ಬಿಜೆಪಿಯೊಳಗೇ ಬಿಜೆಪಿ ಉದ್ಭವವಾಗಿದೆ. ಬಿಜೆಪಿಯೊಳಗೇ ಬಿಜೆಪಿ ವಿರುದ್ಧ ಸಿಟ್ಟು, ಆಕ್ರೋಶದ ಧ್ವನಿ ಹೊರಹೊಮ್ಮುತ್ತಿದೆ. ಅವರು ಇವರ ವಿರುದ್ಧ.. ಇವರು ಅವರ ವಿರುದ್ಧ. ಚುನಾವಣೆಗೆ ಮೊದಲು ನಾವೇ ಬರುತ್ತೇವೆ ಎಂಬ ವಿಪರೀತ ಆತ್ಮವಿಶ್ವಾಸದಲ್ಲಿ ಒಬ್ಬರಿಗೊಬ್ಬರು ತುಳಿಯಲು, ಹಣಿಯಲು ಯತ್ನಿಸಿ ತಾವೂ ಸೋತರು. ತಮ್ಮವರನ್ನೂ ಸೋಲಿಸಿದರು. ತಮ್ಮ ಕೋಟೆಯನ್ನು ತಾವೇ ಕೆಡವಿಕೊಂಡರು. ಸೋತ ನಂತರವಾದರೂ ಬುದ್ದಿ ಕಲಿತರಾ ಎಂದು ನೋಡಿದರೆ ಹಾಗೇನೂ ಕಾಣುತ್ತಿಲ್ಲ. ಈಗಲೂ ಒಬ್ಬರಿಗೊಬ್ಬರು ಬಡಿದಾಡಿಕೊಳ್ಳುತ್ತಿದ್ದಾರೆ.
ಎಂಬಿ ಪಾಟೀಲ್ ಕೆಣಕಿದ ತಕ್ಷಣ ಪ್ರತಾಪ್ ಸಿಂಹ ಓಡಿಬಂದರು. ಆದರೆ ಬಂದೂಕಿನ ಗುರಿ ಬೇರೆಯದೇ ಕಡೆ ಇತ್ತು. ತಮ್ಮವರನ್ನು ಸೋಲಿಸಿದರು ಎನ್ನುವ ಆಕ್ರೋಶ ಹೊರಹಾಕುವಾಗ, ತಮ್ಮದೇ ಕ್ಷೇತ್ರದಲ್ಲಿ ಬಿಜೆಪಿಯ ಕೆಲವರಿಗೆ ಟಿಕೆಟ್ ತಪ್ಪಿಸಿದ್ದನ್ನು ಮರೆತೇಬಿಟ್ಟಿದ್ದರು ಪ್ರತಾಪ್ ಸಿಂಹ.
ವಿ.ಸೋಮಣ್ಣನವರಿಗೂ ಆಕ್ರೋಶ ಹುರಿಗಟ್ಟಿದೆ. ಹೆಮ್ಮರವಾಗಿದೆ. ಎರಡೂ ಕಡೆ ಸೋತ ನೋವಿನ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಟವೆಲ್ ಹಾಕಿದ್ದಾರೆ. ಇದೇ ಸೋಮಣ್ಣ ಎಲೆಕ್ಷನ್ನಿಗೆ ಮೊದಲು ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದರು. ಈಗಲೂ ಕಿಡಿ ಕಾರುತ್ತಿದ್ದಾರೆ. ಹಾಗೆ ಒಬ್ಬ ನಾಯಕನ ವಿರುದ್ಧ ಕಿಡಿ ಕಾರುತ್ತಿರುವ ಸೋಮಣ್ಣ ಅವರಿಗೆ ಇಡೀ ಪಕ್ಷವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಅಧ್ಯಕ್ಷನ ಹುದ್ದೆ ಬೇಕು.
ಆರ್.ಅಶೋಕ್ ಅವರ ಮಾತುಗಳ ಬಾಣ ಎಲ್ಲಿಂದ ಎಲ್ಲಿಗೋ ನಾಟುತ್ತಿವೆ. ಬಸನಗೌಡ ಪಾಟೀಲ ಯತ್ನಾಳ್ ಎಲೆಕ್ಷನ್ನಿಗೂ ಮೊದಲು ಯಡಿಯೂರಪ್ಪ ವಿರುದ್ಧ ಮುಗಿಬಿದ್ದಿದ್ದರು. ಎಲೆಕ್ಷನ್ ಮುಗಿದ ಮೇಲೆ ಬಸವರಾಜ ಬೊಮ್ಮಾಯಿ ವಿರುದ್ಧ ಸಿಡಿದೆದ್ದಿದ್ದಾರೆ.
