ರಾಜಕೀಯ.. ದೆಹಲಿಗೆ ಶಿಫ್ಟ್ ಆಗಿದೆ. ಅಲ್ಲಿ ನಿರ್ಧಾರ ತೆಗೆದುಕೊಳ್ಳುವವರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಹೈಕಮಾಂಡ್ ತೀರ್ಮಾನ ಮಾಡಬೇಕು ಎನ್ನುವ ಮೂಲಕ, ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಆದರೆ ಅರ್ಥವಾಗದೇ ಇರುವುದು ಒಂದೇ ವಿಷಯ. ಈ ಗಲಾಟೆ ಶುರುವಾದಾಗ, ರಾಹುಲ್ ಗಾಂಧಿ ದೆಹಲಿಯಲ್ಲೇ ಇದ್ದರು. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಹುಲ್, ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಿಲ್ಲ. ಈಗ ಸಿದ್ದು ಆಪ್ತರಲ್ಲಿ ಗುರುತಿಸಿಕೊಂಡಿರುವ ಪ್ರಮುಖರೊಬ್ಬರನ್ನು ಭೇಟಿ ಮಾಡಿದ್ದಾರಂತೆ. ಆದರೆ, ದೆಹಲಿಯಲ್ಲೇ ಇರುವ ಡಿಕೆ ಟೀಂನ ಒಬ್ಬರನ್ನೂ ಮಾತನಾಡಿಸಿಲ್ಲ. ಏಕೆ..?
ರಾಹುಲ್ ಗಾಂಧಿಗೆ ರಿಪೋರ್ಟ್ ಕೊಟ್ಟಿದ್ದಾರಂತೆ ಬಿಕೆ ಹರಿಪ್ರಸಾದ್ :
ಡಿಕೆಶಿ ಭೇಟಿಗೆ ಟೈಂ ಕೊಡದ ರಾಹುಲ್, ಹರಿಪ್ರಸಾದ್ಗೆ ಕೊಟ್ಟಿರುವುದು ಅಚ್ಚರಿ ಮೂಡಿಸಿರುವುದು ನಿಜ. ಬಿಕೆ ಹರಿಪ್ರಸಾದ್, ಹೈಕಮಾಂಡ್ನ ನಿಷ್ಠ ನಾಯಕ. ಅವರೇ ಈಗ ರಾಜಕೀಯ ವಿದ್ಯಮಾನಗಳ ರಿಪೋರ್ಟ್ ನೀಡಿದ್ದಾರೆ ಎಂಬ ಮಾಹಿತಿ ಇದೆ. ಆ ರಿಪೋರ್ಟಿನಲ್ಲಿ ಏನಿದೆ ಎಂದರೆ.. ಶೀಘ್ರವೇ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕಬೇಕು. ಡಿಕೆ ಶಿವಕುಮಾರ್ ಬಣದ ದೆಹಲಿ ಭೇಟಿ ಹೆಚ್ಚಾದ್ರೆ ಬಿಕ್ಕಟ್ಟು ಸೃಷ್ಟಿ ಆಗಲಿದೆ. ಆಗ ಸಿಎಂ ಸಿದ್ದರಾಮಯ್ಯನವರ ಬಣದಿಂದಲೂ ಒತ್ತಡ ಹೆಚ್ಚಾಗಬಹುದು. ಇದರಿಂದ ಪಕ್ಷಕ್ಕೆ ಹೆಚ್ಚು ಡ್ಯಾಮೇಜ್ ಆಗಲಿದೆ ಎಂದು ರಿಪೋರ್ಟ್ ಕೊಟ್ಟಿದ್ದಾರಂತೆ.
ಬಿಕೆ ಹರಿಪ್ರಸಾದ್ ಪ್ರಕಾರ ʻʻಸದ್ಯಕ್ಕೆ ಯಾವ ಬದಲಾವಣೆಯೂ ಆಗಲ್ಲ. ಈಗಲೂ ಆಗಿಲ್ಲ. ಮುಂದೆಯೂ ಆಗುವುದಿಲ್ಲʼʼ ಹಾಗಾದರೆ ಡಿಕೆ ಟೀಂ ಹಾರಾಡಿ.. ಕೂಗಾಡಿದ್ದಷ್ಟೇ ಲಾಭವಾ.. ಸದ್ಯದ ಮಟ್ಟಿಗೆ ಹೌದು.
