ಕಳೆದ ಬಾರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧವೇ ಸುಮಲತಾ ಅವರು ಗೆದ್ದಿದ್ದರು. ಈಗ ಕುಮಾರಸ್ವಾಮಿ ಅಭ್ಯರ್ಥಿಯಾಗಿದ್ಧಾರೆ. ಮೈತ್ರಿಯಾಗಿರುವ ಕಾರಣ, ಸುಮಲತಾ ಅವರು ಜೆಡಿಎಸ್ʻನ್ನು ಬೆಂಬಲಿಸಬೇಕಾದ ಪರಿಸ್ಥಿತಿ ಇದೆ. ಸ್ಪರ್ಧೆಯನ್ನಂತೂ ಮಾಡ್ತಿಲ್ಲ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯೇ ಇನ್ನೊಬ್ಬರು ನಿಂತಿದ್ದರೆ.. ಪರಿಸ್ಥಿತಿ ಬೇರೆ. ಆದರೆ.. ಸ್ಪರ್ಧೆ ಮಾಡ್ತಿರೋದು ಹೆಚ್.ಡಿ.ಕುಮಾರಸ್ವಾಮಿ.
ಸುಮಲತಾ ಅಂಬರೀಷ್ ಈಗ ಅಧಿಕೃತವಾಗಿ ಬಿಜೆಪಿ ಸದಸ್ಯೆಯಾಗಿದ್ಧಾರೆ. ಸುಮಲತಾ ಅವರಷ್ಟೇ ಅಲ್ಲ, ರಾಕ್ ಲೈನ್ ವೆಂಕಟೇಶ್ ಕೂಡಾ ಬಿಜೆಪಿ ಸೇರಿದ್ದಾರೆ. ಇದೇ ವೇಳೆ ಮಾತನಾಡಿರುವ ಸುಮಲತಾ ಬಿಜೆಪಿಗೆ ಪೂರ್ಣ ಮನಸ್ಸಿನಿಂದ, ಸಂತೋಷದಿಂದ ಸೇರಿದ್ದೇನೆ. ಮೋದಿ ಅವರ ಜತೆ ಕೈ ಜೋಡಿಸಬೇಕು ಎಂಬ ಕಾರಣಕ್ಕಾಗಿ ಬಿಜೆಪಿಗೆ ಸೇರಿದ್ದೇನೆ. ಈ ದಿನ ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಸುದಿನ ಎಂದಿದ್ದಾರೆ.
ಐದು ವರ್ಷಗಳ ಹಿಂದೆ ಮಂಡ್ಯದಲ್ಲಿ ನನಗೆ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಬೆಂಬಲಿಗರು, ಮಂಡ್ಯದ ಅಂಬರೀಶ್ ಅಭಿಮಾನಿಗಳ ಬಳಗ ನನ್ನ ಬೆನ್ನಿಗೆ ನಿಂತು ಸಹಕಾರ ನೀಡಿದರು. ಬಿಜೆಪಿ ಬಾಹ್ಯ ಬೆಂಬಲ ನೀಡಿ ಸಾಕಷ್ಟು ಶಕ್ತಿ ತುಂಬಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷದ ಹಿಂದೆ ಮೈಸೂರಿಗೆ ಬಂದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿದ್ದ ನನ್ನ ಪರವಾಗಿ ಮತ ಕೇಳಿ ಪ್ರಚಾರ ಮಾಡಿದ್ದರು. ಇದನ್ನು ಎಂದಿಗೂ ಮರೆಯುವುದಿಲ್ಲ ಎಂದಿರುವ ಸುಮಲತಾ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಯಾವುದೇ ಆಹ್ವಾನ ನೀಡಿಲ್ಲ. ಈ ವಿಷಯದಲ್ಲಿ ಪಕ್ಷ ಸೂಚಿಸಿದಂತೆ ನಡೆಯುತ್ತೇನೆ ಎಂದಿದ್ಧಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪತ್ರ ನೀಡಿ ಸುಮಲತಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಡಿ.ವಿ ಸದಾನಂದಗೌಡ , ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕರಾದ ಮುನಿರತ್ನ, ಮಾಜಿ ಮಂತ್ರಿ ಕೆ.ಸಿ.ನಾರಾಯಣ ಗೌಡ ಮೊದಲಾದ ಗಣ್ಯರು ಸುಮಲತಾ ಅವರನ್ನು ಸ್ವಾಗತಿಸಿದರು. ಸುಮಲತಾ ಅಂಬರೀಶ್ ಅವರ ಜೊತೆಗೆ ರಾಕ್ʻಲೈನ್ ವೆಂಕಟೇಶ್, ಕ್ರಿಕೆಟಿಗ ದೊಡ್ಡಗಣೇಶ್ ಕೂಡಾ ಬಿಜೆಪಿ ಸೇರಿದರು.
ಇಷ್ಟೆಲ್ಲ ಆದರೂ.. ಸುಮಲತಾ ಅವರು ಬಿಜೆಪಿ ಲೀಡರ್ ಆಗಿ, ಕುಮಾರಸ್ವಾಮಿ ಪರ ಪ್ರಚಾರ ಮಾಡ್ತಾರೋ ಇಲ್ಲವೋ.. ಎಂಬುದು ಖಚಿತವಾಗಿಲ್ಲ. ಬಿಜೆಪಿ ನಾಯಕರೂ ವಿಷಯ ಬಾಯಿಬಿಟ್ಟಿಲ್ಲ. ಹೂಂ..ಊಹೂಂ.. ಎಂದು ಹೇಳ್ತಿಲ್ಲ. ಕುಮಾರಸ್ವಾಮಿಯೂ ಮಾತನಾಡುತ್ತಿಲ್ಲ. ವಿಷಯ ಏನೆಂದರೆ.. ಕಳೆದ ಬಾರಿ ಸುಮಲತಾ ಅವರ ಪರ ವಿರುದ್ಧ ಬಣಗಳು ಯಾವ ಪರಿ ಕಿತ್ತಾಡಿಕೊಂಡಿದ್ದವೆಂದರೆ.. ಸುಮಲತಾ ಅವರು ಹೋದರೆ.. ಕುಮಾರಸ್ವಾಮಿಗೆ ಡ್ಯಾಮೇಜ್ ಹೆಚ್ಚು ಎಂಬ ಪರಿಸ್ಥಿತಿ ಇದೆ.
ಕಾರಣ.. ಆಗ ಸುಮಲತಾ ಪರ ಇದ್ದವರು.. ಜಗಳವಾಡಿಕೊಂಡಿದ್ದವರ ಮನಸ್ಸುಗಳು ಇನ್ನೂ ಒಂದಾಗಿಲ್ಲ. ಇತ್ತ ಜೆಡಿಎಸ್ʻನವರ ಪರಿಸ್ಥಿತಿಯೂ ಅಷ್ಟೆ. ಲೀಡರ್ʻಗಳು ಒಂದಾಗಿರಬಹುದು. ಕಾರ್ಯಕರ್ತರು ಲೀಡರುಗಳ ಹಾಗಲ್ಲ.



