ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ದಿನದಿನಕ್ಕೂ ರಂಗೇರುತ್ತಿದೆ. ರಾಜ್ಯದಲ್ಲಿ ಚನ್ನಪಟ್ಟಣ ಜೊತೆ ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಿಗೂ ಉಪಚುನಾವಣೆ ನಡೆಯುತ್ತಿದೆ. ಆದರೆ ರಾಜ್ಯದ ಜನರ ಕಣ್ಣು ಕಿವಿ ಪಂಚೇಂದ್ರಿಯಗಳೆಲ್ಲ ಚನ್ನಪಟ್ಟಣದತ್ತಲೇ ನೆಟ್ಟಿವೆ. ಕಾರಣ, ಬಿಜೆಪಿಯಲ್ಲಿದ್ದ ಬಿಜೆಪಿ ಶಾಸಕ ಸಿಪಿ ಯೋಗೇಶ್ವರ್, ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವುದು. ನಿಖಿಲ್ ಕುಮಾರಸ್ವಾಮಿ, ತಂದೆ ಕುಮಾರಸ್ವಾಮಿ ತೆರವು ಮಾಡಿರುವ ಕ್ಷೇತ್ರದಲ್ಲಿ ಕ್ಯಾಂಡಿಡೇಟ್ ಆಗಿರುವುದು. ಅಂದಹಾಗೆ ನಿಖಿಲ್ ಕೇವಲ ಜೆಡಿಎಸ್ ಅಭ್ಯರ್ಥಿ ಅಷ್ಟೇ ಅಲ್ಲ, ನಿಖಿಲ್ ಗೆಲುವಿಗೆ ಟೊಂಕ ಕಟ್ಟಿ ನಿಂತಿರೋವ್ರಲ್ಲಿ ದೇವೇಗೌಡ, ಕುಮಾರಸ್ವಾಮಿ ಅಷ್ಟೇ ಅಲ್ಲ, ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಬಿಜೆಪಿ ನಾಯಕರೂ ಇದ್ದಾರೆ. ಆದರೆ, ಬಿಜೆಪಿ ಶಾಸಕರು, ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರು ರಾಮನಗರದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಈಗಾಗಲೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಎಸ್‌ಟಿ ಸೋಮಶೇಖರ್ ಅವರ ನಡೆ ಬಿಜೆಪಿ ನಾಯಕರಿಗೆ ಇರುಸುಮುರುಸು ಉಂಟು ಮಾಡಿದೆ. ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಬೆನ್ನಲ್ಲೆ ಎಸ್‌ಟಿ ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ತೀರಾ ಇತ್ತೀಚೆಗೆ ಬಿಜೆಪಿಯ ೮ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ವಿವಾದ ಸ್ಫೋಟಿಸಿದ್ದ ಎಸ್.ಟಿ.ಸೋಮಶೇಖರ್ ಅಧಿಕೃತವಾಗಿ ಬಿಜೆಪಿಯಲ್ಲಿದ್ದರೂ, ಕಾಂಗ್ರೆಸ್ ನಾಯಕರಂತೆಯೇ ವರ್ತಿಸುತ್ತಿದ್ದಾರೆ.
ಎಸ್.ಟಿ. ಸೋಮಶೇಖರ್ ಬಿಜೆಪಿಯ ಯಶವಂತಪುರ ಕ್ಷೇತ್ರದ ಶಾಸಕ. ಕಾಂಗ್ರೆಸ್ಸಿನಲ್ಲಿ ಇದ್ದಾಗ ಎಸ್.ಬಿ.ಎಂ ಜೋಡಿ (ಸೋಮಶೇಖರ್, ಭೈರತಿ ಬಸವರಾಜ್ ಮತ್ತು ಮುನಿರತ್ನ) ಎಂದೇ ಖ್ಯಾತಿ ಪಡೆದಿದ್ದರು. ಇದೀಗ ಮುನಿರತ್ನ ಕಾನೂನು ಕಟಕಟೆಯಲ್ಲಿದ್ದಾರೆ. ಜೈಲು ಸೇರಿ ಹೊರಬಂದಿದ್ದಾರೆ. ಭೈರತಿ ಬಸವರಾಜ್ ಬಿಜೆಪಿ ಪರವಾಗಲೀ, ಕಾಂಗ್ರೆಸ್ ವಿರುದ್ಧವಾಗಲೀ.. ಮಾತನಾಡುವುದನ್ನೇ ಬಿಟ್ಟಿದ್ದಾರೆ. ಇನ್ನು ಎಸ್.ಟಿ.ಸೋಮಶೇಖರ್ ಬಿಜೆಪಿಯಲ್ಲಿದ್ದರೂ, ಕಾಂಗ್ರೆಸ್ ಸೇರಿರುವ ಸಿಪಿ ಯೋಗೇಶ್ವರ್ ಪರ ಪ್ರಚಾರ ಮಾಡ್ತಿದ್ದಾರೆ.
