ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು. ಅದು ಪಕ್ಷದ ಕೆಲವರಿಗೆ ಒಪ್ಪಿಗೆ ಇಲ್ಲ. ಹೀಗಾಗಿ ಅವರು ಅಧ್ಯಕ್ಷರಾದಾಗಿನಿಂದಲೂ ಭಿನ್ನಮತವನ್ನು ಚಾಲ್ತಿಯಲ್ಲಿಟ್ಟಿರುವ ಒಂದು ಬಣ, ವಿಜಯೇಂದ್ರ ಹಠಾವೋ ಆಂದೋಲನ ನಡೆಸುತ್ತಲೇ ಇದೆ. ಯತ್ನಾಳ್ ಉಚ್ಚಾಟನೆಯ ನಂತರ ಸ್ವಲ್ಪ ತಣ್ಣಗಾಗಿರುವ ರೆಬಲ್ಸ್ ಟೀಂ, ಈ ಬಾರಿ ಇನ್ನೂ ಒಂದು ಹಂತ ಮುಂದೆ ಹೋಗಿದೆ. ಅದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಅವರ ಬಳಿಗೆ ಹೋಗಿ ದೂರು ನೀಡಿರುವುದು. ಈ ಬಾರಿಯ ರೆಬಲ್ಸ್ ಟೀಂಗೆ ಲೀಡರ್ ರಮೇಶ್ ಜಾರಕಿಹೊಳಿ.
ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿಯ ಭಿನ್ನಮತೀಯ ಬಣದ ನಾಯಕರು ಕಳೆದ ಎರಡು ಮೂರು ದಿನಗಳಿಂದ ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದರು. ಹಲವು ಕೇಂದ್ರ ನಾಯಕರನ್ನು ಭೇಟಿ ಮಾಡಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಜೊತೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ವಿಜಯೇಂದ್ರ ಅವರ ವೈಫಲ್ಯಗಳ ಪಟ್ಟಿಯನ್ನು ಮುಂದಿಟ್ಟ ಜಾರಕಿಹೊಳಿ ಟೀಂ, ವಿಜಯೇಂದ್ರ ಅವರೇ ಅಧ್ಯಕ್ಷರಾಗಿದ್ದರೆ, ಕರ್ನಾಟಕದಲ್ಲಿ ಬಿಜೆಪಿ ಸ್ವಯಂ ಶಕ್ತಿಯಿಂದ ಅಧಿಕಾರಕ್ಕೆ ಬರುವುದಿಲ್ಲ ಎಂದು ವಾದಿಸಿದರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್, ಸಂಸದ ಬಸವರಾಜ್ ಬೊಮ್ಮಾಯಿ ಅವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದರು. ಇವರಲ್ಲಿ ಅಗರ್‌ವಾಲ್ ಅವರು ಮಾಧ್ಯಮಕ್ಕೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ವಾರ್ನಿಂಗ್ ಕೂಡಾ ಕೊಟ್ಟಿದ್ದಾರೆ.
