ರಾಜ್ಯ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಸೋಲಿನ ಪರಾಮರ್ಶೆ ಕಾಂಗ್ರೆಸ್ಸಿನಲ್ಲಿ ಜೋರಾಗಿದೆ. ಕೇವಲ ಒಂದು ವರ್ಷದ ಹಿಂದೆ ಸಾಧಿಸಿದ್ದ ಭರ್ಜರಿ ಗೆಲುವು ಹಾಗೂ ಎಲ್ಲ 5 ಗ್ಯಾರಂಟಿಗಳ ಜಾರಿ ಆಗಿಯೂ.. ಕಾಂಗ್ರೆಸ್ʻಗೆ ನಿರೀಕ್ಷಿತ ಗೆಲುವು ಸಿಕ್ಕಿಲ್ಲ. ರಾಜ್ಯದಿಂದ ಕಾಂಗ್ರೆಸ್ ಸಂಸದರ ಸಂಖ್ಯೆ ಈ ಬಾರಿಯೂ ಎರಡಂಕಿ ದಾಟಿಲ್ಲ. ಸಚಿವರ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದರೂ.. ದೊಡ್ಡ ಲಾಭವೇನೂ ಆಗಿಲ್ಲ. ವಿಶೇಷ ಅಂದ್ರೆ, ರಾಜ್ಯದ 18 ಸಚಿವರ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಲೀಡ್ ತೆಗೆದುಕೊಂಡಿಲ್ಲ.
ಹಾಗೆ ನೋಡಿದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಪರ್ಸನಲ್ ಆಯ್ಕೆಗಳೇ ಸೋತಿವೆ. ಅವರದ್ದೇ ಕ್ಷೇತ್ರದಲ್ಲಿ ಸೋತಿವೆ. ಡಿಕೆಶಿ ಅವರ ಸೋದರ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಸೋತಿದ್ಧಾರೆ. ಮೈಸೂರಿನಲ್ಲಿ ಯದುವೀರ್ ಒಡೆಯರ್ ಎದುರು ಲಕ್ಷ್ಮಣ್ ಸೋತಿದ್ದಾರೆ.
ಹಲವು ಸಚಿವರು ತಮ್ಮ ಕ್ಷೇತ್ರದಲ್ಲೇ ಲೀಡ್ ಕೊಡಿಸಲು ಸಾಧ್ಯವಾಗಿಲ್ಲ. ಮಂಡ್ಯದ ಪ್ರಭಾವಿ ಸಚಿವ ಚಲುವರಾಯ ಸ್ವಾಮಿ, ತಮ್ಮ ಪುತ್ರನನ್ನೇ ಕಣಕ್ಕಿಳಿಸಿದ ಲಕ್ಷ್ಮೀ ಹೆಬ್ಭಾಳ್ಕರ್, ಗೃಹ ಸಚಿವ ಪರಮೇಶ್ವರ್, ಕೆಎನ್ ರಾಜಣ್ಣ, ರಾಮಲಿಂಗಾ ರೆಡ್ಡಿ, ಜಾರ್ಜ್, ಹ್ಯಾರಿಸ್, ಮಧು ಬಂಗಾರಪ್ಪ ಸೇರಿದಂತೆ ಒಟ್ಟಾರೆ 17 ಸಚಿವರು ತಮ್ಮ ಕ್ಷೇತ್ರದಲ್ಲೇ ತಮ್ಮ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸಲು ವಿಫಲರಾಗಿದ್ಧಾರೆ.
ವಿಧಾನಸಭೆ ಫಲಿತಾಂಶದಲ್ಲಿ ಜನರು ಕೈಹಿಡಿದಿದ್ದ ರೀತಿ, ಗ್ಯಾರಂಟಿಗಳ ಅನುಷ್ಠಾನ, ಬಿಜೆಪಿಯ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡಿರುವ ಅನ್ಯಾಯಗಳ ಪರಿಣಾಮ ರಾಜ್ಯದಲ್ಲಿ ಕನಿಷ್ಠ 16-17 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆಯಿತ್ತು. ನಿಮ್ಮ ಆಂತರಿಕ ಸಮೀಕ್ಷೆಯಲ್ಲೂ 12ರಿಂದ 14 ಸ್ಥಾನ ಗೆಲ್ಲುವುದಾಗಿ ಹೈಕಮಾಂಡ್‌ಗೆ ವರದಿ ನೀಡಿದ್ದಿರಿ. ಹೀಗಿದ್ದರೂ ಎರಡಂಕಿ ಸಾಧನೆಯನ್ನೂ ಮಾಡದಿರಲು ಕಾರಣವೇನು ಎಂದು ರಾಜ್ಯ ನಾಯಕರನ್ನು ಪ್ರಶ್ನಿಸಿದ್ದಾರೆ ರಾಹುಲ್ ಗಾಂಧಿ.
