ರಾಜ್ಯ ಬಿಜೆಪಿಯಲ್ಲಿ ನಿಲ್ಲದ ಆಂತರಿಕ ಕಿತ್ತಾಟ ಜೋರಾಗಿಯೇ ನಡೆಯುತ್ತಿದೆ. ಸರ್ಕಾರದ ವಿರುದ್ಧ ಬಿಜೆಪಿ ರಣ ಕಹಳೆಯನ್ನೇನೋ ಊದಿದೆ. ಧರ್ಮಸ್ಥಳದಲ್ಲಿ ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶನ ಮಾಡಿ ಹೈಕಮಾಂಡ್ ಗೆ ಸಂದೇಶ ರವಾನೆ ಮಾಡಲು ಪ್ಲಾನ್ ಮಾಡಿರುವ ವಿಜಯೇಂದ್ರ, ಅದರಲ್ಲಿ ಮೊದಲ ಹಂತದ ಯಶಸ್ಸನ್ನೂ ಕಂಡಿದ್ಧಾರೆ. ಆದರೆ.. ಬಿಜೆಪಿಯಲ್ಲಿಯೇ ಹೊಟ್ಟೆ ಉರಿ ಶುರುವಾಗಿದೆ. ಕಾರಣ ಏನೆಂದು ನೋಡಿದರೆ ಆಶ್ಚರ್ಯವಾಗುವುದು ಸಹಜ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದಿರುವ ಬಿಜೆಪಿಯಲ್ಲಿ ವಿಜಯೇಂದ್ರ ಅಂಡ್ ಟೀಮ್ ಫುಲ್ ಆಕ್ಟೀವ್ ಆಗಿದೆ. ಆದರೆ.. ಧರ್ಮಸ್ಥಳ ಸಮಾವೇಶ ವಿಚಾರದಲ್ಲಿ ಬಿಜೆಪಿಯಲ್ಲಿ ಬಣ ಪಾಲಿಟಿಕ್ಸ್ ಬಾರಿ ಜೋರಾಗಿದೆ. ಈಗಾಗಲೇ ಧರ್ಮಸ್ಥಳ ಉಳಿಸಿ ಅಭಿಯಾನ ಮಾಡಿದ್ದ ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಸೇರಿದಂತೆ ಹಲವು ಶಾಸಕರು ಧರ್ಮಸ್ಥಳ ಪ್ರವಾಸ ಕೈಗೊಂಡಿದ್ದರು. ಇದೀಗ ಸೆಪ್ಟೆಂಬರ್ ಒಂದಕ್ಕೆ ಧರ್ಮಸ್ಥಳ ಉಳಿಸಿ ಬೃಹತ್ ಸಮಾವೇಶ ನಡೆಯುತ್ತಿದೆ. ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ನಡೆಸಲಿರುವ ವಿಜಯೇಂದ್ರ ಅಂಡ್ ಟೀಮ್, ರಾಜ್ಯಾದ್ಯಂತ ಕಾರ್ಯಕರ್ತರಿಗೆ ಧರ್ಮಸ್ಥಳಕ್ಕೆ ಬರುವಂತೆ ಕರೆ ಕೊಟ್ಟಿದೆ.
ಬಿಜೆಪಿಯಲ್ಲಿಯೇ ವಿರೋಧ ಏಕೆ..?