ಸಿಪಿ ಯೋಗೀಶ್ವರ್ ಅವರಿಗೆ ಚನ್ನಪಟ್ಟಣದ ಸೋಲಿನ ಹಿಂದೆ ಹೊಂದಾಣಿಕೆ ರಾಜಕೀಯ ಕಾಣುತ್ತಿದ್ದರೆ, ಸಿಟಿ ರವಿ ಅವರಿಗೆ ಕೆಲವು ನಾಯಕರು ತಮ್ಮ ಪರ ಪ್ರಚಾರಕ್ಕೆ ಬರದಿದ್ದಕ್ಕೇ ತಾನು ಸೋತೆ ಎಂಬ ಸತ್ಯ ಅರಿವಾಗಿದೆ. ಆದರೆ, ಒಪ್ಪಿಕೊಳ್ಳುವ ಬದಲು ಹೂಂಕರಿಸುತ್ತಿದ್ದಾರೆ.
ಮುನಿರತ್ನ ಅವರದ್ದೂ ಇದೇ ಮಾತು. ಅವರು ಯಡಿಯೂರಪ್ಪ ಅವರನ್ನು ಭೀಷ್ಮನಿಗೆ ಹೋಲಿಸಿದ್ದಾರೆ. ರಮೇಶ್ ಜಿಗಜಿಣಗಿ ನೇರಾನೇರವಾಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 30-35 ಕ್ಷೇತ್ರಗಳಲ್ಲಿ ಪಕ್ಷದ ಸೋಲಿಗೆ ಇಂತಹ ಒಳೇಟುಗಳೇ ಕಾರಣವಾಯಿತು ಎನ್ನುವುದು ಬಿಜೆಪಿಯೊಳಗಿನ ಲೆಕ್ಕಾಚಾರ.
ವಿಚಿತ್ರವೆಂದರೆ ಎಲೆಕ್ಷನ್ನಿನ ಸಮಯದಲ್ಲಿ ಪಡಿತರ ಅಕ್ಕಿ ಕಡಿಮೆ ಮಾಡುವ ನಿರ್ಧಾರ, ಏಳೆಂಟು ತಿಂಗಳಿಂದ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ, ಡೈರಿಗಳಲ್ಲಿ ಕೊಡುತ್ತಿದ್ದ 5 ರೂ. ಸಬ್ಸಿಡಿ ಹಣ ನೀಡದೇ ಇರುವುದು, ಗುತ್ತಿಗೆದಾರರಿಗೆ ಹಣ ನೀಡದೇ ಇರುವುದು.. ಹೀಗೆ ತಾವೇ ಮಾಡಿದ ಪ್ರಮಾದಗಳ ಬಗ್ಗೆ ಮಾತನಾಡುತ್ತಲೇ ಇಲ್ಲ. ಅತ್ತ ಸರ್ಕಾರ ತಮ್ಮದೇ ಇದ್ದಾಗ ಕೆಲಸ ಮಾಡದೇ ಕೈಕಟ್ಟಿ ಕುಳಿತು, ಇತ್ತ ಚುನಾವಣೆ ಬಂದಾಗ ಯಾರೋ ಬಂದು ವೋಟ್ ಹಾಕಿಸುತ್ತಾರೆ ಎಂಬ ಭ್ರಮೆಗೆ ಬಿದ್ದ ಬಿಜೆಪಿ ನಾಯಕರಿಗೆ ಈಗ ಇದ್ದಕ್ಕಿದ್ದಂತೆ ಸೋಲಿಸಿದವರ ಬಗ್ಗೆ ಆಕ್ರೋಶ ಭುಗಿಲೆದ್ದಿದೆ.
ವಿಚಿತ್ರವೆಂದರೆ ಈ ಆಕ್ರೋಶದ ಬದಲು ಸೋಲಿನ ನಿಜವಾದ ಕಾರಣ ಹುಡುಕಿದರೆ, ಮತದಾರರು ತಮ್ಮನ್ನು ಬಿಟ್ಟು ಕಾಂಗ್ರೆಸ್ಸಿಗೆ ವೋಟ್ ಹಾಕಿದ್ದೇಕೆ ಎಂದು ಅರ್ಥ ಮಾಡಿಕೊಂಡರೆ ಬಿಜೆಪಿ ಮುಂದಿನ ಚುನಾವಣೆಯಲ್ಲಾದರೂ ಪ್ರಬಲ ಪೈಪೋಟಿ ಒಡ್ಡಬಹುದು. ಸದ್ಯದ ಪರಿಸ್ಥಿತಿ ನೋಡಿದರೆ, ಲೋಕಸಭೆ ಚುನಾವಣೆಯನ್ನೂ ಬಿಜೆಪಿ ಕಾಂಗ್ರೆಸ್ಸಿಗೆ ಅರ್ಪಣೆ ಮಾಡುತ್ತಿರುವಂತಿದೆ.



