ಬಿಜೆಪಿಯಲ್ಲೀಗ.. ಕೇವಲ ಎರಡು ಬಣಗಳಲ್ಲ. ಹತ್ತಾರು ಬಣಗಳಾಗಿ ಹೋಗಿವೆ. ಯತ್ನಾಳ್ ಅವರಿಂದ ಶುರುವಾದ ಭಿನ್ನಮತ, ಅದನ್ನು ಮಟ್ಟ ಹಾಕುವಲ್ಲಿ ವಿಫಲವಾದ ಹೈಕಮಾಂಡ್ ಉದಾಸೀನತೆ ಪಕ್ಷವನ್ನೇ ನುಂಗಿ ಹಾಕುತ್ತಿದೆ. ಅದರ ಫಲಿತಾಂಶವೂ ಸಿಕ್ಕಿದೆ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾ ವಣೆಯ ಸೋಲಿನ ಹಿನ್ನೆಲೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಬಿಜೆಪಿ ಬದಲಾವಣೆಗೆ ಸಿದ್ಧವಾಗುತ್ತಿದೆ. ಈ ಹೊಸ ಪಾಲಿಸಿಯಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ಇಬ್ಬರಿಗೂ ಮೂಗುದಾರ ಬಿಗಿ ಮಾಡಲು ಹೊರಟಿರುವಂತಿದೆ.
ವಿಜಯೇಂದ್ರಗೆ ಏನು ಪಾಠ..?
ಈಗಿರುವ ರಾಜ್ಯ ಪದಾಧಿಕಾರಿಗಳ ಪೈಕಿ ವಿಜಯೇಂದ್ರ ಅವರು ತಮ್ಮ ಆಪ್ತರಿಗೆ ಆದ್ಯತೆ ನೀಡಿ ಸಂಘಟನೆಯಲ್ಲಿ ಹೆಚ್ಚು ಅನುಭವ ಇರುವವರನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆರೋ ಪವಿದೆ. ಹೀಗಾಗಿ ಅಂಥವರನ್ನು ಕೈಬಿಟ್ಟು ಸಮರ್ಥರನ್ನು ಒಳಗೊಂಡು ತಂಡವನ್ನು ಕಟ್ಟಲು ನಿರ್ಧರಿಸಲಾಗಿದೆ.
ಈ ಸಂಬಂಧ ಬಿಜೆಪಿ ಹೈಕಮಾಂಡ್ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸೂಚಿಸಿದ್ದು, ಪದಾಧಿಕಾರಿಗಳ ಪೈಕಿ ಹಲವರನ್ನು ಕೈಬಿಟ್ಟು ಹಿರಿಯರು ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸಬಲ್ಲವರಿಗೆ ಅವಕಾಶ ಕಲ್ಪಿಸಲು ನಿರ್ಧಾರ ಮಾಡಲಾಗಿದೆ. ಜೊತೆಗೆ ಕೋರ್ ಕಮಿಟಿಯನ್ನು ಹೊಸದಾಗಿ ರಚಿಸಲು ಉದ್ದೇಶಿಸಲಾಗಿದೆ.
ಮುಂದಿನ ವರ್ಷದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ, ಬಿಬಿಎಂಪಿ ಚುನಾವಣೆ ಎದುರಾಗಲಿವೆ. ಅವುಗಳನ್ನು ಎದುರಿಸಲು ರಾಜ್ಯ ಬಿಜೆಪಿ ಮೆಗಾ ಆಪರೇಷನ್ ಆರಂಭಿಸಿದೆ. ಪ್ರಸ್ತುತ ಪಕ್ಷದ ಸಂಘಟನಾ ಪರ್ವದ ನಡೆಯುತ್ತಿದ್ದು, ಡಿಸೆಂಬರ್ 3ನೇ ವಾರಕ್ಕೆ ಅಂತ್ಯವಾಗಲಿದೆ. ಅದಾದ ಬಳಿಕ ಬಿಜೆಪಿ, ರಾಜ್ಯ ಬಿಜೆಪಿಗೆ ಹೊಸ ಸುಣ್ಣ ಬಣ್ಣ ಬಳಿಯೋಕೆ ರೆಡಿಯಾಗಿದೆ ಎನ್ನಲಾಗಿದೆ.
ಯತ್ನಾಳ್ ವಿರುದ್ಧವೂ ಕ್ರಮ..
