ದೇಶದಲ್ಲಿ ಉಚಿತ ಭಾಗ್ಯಗಳಿಂದ ಅರ್ಥ ವ್ಯವಸ್ಥೆ ಹಳ್ಳ ಹಿಡಿಯುತ್ತದೆ ಎನ್ನುವ ಬಿಜೆಪಿ, ಚುನಾವಣೆಗಳಲ್ಲಿ ತಾನು ಮಾತ್ರ ಗ್ಯಾರಂಟಿಗಳನ್ನು ಘೋಷಿಸುತ್ತಲೇ ಇದೆ. ಟೀಕೆ ಮಾಡುವಾಗ ವಿರೋಧಿಸುವುದು ಹಾಗೂ ಪ್ರಣಾಳಿಕೆ ವಿಷಯ ಬಂದಾಗ.. ಮುಂದೆ ನಿಂತು ತಾನೇ ಘೋಷಿಸುವುದು ಎಲ್ಲ ರಾಜಕೀಯ ಪಕ್ಷಗಳ ಚಾಳಿಯೂ ಹೌದು. ಅದಕ್ಕೆ ಕಾಂಗ್ರೆಸ್ ಆಗಲೀ.. ಬಿಜೆಪಿಯಾಗಲೀ ಯಾವುದೂ ಹೊರತಲ್ಲ. ಈಗ ನೋಡಿ.. ಜಮ್ಮು ಕಾಶ್ಮೀರದಲ್ಲಿ ಈಗ ಚುನಾವಣೆ ಸಮಯ. ಆರ್ಟಿಕಲ್ 370 ರದ್ದಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ. ಶತಾಯಗತಾಯ ಗೆಲ್ಲಬೇಕು ಎಂದು ಪಣ ತೊಟ್ಟಿರುವ ಬಿಜೆಪಿ 25 ಸಂಕಲ್ಪಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಭಯೋತ್ಪಾದನೆ ನಿರ್ಮೂಲನೆ, ಪ್ರತ್ಯೇಕವಾದ ಮೂಲೋತ್ಪಾಟನೆ, ಮಹಿಳಾ ಆರ್ಥಿಕ ಸಶಕ್ತೀಕರಣ, ಸ್ವಾವಲಂಬನೆಗೆ ಆದ್ಯತೆ ನೀಡುವ ಅಂಶ ಒಳಗೊಂಡಂತೆ 25 ವಾಗ್ದಾನ ಮಾಡಿರುವ ಬಿಜೆಪಿ, ಮತ್ತೆಂದಿಗೂ ಸಂವಿಧಾನದ 370ನೇ ವಿಧಿ ಮರು ಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಘೋಷಣಾ ಪತ್ರದಲ್ಲಿ ಭರವಸೆ ನೀಡಿದೆ.
ಇದರ ಜೊತೆಯಲ್ಲಿ ಉಚಿತಗಳ ಗ್ಯಾರಂಟಿಯನ್ನೂ ಘೋಷಿಸಿದೆ. ಉಚಿತಗಳ ಸುರಿಮಳೆಯನ್ನೇ ಸುರಿಸಿದೆ.
ವರ್ಷಕ್ಕೆ ಒಂದು ಕುಟುಂಬಕ್ಕೆ 2 ಉಚಿತ ಗ್ಯಾಸ್ ಸಿಲಿಂಡರ್
ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 3 ಸಾವಿರ ರು. ಪ್ರಯಾಣ ಭತ್ಯೆ
ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲಿ ಮಹಿಳೆಯರಿಗೆ ವರ್ಷಕ್ಕೆ 18 ಸಾವಿರ ರು.
ರೈತರಿಗೆ ಶೇ.50 ರಿಯಾಯ್ತಿ ದರದಲ್ಲಿ ವಿದ್ಯುತ್
ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರಿಗೆ 2 ವರ್ಷಗಳವರೆಗೆ 10/10 ಸಾವಿರ ರೂಪಾಯಿಗಳ ಕೋಚಿಂಗ್ ಶುಲ್ಕ
ಪರೀಕ್ಷಾ ಕೇಂದ್ರಗಳಿಗೆ ಉಚಿತ ಪ್ರಯಾಣ ಸೌಲಭ್ಯ ಹಾಗೂ 1 ಬಾರಿ ಪರೀಕ್ಷಾ ಅರ್ಜಿ ಶುಲ್ಕ ಮರುಪಾವತಿ ಮಾಡುವುದು
‘ಪ್ರಗತಿ ಶಿಕ್ಷಾ ಯೋಜನಾ’ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ 3 ಸಾವಿರ ರು. ಧನಸಹಾಯ
ಗ್ರಾಮೀಣ ಭಾಗದಲ್ಲಿ ಪಿಯು ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
ವೃದ್ಧಾಪ್ಯ, ವಿಧವಾ ವೇತನ 1 ಸಾವಿರ ರೂಗಳಿಂದ 3 ಸಾವಿರ ರೂಪಾಯಿಗಳಿಗೆ ಏರಿಕೆ
ಬ್ಯಾಂಕ್ ಸಾಲದ ವಿಚಾರದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ರಾಜ್ಯ ಸರ್ಕಾರದ ಮೂಲಕ ಬಡ್ಡಿ ಕಟ್ಟಲು ನೆರವು
6 ಸಾವಿರ ರು. ಇರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಹಣ 10 ಸಾವಿರ ರೂಪಾಯಿಗೆ ಏರಿಕೆ (ಜಮ್ಮು ಕಾಶ್ಮೀರಕ್ಕೆ ಮಾತ್ರ)
ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆ ಮೊತ್ತ 2 ಲಕ್ಷ ರು.ಗಳಿಂದ 5 ಲಕ್ಷ ರು.ಗೆ ಏರಿಕೆ
ಅಟಲ್ ವಸತಿ ಯೋಜನೆಯ ಮೂಲಕ ಭೂರಹಿತ ಫಲಾನುಭವಿಗಳಿಗೆ ಉಚಿತವಾಗಿ ಭೂಮಿ
ಹೀಗೆ ಗ್ಯಾರಂಟಿಗಳ ಸುರಿಮಳೆಯೇ ಸುರಿದಿದೆ.
