ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಅವರ ಮೇಲೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ಮನೆಗೇ ನುಗ್ಗಿದ್ದ ಗೂಂಡಾಗಳು, ಪೃಥ್ವಿ ಸಿಂಗ್ ಮೇಲೆ ಹಲ್ಲೆ ಮಾಡಿದ್ಧಾರೆ. ಹಲ್ಲೆಯ ಸಂಶಯ ಬಂದು ಪೃಥ್ವಿ ಸಿಂಗ್ ಅವರು ಡಿಸಿಪಿ ಜೊತೆ ಮಾತನಾಡಿದ್ದು, ಅದಾದ ನಂತರವೇ ಗೂಂಡಾಗಳು ಚಾಕು ಹಾಕಿರುವುದು ಗೂಂಡಾಗಳಿಗೆ ಪೊಲೀಸರ ಭಯ ಇಲ್ಲ ಎಂದು ಹೇಳುವಂತಾಗಿದೆ. ಹಲ್ಲೆ ಮಾಡಿದರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತಮ್ಮ ಚನ್ನರಾಜ ಹಟ್ಟಿಹೊಳಿ ಅವರ ಬೆಂಬಲಿಗರು ಎನ್ನಲಾಗಿದ್ದು, ಘಟನೆ ನಡೆದಾಗ ಚೆನ್ನರಾಜ ಹಟ್ಟಿಹೊಳಿ, ಚಾಕು ಇರಿತಕ್ಕೊಳಗಾಗಿರುವ ಪೃಥ್ವಿ ಸಿಂಗ್ ಮನೆ ಎದುರು ಕಾರಿನಲ್ಲಿ ಕುಳಿತಿದ್ದರು ಎನ್ನುವುದು ಆರೋಪ.
ಘಟನೆಯ ವಿವರ : ಹಲ್ಲೆಗೊಳಗಾಗಿರುವ ಬಿಜೆಪಿ ಮುಖಂಡ ಪೃಥ್ವಿರಾಜ್ ಸಿಂಗ್ ಅವರ ಪುತ್ರ ಜಸ್ವೀರ್ ಸಿಂಗ್ ಅವರ ಪ್ರಕಾರ ಸಂಜೆ 4.50 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಪ್ತ ಸಹಾಯಕ ಮತ್ತು ಅಂಗ ರಕ್ಷಕರು ಹೊರಗೆ ಕರೆದುಕೊಂಡು ಬಂದರು. ಆಗ ಫೋನ್ ಮಾಡಿ ಚನ್ನರಾಜ ಅವರು ಬೈಯುತ್ತಿದ್ದರು. ಹೊರಗೆ ಬಾ ಎಂದು ಧಮ್ಕಿ ಹಾಕಿದರು. ಹೊರಗೆ ಬರುತ್ತಿದ್ದಂತೆ ಐದಾರು ಜನರು ಕೂಡಿಕೊಂಡು ಕಟರ್ (ಚಾಕು) ನಿಂದ ಕೈ, ಹೊಟ್ಟೆ, ಬೆನ್ನಿಗೆ ಇರಿದು ಹಲ್ಲೆ ಮಾಡಿದ್ದಾರೆ. ರಕ್ತ ಬರುತ್ತಿತ್ತು. ಅಲ್ಲದೇ ಪ್ರಜ್ಞೆ ತಪ್ಪಿದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಸ್ಥಿತಿ ಹೇಗಿದೆ ಎಂಬುವುದು ಹಾಗೂ ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ. ತಂದೆಯವರೇ ಹೇಳಬೇಕು ಎಂದಿದ್ದಾರೆ.
ಅದಾದ ಮೇಲೆ ಪೃಥ್ವಿ ರಾಜ್ ಸಿಂಗ್ ಅವರೂ ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನ ಮನೆಗೆ ಬಂದ ಚನ್ನರಾಜ ಹಟ್ಟಿಹೊಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನ ಆಗಿಲ್ಲ: ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಎಂ.ಬಿ.ಜೀರಲಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭೇಟಿ ನೀಡಿ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಥ್ವಿಸಿಂಗ್ ನಮ್ಮ ರಾಜ್ಯ ಕಾರ್ಯಕಾರಣಿಯ ಸದಸ್ಯ, ಎಸ್ ಸಿ ಮೋರ್ಚಾ ಸದಸ್ಯರಾಗಿದ್ದು, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಅವರ ಗನ್ ಮ್ಯಾನ್ ಸದ್ಧಾಂ, ಪಿಎ ಸುಜಯ್ ಜಾಧವ್ ಸೇರಿ ಹಲ್ಲೆ ನಡೆಸಿದ್ದು, ತಕ್ಷಣವೇ ತಡ ಮಾಡದೇ ಕೇಸ್ ದಾಖಲಿಸಿ ಚನ್ನರಾಜ್ ಸೇರಿ ಎಲ್ಲರನ್ನೂ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಆರೋಪ ನಿರಾಕರಿಸಿರುವ ಲಕ್ಷ್ಮೀ ಹೆಬ್ಭಾಳ್ಕರ್, ಚನ್ನರಾಜ್ : ಘಟನೆಗೂ ನನ್ನ ತಮ್ಮನಿಗೂ ಸಂಬಂಧ ಇಲ್ಲ ಎಂದಿರುವ ಲಕ್ಷ್ಮೀ ಹೆಬ್ಬಾಳ್ಕರ್ ದುರದ್ದೇಶಪೂರ್ವವಾಗಿ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುವುದು ಪತ್ತೆ ಹಚ್ಚಲಿ ಎಂದಿದ್ದಾರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಬಿಜೆಪಿ ಮುಖಂಡನ ಮೇಲೆ ಚಾಕು ಇರಿತ ಪ್ರಕರಣ ಏನೇ ಇದ್ದರು ನಮ್ಮ ಪೊಲೀಸರು ನೋಡಿಕೊಳ್ಳುತ್ತಾರೆ. ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.