ಈ ಪ್ರಕರಣದಲ್ಲಿ ಮೊದಲ ದಿನಗಳಿಂದಲೂ ಹೈಪ್ ಕ್ರಿಯೆಟ್ ಮಾಡಿದ್ದ ವಿಜಯೇಂದ್ರ ಅವರಿಗೆ, ಪಕ್ಷದ ಯಂಗ್ ಕಾರ್ಯಕರ್ತರಿಂದ ಬಹುಪರಾಕ್ ಸಿಗುತ್ತಿದ್ದರೆ, ವಿಜಯೇಂದ್ರ ವಿರುದ್ಧ ಹಿರಿಯರ ಅಸಮಾಧಾನ ಭುಗಿಲೆದ್ದಿದೆ. ಯಾರ ಜತೆ ಚರ್ಚೆ ಮಾಡಿ ಸಮಾವೇಶ ಫಿಕ್ಸ್ ಮಾಡಿದ್ರು ಅನ್ನೋದು ಅವರ ಅಸಮಾಧಾನಕ್ಕೆ ಕಾರಣ. ಇವರು ಕರೆದ ತಕ್ಷಣ ಹೋಗಬೇಕಾ ಎಂದು ಕೆಲವು ಹಿರಿಯ ನಾಯಕರು ಪ್ರಶ್ನೆ ಮಾಡಿದ್ದಾರೆ. ಯುವ ಪಡೆಯ ಉತ್ಸಾಹದ ಪ್ರತಿಭಟನೆಗೆ ಹಿರಿಯರ ಅಸಮಾಧಾನ ಜೋರಾಗಿಯೇ ಇದೆ. ಹೈಕಮಾಂಡ್ ಏನೇ ಸೂಚನೆ ಕೊಟ್ರು ಬಿಜೆಪಿಯಲ್ಲಿ ಮುಗಿಯದ ಬಣ ಪಾಲಿಟಿಕ್ಸ್ ತಲೆನೋವಾಗಿರುವುದಂತೂ ನಿಜ. ಹಿರಿಯರ ವಿರೋಧದ ನಡುವೆಯೂ ಧರ್ಮಸ್ಥಳ ಸಮಾವೇಶ ಸಕ್ಸಸ್ ಮಾಡ್ತಾರಾ ವಿಜಯೇಂದ್ರ ಎಂಬ ಪ್ರಶ್ನೆಯೂ ಎದುರಾಗಿದೆ.
ವಿಜಯೇಂದ್ರ ಪಡೆಯ ವಾದವೇನು..?
ಕೆಲವು ಹಿರಿಯ ನಾಯಕರು ತಾವೂ ಹೋರಾಟ ಮಾಡಲ್ಲ. ಸಭೆ ಕರೆದು, ಪ್ರತಿಯೊಬ್ಬರ ಸಮಯ, ಮಹೂರ್ತವನ್ನು ಮ್ಯಾಚ್ ಮಾಡಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ.. ಹೋರಾಟಕ್ಕೆ ಹೊರಡುವ ಹೊತ್ತಿಗೆ ಇಷ್ಯಣೇ ಸತ್ತು ಹೋಗಿರುತ್ತೆ. ಇವರೂ ಹೋರಾಟ ಮಾಡುವುದಿಲ್ಲ. ಹೋರಾಟ ಮಾಡುವವರಿಗೆ ಬೆಂಬಲವನ್ನೂ ಕೊಡೋದಿಲ್ಲ. ಹೀಗಾದರೆ.. ಪಕ್ಷದ ಸಂಘಟನೆ ಕಷ್ಟ ಕಷ್ಟ ಎನ್ನುತ್ತಿದ್ದಾರೆ.
ಅವರ ವಾದ ಏನು ಎಂದರೆ.. ಧರ್ಮಸ್ಥಳ ವಿವಾದ ಶುರುವಾದಾಗ ವಿಜಯೇಂದ್ರ ಅವರು ಒಂದು ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಕಲಾಪ ನಡೆಯುವಾಗಲೂ ಸಭೆ ಕರೆದರೆ ಒಬ್ಬೊಬ್ಬರು ಒಂದೊಂದು ಸಮಯ, ಕಾರಣ ಕೊಟ್ಟು ಮುಂದೂಡುತ್ತಾ ಹೋದರು. ಕೊನೆಗೆ ಸದನದಲ್ಲಿ ಇಡೀ ಹೋರಾಟದ ಕ್ರೆಡಿಟ್ʻನ್ನು ಡಿಕೆ ಶಿವಕುಮಾರ್ ಒಂದೇ ಒಂದು ಹೇಳಿಕೆಯಿಂದ ಪಡೆದುಕೊಂಡರು. ವಿಲನ್ ಆಗಬೇಕಿದ್ದ ಸರ್ಕಾರ, ಹಿರಿಯ ನಾಯಕರ ಸಮಯ ಕೊಲ್ಲುವ ತಂತ್ರದಿಂದ ಹೀರೋ ಆಯ್ತು. ಈಗ ಪ್ರತಿಭಟನಾ ಸಮಾವೇಶಕ್ಕೂ ಕ್ಯಾತೆ ತೆಗೆಯುತ್ತಾ ಕುಳಿತರೆ ಏನ್ ಮಾಡೋಣ ಎಂದು ಪ್ರಶ್ನೆ ಮಾಡ್ತಿದ್ಧಾರೆ.



