ಕರ್ನಾಟಕ ರಾಜ್ಯದಲ್ಲಿ ‘ಶೇ. 63ರಷ್ಟು ಭ್ರಷ್ಟಾಚಾರವಿದೆ’ ಎಂದು ಇತ್ತೀಚೆಗೆ ನೀಡಿದ್ದ ಹೇಳಿಕೆ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸಿದ್ದರಾಮಯ್ಯ ಕೊಟ್ಟಿರುವ ಒಂದೇ ಒಂದು ಉತ್ತರಕ್ಕೆ ಬಿಜೆಪಿ ಥಂಡಾ ಹೊಡೆದು ಕೂತಿದೆ. ಯಾವಾಗ ಸಿದ್ದರಾಮಯ್ಯ ಈ ಉತ್ತರ ವಗಾಯಿಸಿದರೋ.. ಅದನ್ನೇ ಕಾಂಗ್ರೆಸ್ಸಿಗರು ರಿಪೀಟ್ ಮಾಡೋದಕ್ಕೆ ಶುರು ಮಾಡಿದರು. ಬಿಜೆಪಿ ಈಗ ಕೈ ಕಟ್ ಬಾಯ್ಮುಚ್ ಎಂಬ ಪರಿಸ್ಥಿತಿಗೆ ಬಂದು ತಿಂತಿದೆ. ಅದಕ್ಕೆ ತಕ್ಕಂತೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಶಾಂತಿ ಬಾವುಟ ಹಾರಿಸಿಬಿಟ್ಟಿದ್ದಾರೆ. ಜನರಲ್ ಸ್ಟೇಟ್ ಮೆಂಟ್ ಯಾರು ಬೇಕಾದರೂ ಕೊಡಬಹುದು. ಆದರೆ ವಾಸ್ತವ ಏನೆಂದರೆ..
ಈ ವಿವಾದ ಶುರುವಾಗಿದ್ದು ಇತ್ತೀಚೆಗೆ. ಕರ್ನಾಟಕದ ರಾಜ್ಯದ ಉಪಲೋಕಾಯುಕ್ತ ಜಸ್ಟೀಸ್ ಬಿ.ವೀರಪ್ಪ ಅವರು ಕರ್ನಾಟಕದಲ್ಲಿ ಶೇ.63 ರಷ್ಟು ಭ್ರಷ್ಟಾಚಾರ ಇದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ ಐದನೇ ಸ್ಥಾನದಲ್ಲಿದೆ ಎಂದು ಬೆಂಗಳೂರು ವಕೀಲರ ಸಂಘದ ಸಭಾಂಗಣದಲ್ಲಿ ಹೇಳಿದ್ದರು. ಅಷ್ಟು ಹೇಳಿದ್ದೇ ತಡ.. ಆರ್ ಅಶೋಕ್ ಛಂಗನೆದ್ದು ಕುಳಿತಿದ್ದರು. ಇದು ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ ಎಂದು ಆರೋಪಿಸಿದ್ದರು. ಆಗ ಸಿದ್ದರಾಮಯ್ಯ ಒಂದು ಸ್ಪಷ್ಟನೆ ಕೊಟ್ಟರು.
ಆ ಸ್ಪಷ್ಟನೆ ಪ್ರಕಾರ ಜಸ್ಟೀಸ್ ಬಿ.ವೀರಪ್ಪ ಅವರು ಹೇಳಿದ್ದು ಟ್ರಾನ್ಸಪರೆನ್ಸಿ ಇಂಡಿಯಾ ಇಂಟರ್ ನ್ಯಾಷನಲ್ ಸಂಘಟನೆಯು 2019ರ ನವಂಬರ್ ನಲ್ಲಿ ನೀಡಿದ್ದ ವರದಿಯ ಬಗ್ಗೆ ಮಾತನಾಡಿದ್ದಾರೆಯೇ ಹೊರತು, ಈಗಿನ ಬಗ್ಗೆ ಅಲ್ಲ. ವೀರಪ್ಪ ಅವರು ಕರ್ನಾಟಕದಲ್ಲಿ ಶೇ.63 ರಷ್ಟು ಭ್ರಷ್ಟಾಚಾರ ಇದೆ ಹೇಳಿದ 2019ರಲ್ಲಿ ಕರ್ನಾಟಕದಲ್ಲಿ ಇದ್ದಿದ್ದು ಬಿಜೆಪಿ ಸರ್ಕಾರವೇ ಹೊರತು, ಕಾಂಗ್ರೆಸ್ ಸರ್ಕಾರ ಅಲ್ಲ ಎಂದು ಉತ್ತರ ಕೊಟ್ಟಿದ್ದರು. ಇಷ್ಟಾಗುತ್ತಿದ್ದಂತೆಯೇ ಅಶೋಕ್ ಗಪ್ ಚುಪ್. ಬಿಜೆಪಿಯವರೂ ಗಪ್ ಚುಪ್.
