಕ್ ಅವರಿಗೆ ಸಾಥ್ ನೀಡಬೇಕು, ಹೊರಗೆ ಅಶೋಕ್, ವಿಜಯೇಂದ್ರ ಅವರಿಗೆ ಸಾಥ್ ನೀಡಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಉಳಿಗಾಲ ಇಲ್ಲ. ನಿಮ್ಮ ಸ್ಥಾನಕ್ಕೂ ಗ್ಯಾರಂಟಿ ಇಲ್ಲʼ ಎಂದು ಹೇಳಿದ್ದಾರಂತೆ. ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು, ಪಕ್ಷದ ಸಂಘಟನೆಯತ್ತ ಗಮನ ಕೊಡಿ ಎಂದು ಹೇಳಿದ್ದಾರಂತೆ.
ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಹೇಗೆ ಕೆಲಸ ಮಾಡಿದ್ದರು ಎಂದು ವಿವರಿಸಿದರಂತೆ. ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರ ವಿಷಯವನ್ನೂ ಪ್ರಸ್ತಾಪಿಸಿ.. ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದರೂ.. ಅದು ಪಕ್ಷಕ್ಕೆ ಹಾನಿಯಾಗುತ್ತಿರಲಿಲ್ಲ ಎಂದು ಹೇಳಿದರಂತೆ. ಅಶೋಕ್ ಮತ್ತು ವಿಜಯೇಂದ್ರ ಇಬ್ಬರೂ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡವರೇ. ಈ ವೇಳೆ ಇಬ್ಬರೂ ಒಂದೆರಡು ಘಟನೆಗಳನ್ನು ಬಿಎಲ್ ಸಂತೋಷ್ ಅವರ ಬಳಿ ಹೇಳಿಕೊಂಡಿದ್ದು, ಇಬ್ಬರಿಗೂ ಬುದ್ದಿ ಹೇಳಿದ್ರಂತೆ ಬಿಎಲ್ ಸಂತೋಷ್.
ಅಂದಹಾಗೆ ಈ ಸದನದ ಕಲಾಪದಲ್ಲಿ ಆರ್ ಅಶೋಕ್ ಆಕ್ಟಿವ್ ಆಗಲು, ಅವರಿಗೆ ವಿಜಯೇಂದ್ರ ಅವರು ತಕ್ಕ ಸಾಥ್ ಕೊಡಲು ಕಾರಣವೇ ಬಿಎಲ್ ಸಂತೋಷ್ ಹೇಳಿಕೊಟ್ಟ ಬುದ್ದಿವಾದ ಎನ್ನಲಾಗಿದೆ. ಅಂದಹಾಗೆ ಈ ಹಿಂದೆ ಇಬ್ಬರ ನಡುವೆ ಸಂಧಾನದ ಪ್ರಯತ್ನ ಮಾಡಿದ್ದ ಡಿವಿ ಸದಾನಂದ ಗೌಡ ಸೇರಿದಂತೆ ಕೆಲವು ಹಿರಿಯ ನಾಯಕರು ಈಗಾಗಲೇ ವಿಫಲರಾಗಿದ್ದಾರೆ. ಆರ್ ಎಸ್ ಎಸ್ ಪ್ರಮುಖರೂ ಸೋತಿದ್ದಾರೆ. ದೆಹಲಿ ಮಟ್ಟದ ನಾಯಕರ ಬುದ್ದಿಮಾತೂ ಎಫೆಕ್ಟ್ ಆಗಿಲ್ಲ. ಇದೀಗ ಬಿಎಲ್ ಸಂತೋಷ್ ಅವರ ಈ ಸಂಧಾನ ವರ್ಕೌಟ್ ಆಗುತ್ತದಾ.. ನೋಡಬೇಕಷ್ಟೆ.