ವಿಜಯೇಂದ್ರ ರಾಜ್ಯಾಧ್ಯಕ್ಷರಾದ ದಿನದಿಂದಲೂ ಪಕ್ಷ ಮತ್ತು ಪಕ್ಷದ ನಾಯಕತ್ವದ ವಿರುದ್ದ ಪದೇ ಪದೇ ಬಹಿರಂಗವಾಗಿ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹಾಗೂ ಮುಜುಗರ ಉಂಟು ಮಾಡುವಂಥ ಹೇಳಿಕೆ ಕೊಡುತ್ತಿರುವ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತವರ ಆಪ್ತ ನಾಯಕರ ಬಾಯಿಗೆ ಬೀಗ ಹಾಕುವ ಅಥವಾ ಶಿಸ್ತು ಕ್ರಮದ ಬಿಸಿ ಮುಟ್ಟಿಸುವ ಪ್ರಯತ್ನವೂ ನಡೆಯುವ ಸಾಧ್ಯತೆ ಇದೆ. ಆದರೆ ಅದಕ್ಕೆ ಪಕ್ಷದ ಮೂಲದಲ್ಲಿ ಭಿನ್ನಾಭಿಪ್ರಾಯವೂ ಇದೆ.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಕೋರ್ ಕಮಿಟಿಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಹಿಂದೆ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ರಚನೆಯಾಗಿದ್ದ ಕೋರ್ ಕಮಿಟಿಯೇ ಮುಂದುವರೆದಿದೆ. ಈ ಕಮಿಟಿಯನ್ನು ಹೊಸದಾಗಿ ರಚಿಸಿ ಪ್ರಮುಖ ನಿರ್ಧರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಕೆಲವು ಪದಾಧಿಕಾರಿಗಳನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡುವುದು
ಪಕ್ಷದಲ್ಲಿ ವಿಜಯೇಂದ್ರ ಆಪ್ತರಿಗೆ ಹೆಚ್ಚು ಅಧಿಕಾರವಿದೆ ಎಂಬ ಆರೋಪ ಸರಿಪಡಿಸಿ ಸಮರ್ಥರಿಗೆ ಹುದ್ದೆ ನೀಡುವುದು
ಜಾತಿ, ಪ್ರಾದೇಶಿಕ ಸಮತೋಲನಕ್ಕೆ ಒತ್ತು ನೀಡುವುದು
ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ ನಡೆಸಿ, ಪಕ್ಷವನ್ನು ಸಿದ್ಧಗೊಳಿಸುವುದು
‘ಬಂಡುಕೋರ’ ಯತ್ನಾಳ್ ತಂಡದ ಬಾಯಿಗೆ ಬೀಗ ಅಥವಾ ಶಿಸ್ತು ಕ್ರಮ ತೆಗೆದುಕೊಳ್ಳುವುದು.
ಯತ್ನಾಳ್ ವಿರುದ್ಧ ಕ್ರಮಕ್ಕೆ ಯತ್ನಾಳ್ ಬಾಯಿಯೇ ಭಯ..!
ಯತ್ನಾಳ್ ಬಾಯಿ ಭದ್ರ ಇಲ್ಲ. ನಾಲಗೆ ಹತೋಟಿಯಲ್ಲಿಲ್ಲ. ಅವರದ್ದು ಡೋಂಟ್ ಕೇರ್ ವ್ಯಕ್ತಿತ್ವ. ಹಾಗೇನಾದರೂ ಕ್ರಮ ತೆಗೆದುಕೊಳ್ಳೋಕೆ ಮುಂದಾದರೆ ಮೋದಿ, ಅಮಿತ್ ಶಾ ಅಂತಹ ನಾಯಕರನ್ನೂ ಹರಾಜು ಹಾಕುತ್ತಾರೆ. ಅದಕ್ಕಿಂತ ಸುಮ್ಮನಿರುವುದೇ ವಾಸಿ ಎಂದು ಹೇಳಿದವರೂ ಇದ್ದಾರೆ. ಹೀಗಾಗಿ ಯತ್ನಾಳ್ ವಿರುದ್ಧ ಆಕ್ಷನ್ ತೆಗೆದುಕೊಳ್ಳೋಕೆ ಹೈಕಮಾಂಡ್ ಕೂಡಾ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.