ಕರ್ನಾಟಕದಲ್ಲಿ ಗೃಹಲಕ್ಷ್ಮಿಯ ಮಾಸಿಕ 2 ಸಾವಿರ ರೂ.ಗೆ (ವಾರ್ಷಿಕ 24 ಸಾವಿರ) ವಿರೋಧಿಸುವ ಬಿಜೆಪಿ, ಜಮ್ಮು ಕಾಶ್ಮೀರದಲ್ಲಿ ಸ್ವಲ್ಪ ಕಡಿಮೆ ವಾರ್ಷಿಕ 18 ಸಾವಿರ ರೂ. ಘೋಷಿಸಿದೆ.
ದೇಶಾದ್ಯಂತ ಇರುವ ಕೃಷಿ ಸಮ್ಮಾನ್ ಯೋಜನೆಯ 6 ಸಾವಿರ ರೂ.ಗಳನ್ನು ಜಮ್ಮು ಕಾಶ್ಮೀರದವರಿಗೆ 10 ಸಾವಿರ ರೂ.ಗೆ ಏರಿಸುತ್ತದಂತೆ.
ಹೀಗೆ ಉಚಿತಗಳ ಸುರಿಮಳೆಯನ್ನೇ ಸುರಿಸುವ ಬಿಜೆಪಿ, ಕಾಂಗ್ರೆಸ್ ರಾಜ್ಯಗಳಲ್ಲಿನ ಸ್ಕೀಮುಗಳಿಂದ ಮಾತ್ರ ದೇಶದ ಅರ್ಥವ್ಯವಸ್ಥೆ ಹಾಳಾಗುತ್ತಿದೆ ಎಂದು ಟೀಕಿಸುವುದು ಅಪಹಾಸ್ಯವಾಗುತ್ತದಲ್ಲವೇ.. ಎಂಬ ಪ್ರಶ್ನೆಗೆ ಉತ್ತರ ಕೊಡಲ್ಲ. ಜಮ್ಮು ಕಾಶ್ಮೀರದಲ್ಲಿ ಈ ಎಲ್ಲದರ ಜೊತೆಗೆ ಯುವಕರಿಗೆ 5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿ: 1000 ಹೊಸ ಮೆಡಿಕಲ್ ಸೀಟು ಸೃಷ್ಟಿ . ಅಗ್ನಿವೀರರಿಗೆ ಜಮ್ಮು-ಕಾಶ್ಮೀರ ಪೊಲೀಸ್ ಹುದ್ದೆಗಳಲ್ಲಿ ಶೇ.20ರಷ್ಟು ಮೀಸಲಾತಿ • ಕಾಶ್ಮೀರಿ ಪಂಡಿತರಿಗೆ ಪುನರ್‌ವಸತಿ, ಹಾಳಾಗಿರುವ 100 ದೇವಸ್ಥಾನಗಳ ಮರು ಅಭಿವೃದ್ಧಿ ಸೇರಿದಂತೆ ಹಲವು ಉಚಿತ ಯೋಜನೆಗಳನ್ನು ಘೋಷಿಸಲಾಗಿದೆ. ಈ ಮೂಲಕ ಮತದಾರರ ಮನ ಗೆಲ್ಲುವ ತಂತ್ರ ರೂಪಿಸಲಾಗಿದೆ. ಪ್ರಣಾಳಿಕೆ ಬಿಡುಗಡೆ ಮಾಡಿದ ಅಮಿತ್ ಶಾ, ‘ಕಾಶ್ಮೀರದಲ್ಲಿ ಪರಿಚ್ಛೇದ 370ರ ಮರುಜಾರಿಗೆ ಬಿಜೆಪಿ ಅವಕಾಶ ನೀಡಲ್ಲ. ರಾಜ್ಯವನ್ನು ಭಯೋತ್ಪಾದನೆ ಮುಕ್ತ ಮಾಡಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವ ಎಂದು ಹೇಳಿದ್ದಾರೆ ಅಮಿತ್ ಶಾ.