ಸಿದ್ದರಾಮಯ್ಯ ಪರ ಬಿಕೆ ಹರಿಪ್ರಸಾದ್ ಬ್ಯಾಟಿಂಗ್ : ಬಿಕೆ ಹರಿಪ್ರಸಾದ್ ಅವರು ದೀರ್ಘಕಾಲದಿಂದ ಹೈಕಮಾಂಡ್ ಜೊತೆಯಲ್ಲಿದ್ದವರು. ರಾಜಕೀಯ ಚುನಾವಣೆ ಎದುರಿಸಿಯೇ ಇಲ್ಲ ಎನ್ನಬೇಕು. ಹೈಕಮಾಂಡ್‌ಗೆ ಇಷ್ಟವಾಗುವಂತ ರಿಪೋರ್ಟ್ ಕೊಟ್ಟಿದ್ದಾರೆ ಎನ್ನುವುದು ಮಾಹಿತಿ. ಅಂದರೆ ಡಿಕೆ ಶಿವಕುಮಾರ್ ಅವರು ಬಿಕೆ ಹರಿಪ್ರಸಾದ್ ನಂಬಿರುವ ತತ್ವ, ಸಿದ್ಧಾಂತಗಳಿಗೆ ವಿರುದ್ಧವಾಗಿದ್ದವರು. ಈ ಹಿಂದೆ ನಮಸ್ತೇ ಸದಾವತ್ಸಲೆ.. ವಿಷಯದದಲ್ಲಿ ಡಿಕೆ ಕ್ಷಮೆ ಕೇಳಬೇಕಾಗಿ ಬಂದಿದ್ದು ಕೂಡಾ ಬಿಕೆ ಹರಿಪ್ರಸಾದ್ ಗುಡುಗಿದಾಗ. ಹೀಗಾಗಿ ರಿಪೋರ್ಟ್ ಸಿದ್ದು ಪರವಾಗಿಯೇ ಇದೆ ಎನ್ನಲಾಗಿದೆ.
ದೆಹಲಿಯಲ್ಲಿ ಡಿಕೆ ಟೀಂ ಟೈಂಪಾಸ್ :
ʻಸಮಾಧಾನದಿಂದ ಮುಂದುವರಿಯಿರಿʼ ಎಂಬ ಸಲಹೆ ಒಪ್ಪಿಕೊಂಡರೆ ಸಿಎಂ ಪಟ್ಟ ಗಗನ ಕುಸುಮ ಎನ್ನುವುದು ಡಿಕೆ ಟೀಂನ ಹಠ. ಹಾಗಾಗಿ, ಒತ್ತಡ ತಂತ್ರ ತೀವ್ರಗೊಳಿಸುವ ಮೂಲಕ ಕಾವು ಕಾಯ್ದುಕೊಳ್ಳಲು ಡಿಸಿಎಂ ಆಪ್ತ ಶಾಸಕರು ತಂಡ ತಂಡವಾಗಿ ದಿಲ್ಲಿಗೆ ಹೋಗುತ್ತಿದ್ದಾರೆ. ಸದ್ಯಕ್ಕೆ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಶರತ್ ಬಚ್ಚೇಗೌಡ, ಶ್ರೀನಿವಾಸ್ (ನೆಲಮಂಗಲ), ಆನೇಕಲ್ ಶಿವಣ್ಣ, ಡಾ.ಎಚ್.ಡಿ.ರಂಗನಾಥ್, ಎಸ್.ಆರ್.ಶ್ರೀನಿವಾಸ್ (ಗುಬ್ಬಿ ವಾಸು), ಎ.ಸಿ.ಶ್ರೀನಿವಾಸ್, ಶ್ರೀನಿವಾಸ್ ಮಾನೆ, ರವಿ ಗಣಿಗ, ಟಿ.ಡಿ.ರಾಜೇಗೌಡ, ಎಸ್.ಟಿ.ಸೋಮಶೇಖರ್ (ಬಿಜೆಪಿ ಶಾಸಕ) ಹಿಂದಿರುಗಿದ್ದು, ಎಚ್.ಸಿ.ಬಾಲಕೃಷ್ಣ, ಕೆ.ಎಂ.ಉದಯ್ ಗೌಡ, ಬಸವರಾಜು ಶಿವಗಂಗಾ, ನಯನಾ ಮೋಟಮ್ಮ, ಶರತ್ ಬಚ್ಚೇಗೌಡ, ಇಕ್ಬಾಲ್ ಹುಸೇನ್, ಮಹೇಂದ್ರ ತಮ್ಮಣ್ಣವರ್, ಬಾಬಾ ಸಾಹೇಬ್ ಪಾಟೀಲ್ ಮಂಗಳವಾರ ದೆಹಲಿಗೆ ಹೋಗಿದ್ದಾರೆ. ಇವರು ವಾಪಸ್ ಆದ ನಂತರ 3ನೇ ಟೀಂ ದೆಹಲಿಗೆ ಹೋಗಲಿದೆ. 3ನೇ ಟೀಂನಲ್ಲಿ ಚಿಕ್ಕಮಗಳೂರಿನ ಎಚ್.ಡಿ.ತಮ್ಮಯ್ಯಸೇರಿ ಬೇರೆ ಬೇರೆ ಭಾಗಗಳ ಶಾಸಕರು ಇರಲಿದ್ದಾರೆ.