ಅಂದಹಾಗೆ ಇದು ಟೆನ್ಷನ್ ಕೊಟ್ಟಿರುವುದು ನಿಖಿಲ್ ಕುಮಾರಸ್ವಾಮಿ ಅವರಿಗೆ. ಏಕೆಂದರೆ ನಿಖಿಲ್ ಗೆಲ್ಲಬೇಕು ಎಂದರೆ ಜೆಡಿಎಸ್ ಖಾಯಂ ವೋಟುಗಳಷ್ಟೇ ಸಾಕಾಗುವುದಿಲ್ಲ. ಬಿಜೆಪಿಯ ವೋಟುಗಳೂ ಬೇಕು. ಒಂದು ಲೋಕಸಭೆ ಹಾಗೂ ಒಂದು ವಿಧಾನಸಭೆ ಎಲೆಕ್ಷನ್ ಸೋತಿರುವ ನಿಖಿಲ್ ಅವರಿಗೆ ಇದು ಗೌರವದ ಪ್ರಶ್ನೆ. ಹೀಗಾಘಿ ದೇವೇಗೌಡರು, ಕುಮಾರಸ್ವಾಮಿಯೂ ಅಖಾಡಕ್ಕೆ ಧುಮುಕಿದ್ದಾರೆ.
ಅತ್ತ ವಿಶ್ರಾಂತಿಯಲ್ಲಿರುವ ಯಡಿಯೂರಪ್ಪ ಕೂಡಾ ಪ್ರಚಾರಕ್ಕೆ ಬಂದಿದ್ದಾರೆ. ವಿಜಯೇಂದ್ರ ಕೂಡಾ ಸುತ್ತುತ್ತಿದ್ದಾರೆ. ಆರ್.ಅಶೋಕ್ ಕೂಡಾ ಓಡಾಡುತ್ತಿದ್ದಾರೆ. ಇನ್ನು ಸೋಮಶೇಖರ್ ಅವರಿಗೆ ಚನ್ನಪಟ್ಟಣದಲ್ಲಿ ದೊಡ್ಡ ಮಟ್ಟದ ಹಿಡಿತ ಇಲ್ಲ ಎಂಬ ವಾದವೂ ಇದೆ. ಆದರೆ ಸೋಮಶೇಖರ್ ಒಳ್ಳೆಯ ಸಂಘಟನಕಾರ. ಕೆಲವೇ ದಿನಗಳಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ತಂತ್ರಗಾರಿಕೆ ಮಾಡುವ ಛಾತಿ ಇರುವ ನಾಯಕ. ಬಿಜೆಪಿಯಲ್ಲಿ ಸಚಿವರಾಗಿದ್ದ ಸೋಮಶೇಖರ್ ಅವರಿಗೆ ಕ್ಷೇತ್ರದ ಸ್ಥಳೀಯ ನಾಯಕರ ಸಂಪರ್ಕವಂತೂ ಇದೆ. ಇದು ನಿಖಿಲ್ ಅವರಿಗೆ ಎಫೆಕ್ಟ್ ಮಾಡುತ್ತಾ..? ಯೋಗೇಶ್ವರ್ ಅವರಿಗೆ ಲಾಭ ತಂದುಕೊಡುತ್ತಾ..? ಫಲಿತಾಂಶದ ದಿನ ಉತ್ತರ ಸಿಗಲಿದೆ.