ನೀವು ಹೇಳಿದವರಿಗೆ ಟಿಕೆಟ್ ಕೊಟ್ಟಿದ್ದೇವೆ. ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲೆ ಇತ್ತು. ಆದರೂ ಗೆಲ್ಲಿಸುವಲ್ಲಿ ವಿಫಲವಾಗಿದ್ದೀರಿ. ಫಲಿತಾಂಶಕ್ಕೆ ಸಚಿವರೇ ಹೊಣೆ ಎಂದು ಸೂಚಿಸಿದ್ದರೂ ಸ್ವಕ್ಷೇತ್ರದಲ್ಲೇ ಪಕ್ಷಕ್ಕೆ ಲೀಡ್ ಕೊಡಿಸಿಲ್ಲ. ಹಾಗಿದ್ದರೆ ಮುಂದೇನು ಮಾಡಬೇಕು ನೀವೇ ತಿಳಿಸಿ ಎನ್ನುವ ಮೂಲಕ ರಾಹುಲ್ ಗಾಂಧಿ ಮುಂದಿನ ಎಚ್ಚರಿಕೆಯನ್ನೂ ಕೊಟ್ಟಿದ್ಧಾರೆ.
ಮೈತ್ರಿ ಕಾರಣದಿಂದ ಬಿಜೆಪಿ, ಜೆಡಿಎಸ್ ಮತಗಳು ಒಟ್ಟಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಹೇಳಲು ಹೊರಟ ಕೆ.ಎಚ್.ಮುನಿಯಪ್ಪ ಹಾಗೂ ದಿನೇಶ್ ಗುಂಡೂರಾವ್ ಅವರಿಗೆ ಮಾತಿನಲ್ಲೇ ಮೊಟಕಿದ ರಾಹುಲ್ ನೀವು ಏನೆಲ್ಲಾ ಮಾಡಿದ್ದೀರಿ ಎಂಬ ಬಗ್ಗೆ ವರದಿ ಇದೆ. ಸುಮ್ಮನೆ ಮೈತ್ರಿ ಕತೆ ಹೇಳಬೇಡಿ. ನಿಮ್ಮ ಕ್ಷೇತ್ರಗಳಲ್ಲಿ ಮಾತ್ರವೇ ಬಿಜೆಪಿ-ಜೆಡಿಎಸ್ ಮೈತ್ರಿ ಇತ್ತೇ? ಬೇರೆ ಸಚಿವರ ಕ್ಷೇತ್ರಗಳಲ್ಲಿ ಮೈತ್ರಿ ಇರಲಿಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡಿದ್ಧಾರೆ.
ಈ ನಡುವೆ ರಾಹುಲ್ ಗಾಂಧಿ ಸಭೆಗೂ ಮೊದಲೇ ಮಾತನಾಡಿರುವ ಚೆಲುವರಾಯ ಸ್ವಾಮಿ ಜಿಲ್ಲೆಯ ಮತದಾರರು ಈಗ ಗೆಲ್ಲಿಸಿರೊ ಅಭ್ಯರ್ಥಿಯ ಮೇಲೆ ಬಹಳ ನಿರೀಕ್ಷೆ ಇಟ್ಟಿರಬಹುದು. ನಮ್ಮಲ್ಲಿ ಏನು ತಪ್ಪು ಕಂಡುಹಿಡಿದಿದ್ದಾರೋ ಗೊತ್ತಿಲ್ಲ. ಚುನಾವಣೆ ಒಂದು ಸೈಡೇಡ್ ಆಗಿಹೋಗಿದೆ. . ಫಲಿತಾಂಶ ಒಂದು ಹಂತದಲ್ಲಿದ್ದರೆ ಮಾತ್ರ ವಿಮರ್ಶೆ ಮಾಡಬಹುದು. ಇದು ವಿಮರ್ಶೆ ಮಾಡಲಿಕ್ಕೆ ಸಾಧ್ಯವಾಗದಷ್ಟು ವ್ಯತ್ಯಾಸವಾಗಿದೆ. ಸಿಎಂ ಕೇಳಿದರೆ ನಾನು ರಾಜೀನಾಮೆಗೂ ಸಿದ್ಧ ಎಂದಿದ್ದಾರೆ.