ವಿಷಯ ಇದ್ಯಾವುದೂ ಅಲ್ಲ. ಈ ರೆಬಲ್ಸ್ ಟೀಂ ಕುಮಾರಸ್ವಾಮಿ ಅವರಿಗೆ ದೂರು ನೀಡಿರುವುದು. ಏಕೆಂದೆ ರೆಬಲ್ಸ್ ಟೀಂನ ನಾಯಕರಿಗೆ ಬಿಜೆಪಿ ಹೈಕಮಾಂಡ್ ಮೀಟ್ ಮಾಡಲು ಆಗುತ್ತಲೇ ಇಲ್ಲ. ಅವರು ರೀಚ್ ಆಗಿರುವ ಹೈಕಮಾಂಡ್ ಲಾಸ್ಟ್ ಪಾಯಿಂಟ್ ಬಿಎಲ್ ಸಂತೋಷ್ ಅವರು ಮಾತ್ರ. ಮೋದಿ, ಅಮಿತ್ ಶಾ ಬಿಡಿ.. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಇರುವ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಸೇರಿದಂತೆ ಯಾವೊಬ್ಬ ನಾಯಕರ ಬಳಿಯೂ ದೂರು ಕೊಡುವುದಕ್ಕೆ ಆಗಿಲ್ಲ. ವಿವರ ನೀಡುವಷ್ಟು ಸಮಯ ಸಿಕ್ಕಿಲ್ಲ. ಹೀಗಾಗಿಯೇ ನೀವೇ ಹೈಕಮಾಂಡ್ ಜೊತೆ ಮಾತನಾಡಿ ಎಂದು ಜೆಡಿಎಸ್‌ನ ಕುಮಾರಸ್ವಾಮಿ ಬಳಿ ಕೇಳಿಕೊಂಡಿದ್ದಾರಂತೆ.
ನೋ.. ನೋ.. ಎಂದು ಒಂದೇ ಮಾತಿನಲ್ಲಿ ಖಂಡತುಂಡವಾಗಿ ಹೇಳಿದ ಕುಮಾರಸ್ವಾಮಿ ʻನಾವು ಎನ್‌ಡಿಎಯಲ್ಲಿ ಪಾಲುದಾರರೇ ಆಗಿರಬಹುದು. ಆದರೆ, ಪಕ್ಷದ ಅಂತರಿಕ ವಿಚಾರದಲ್ಲಿ ಮೂಗು ತೂರಿಸಬಾರದು. ಬಿಜೆಪಿ ಹೈಕಮಾಂಡ್ ಜೊತೆ ಒಪ್ಪಂದ ಮಾಡಿಕೊಂಡಿರುವುದು ಹೌದು. ಹಾಗಂತ ನಿಮ್ಮ ಪಕ್ಷದ ಪರ್ಸನಲ್ ಸಮಸ್ಯೆಗಳಿಗೆ ನಾವು ಮಾತನಾಡೋಕೆ ಆಗಲ್ಲ. ನಿಮ್ಮ ಪಕ್ಷದ ವಿಚಾರಕ್ಕೆ ನಾನು ಎಂಟ್ರಿ ಕೊಡಲ್ಲʼʼ ಎಂದು ಹೇಳಿದ್ದಾರಂತೆ.
ವಿಜಯೇಂದ್ರ, ಯಡಿಯೂರಪ್ಪ ಅವರ ಪುತ್ರ. ಹಾಗೇನಾದರೂ ಈ ವಿಚಾರಕ್ಕೂ ಎಂಟ್ರಿ ಕೊಟ್ಟರೆ ಯಡಿಯೂರಪ್ಪ ಮೇಲಿನ ದ್ವೇಷ ಎಂದು ಬಿಂಬಿತವಾಗುತ್ತದೆ. ಈಗಾಗಲೇ ಯಡಿಯೂರಪ್ಪ ವಿಚಾರದಲ್ಲಿ ವಚನ ಭ್ರಷ್ಟ ಎಂಬ ಹೆಸರು ಬಂದಾಗಿದೆ. ಹೀಗಿರುವಾಗ ಮತ್ತೊಮ್ಮೆ ಅಂತಹ ಕೆಟ್ಟ ಹೆಸರು ಪಡೆದುಕೊಳ್ಳುವುದು ಬೇಡ ಎಂಬ ಜಾಗ್ರತೆಯೂ ಕುಮಾರಸ್ವಾಮಿ ಅವರಿಗೆ ಇದೆ. ಹೀಗಾಗಿ ಕುಮಾರಣ್ಣ ಸೈಲೆಂಟ್. ರೆಬಲ್ಸ್ ಸೈಲೆಂಟ್ ಆಗಿ ವಾಪಸ್ ಬಂದಿದ್ದಾರೆ.



