ಎಲೆಕ್ಷನ್ ಎಂದ ಮೇಲೆ ವೋಟಿಂಗ್ ನಡೆಯಬೇಕು. ಆದರೆ.. ಚುನಾವಣೆ ಅಂದರೆ ಮತದಾನವೇ ನಡೆಯದೆ… ಅಭ್ಯರ್ಥಿಯೊಬ್ಬರು ವಿಜೇತರೆಂದು ಘೋಷಣೆಯಾಗುವುದು ಅಪರೂಪದಲ್ಲಿ ನಡೆಯುವ ಪ್ರಕರಣ. ಅಂತಾದ್ದೊಂದು ಅಪರೂಪ ಚುನಾವಣೆಗೊಂದು ನಡೆದರೆ ಅದೇ ಹೆಚ್ಚು. ಈ ಬಾರಿ ಗುಜರಾತಿನ ಸೂರತ್ ಕ್ಷೇತ್ರದಲ್ಲಿ ಅಂತಹ ಘಟನೆ ನಡೆದಿದೆ.
ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಗುಜರಾತ್‌ನ 26 ಸ್ಥಾನಗಳಲ್ಲಿ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ವಿಜಯಿ ಎಂದು ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ.
ಅರೆ.. ಇಡೀ ದೇಶಕ್ಕೆ ದೇಶವೇ ಚುನಾವಣೆ ಸಿದ್ಧರಾಗಿರುವಾಗ.. ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ವಿರೋಧಿಗಳೆಲ್ಲ ಒಗ್ಗಟ್ಟಾಗಿ ನಿಂತಿರುವಾಗ ಅವಿರೋಧವಾಗಿ ಆಯ್ಕೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಬಿಜೆಪಿಯ ಮುಖೇಶ್ ದಲಾಲ್ ವಿರುದ್ಧ ಕಾಂಗ್ರೆಸ್, ಬಿಎಸ್ʻಪಿ ಅಭ್ಯರ್ಥಿಗಳು ಕಣದಲ್ಲಿದ್ದರು. ಆಮ್ ಆದ್ಮಿ ಮೈತ್ರಿಯಲ್ಲಿರುವ ಕಾರಣ ಸ್ಪರ್ಧೆ ಮಾಡಿರಲಿಲ್ಲ. ಉಳಿದಂತೆ ಹಲವು ಪಕ್ಷೇತರರು ಒಟ್ಟಾರೆ 8 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಆದರೆ.. ಕೊನೆಗೆ ಮುಖೇಶ್ ಅವಿರೋಧವಾಗಿ ಆಯ್ಕೆಯಾದರು.
ಅವಿರೋಧ ಆಯ್ಕೆ ಹೇಗಾಯ್ತು..?
ಬಿಜೆಪಿಯ ವಿರುದ್ಧ ಕಾಂಗ್ರೆಸ್ಸಿನಿಂದ ನೀಲೇಶ್ ಕುಂಭಾಣಿ ಎಂಬುವವರು ಸ್ಪರ್ಧೆ ಮಾಡಿದ್ದರು. ಸಾಮಾನ್ಯವಾಗಿ ನಾಮಪತ್ರ ಸಲ್ಲಿಕೆ ವೇಳೆ ಕನಿಷ್ಠ ಮೂವರು ಸೂಚಕರು ಇರುತ್ತಾರೆ. ಅವರ ಸಹಿಯೂ ಇರುತ್ತದೆ. ಆದರೆ.. ನೀಲೇಶ್ ಕುಂಭಾಣಿ ಪರ ಸೂಚಕರಾಗಿ ಸಹಿ ಹಾಕಿದ್ದ ಮೂವರೂ ಕೂಡಾ.. ನಮ್ಮ ಸಹಿಯನ್ನು ನಕಲು ಮಾಡಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಅಷ್ಟೇ ಅಲ್ಲ, ನಾಮಪತ್ರ ಪ್ರಸ್ತಾವಕರದಲ್ಲಿ ಅಂದರೆ ಸೂಚಕರಲ್ಲಿ ಒಬ್ಬರನ್ನು ಕೂಡಾ ಆಯೋಗದ ಅಧಿಕಾರಿಯ ಎದುರು ಹಾಜರು ಪಡಿಸಲು ಆಗಲಿಲ್ಲ.