ವಿಶೇಷತೆ ಎಂದರೆ ಇದಕ್ಕೆ ಉತ್ತರ ಕೊಡುವುದಕ್ಕೂ ಬಿಜೆಪಿಯವರಿಗೆ ಜ್ಞಾನವಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇದ್ದಿದ್ದೇನೋ ಹೌದು, 2019ರ ಜುಲೈ ಅಂತ್ಯದಲ್ಲಿ ಯಡಿಯೂರಪ್ಪ ಸಿಎಂ ಆದರು. ಅದೂವರೆಗೆ 2013ರಿಂದ 2018ರವರೆಗೆ ಅಧಿಕಾರ ನಡೆಸಿದವರು ಇದೇ ಸಿದ್ಧರಾಮಯ್ಯ. ಅದಾದ ನಂತರ ನಡೆದ ಚುನಾವಣೆಯಲ್ಲಿ ಗೆದ್ದು, ಆತುರಾತುರವಾಗಿ 6 ದಿನ ಸಿಎಂ ಆಘಿದ್ದ ಅವಧಿ ಬಿಟ್ಟರೆ, ಮತ್ತೆ 1 ವರ್ಷ 2 ತಿಂಗಳು ಅಧಿಕಾರದಲ್ಲಿದ್ದವರು ಕುಮಾರಸ್ವಾಮಿ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ. ಆದರೆ ಅದನ್ನೂ ಉತ್ತರ ಕೊಡಲಾಗದ ಸ್ಥಿತಿಗೆ ಬಂದಿದೆ ಬಿಜೆಪಿ.
ಅಫ್‌ಕೋರ್ಸ್.. ಅದಕ್ಕೆ ತಮ್ಮ ಅವಧಿಯಲ್ಲಿ ಕೇಳಿಬಂದ ಕೊರೊನಾ ಹಗರಣ, ಮಾಸ್ಕ್, ಸ್ಯಾನಿಟೈಸರ್, ಐಸಿಯುಗಳಲ್ಲಿ ಲಂಚ ಸ್ವೀಕರಿಸಿದ ಆರೋಪ, ಪ್ರತಿ ಇಲಾಖೆಯಲ್ಲಿ ಕನಿಷ್ಠ 40% ಕಮಿಷನ್ ಆರೋಪ, ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ, ಈಶ್ವರಪ್ಪ ರಾಜೀನಾಮೆ.. ಇತ್ಯಾದಿ ಇತ್ಯಾದಿ ಹಗರಣಗಳು ನೆನಪಾಗಿರಬಹುದು. ಆದರೆ ಕಾಂಗ್ರೆಸ್ಸಿಗರ ಧೈರ್ಯ ನೋಡಿ..
ಅವರು ವಾಲ್ಮೀಕಿ ಹಗರಣ, ಮುಡಾ ಹಗರಣ, ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ, ಅಧಿಕಾರಿಗಳ ಆತ್ಮಹತ್ಯೆ ಎಲ್ಲವನ್ನೂ ಸೈಡಿಗೆ ಇಟ್ಟು, ಒಂದು ಆರೋಪ ಬಂದ ಕೂಡಲೇ ಯಾವ ರೀತಿ ರಿಯಾಕ್ಟ್ ಮಾಡುತ್ತಿದ್ದಾರೆ ಎನ್ನುವುದು ಪೊಲಿಟಿಕಲ್ ಅಟ್ಯಾಕ್ ಹೇಗಿರಬೇಕು ಎನ್ನುವುದಕ್ಕೆ ಸಾಕ್ಷಿ. ಬಿಜೆಪಿಯವರಿಗೆ ಯಾವಾಗಲೂ ಪುಕಪುಕ.
ಅದಕ್ಕೆ ತಕ್ಕಂತೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ನಾನು ಯಾರನ್ನೂ ದೂಷಣೆ ಮಾಡಿಲ್ಲ. ಯಾವ ಪಕ್ಷವನ್ನೂ ದೂಷಣೆ ಮಾಡಿಲ್ಲ, ನಾನು ಯಾವ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ಹೇಳಿಲ್ಲ ಎನ್ನುವ ಮೂಲಕ ಶಾಂತಿ ಬಾವುಟ ಹಾರಿಸಿಬಿಟ್ಟಿದ್ದಾರೆ. ಜನರಲ್ ಸ್ಟೇಟ್ ಮೆಂಟ್ ಯಾರು ಬೇಕಾದರೂ ಕೊಡಬಹುದು.