ಇದು ಕಾಂಗ್ರೆಸ್ಸಿಗೆ ಮೊದಲೇ ಗೊತ್ತಿತ್ತು. ಯಾವುದಕ್ಕೂ ಇರಲಿ ಎಂದು..ಸುರೇಶ್ ಪಡಸಾಲ ಎಂಬುವವರಿಂದ ನಾಮಪತ್ರ ಹಾಕಿಸಿತ್ತು. ಆದರೆ.. ಆತ ಕೂಡಾ ಸೂಕ್ತವಾಗಿ ನಾಮಪತ್ರ ಸಲ್ಲಿಸಿರಲಿಲ್ಲ. ಅವರ ನಾಮಪತ್ರವೂ ತಿರಸ್ಕೃತಗೊಂಡಿತು. ಅದಾದ ಮೇಲೆ ಉಳಿದಿದ್ದು ಬಿಎಸ್ʻಪಿ ಹಾಗೂ ಪಕ್ಷೇತರರು. ಅವರೆಲ್ಲರೂ ನಾಮಪತ್ರ ವಾಪಸ್ ಪಡೆದಿದ್ದ ಕಾರಣ ಬಿಜೆಪಿಯ ಮುಖೇಶ್ ಅವಿರೋಧವಾಗಿ ಆಯ್ಕೆಯಾದರು.
ಗುಜರಾತ್ ರಾಜ್ಯದ ಎಲ್ಲಾ 26 ಲೋಕಸಭಾ ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮೇ 7 ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 19ಕ್ಕೆ ಮುಗಿದಿತ್ತು. ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವುದಕ್ಕೆ ಏಪ್ರಿಲ್ 22 ಕೊನೆಯ ದಿನವಾಗಿತ್ತು. ಕಾಂಗ್ರೆಸ್ ನಾಯಕರ ಮಾತಿಗೆ ಮಣಿದು ಕೆಲವರು ನಾಮಪತ್ರ ವಾಪಸ್ ಪಡೆದಿದ್ದರೆ, ಕೆಲವರು ಬಿಜೆಪಿಗೆ ಬೆಂಬಲ ಘೋಷಿಸಿ ನಾಮಪತ್ರ ವಾಪಸ್ ಪಡೆದಿದ್ದರು.
ಮಾಜಿ ಪ್ರಧಾನಿಯ ಕ್ಷೇತ್ರ ಸೂರತ್ :
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಸೇಫ್ ಕ್ಷೇತ್ರವಾಗಿದ್ದ ಸೂರತ್ ನಲ್ಲಿ, ದೇಶದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಇಲ್ಲಿಂದ 5 ಬಾರಿ ಆಯ್ಕೆಯಾಗಿದ್ದರು. ಆದರೆ 1984ರ ನಂತರ ಇಲ್ಲಿ ಕಾಂಗ್ರೆಸ್ ಗೆದ್ದಿಲ್ಲ. 1989ರಿಂದ ನಡೆದ ಅಷ್ಟೂ ಚುನಾವಣೆಗಳಲ್ಲಿ ಇಲ್ಲಿ ಬಿಜೆಪಿಯೇ ಗೆಲ್ಲುತ್ತಿದೆ. ಈ ಬಾರಿಯೂ ಗೆದ್ದಿದೆ. ಸೂರತ್ ಲೋಕಸಭಾ ಕ್ಷೇತ್ರದಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲ 7 ಕ್ಷೇತ್ರಗಳಲ್ಲೂ ಬಿಜೆಪಿಯವರೇ ಶಾಸಕರು.



